More

    ನೇಹಾ ಪುಸ್ತಕ ಪ್ರೀತಿಗೆ ಶಿಕ್ಷಣ ಸಚಿವರ ಮೆಚ್ಚುಗೆ

    ಹಾವೇರಿ: ನಗರದ ಎಸ್.ಎಂ.ಎಸ್. ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ನೇಹಾ ಓಂಕಾರಣ್ಣನವರ ಲಾಕ್​ಡೌನ್ ಸಮಯದಲ್ಲಿ ಅನೇಕ ಸಾಹಿತಿಗಳು ಬರೆದ ಪುಸ್ತಕಗಳನ್ನು ಓದಿ ವಿಷಯ ಸಂಗ್ರಹಿಸಿಕೊಂಡು ಜ್ಞಾನ ವಿಕಾಸ ಪುಸ್ತಕ ಸಂಪಾದನೆ ಮಾಡಿ ಗಮನ ಸೆಳೆದಿದ್ದಾಳೆ.

    ನೇಹಾ ತಾನು ಸಂಪಾದಿಸಿದ ಪುಸ್ತಕವನ್ನು ಶಿಕ್ಷಣ ಸಚಿವರು ಬಿಡುಗಡೆಗೊಳಿಸಬೇಕು ಎಂದು ಇಚ್ಛಿಸಿ ಪುಸ್ತಕದ ಪಾರ್ಸಲ್ ಅನ್ನು ಶಿಕ್ಷಣ ಸಚಿವ ಸುರೇಶಕುಮಾರ್ ಅವರಿಗೆ ಕಳುಹಿಸಿದ್ದಳು. ಬಾಲಕಿಯ ಇಚ್ಛೆಯಂತೆ ಸಚಿವರು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಪುಸ್ತಕದ ಪಾರ್ಸಲ್ ತೆರೆವುಗೊಳಿಸುವ ಮೂಲಕ ಬಿಡುಗಡೆ ಮಾಡಿದ್ದಾರೆ. ಬಾಲಕಿಯ ಸಾಹಿತ್ಯ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿ ಪತ್ರ ಕಳುಹಿಸಿದ್ದಾರೆ.

    ಸಚಿವರ ಪತ್ರ: ಪ್ರಿಯ ವಿದ್ಯಾರ್ಥಿನಿ ನೇಹಾಳಿಗೆ ಶುಭ ಹಾರೈಕೆ. ನೀನು ಪ್ರೀತಿಯಿಂದ ಕಳುಹಿಸಿದ ಜ್ಞಾನದ ವಿಕಾಸ ಪುಸ್ತಕ ತಲುಪಿತು. ಚಿಕ್ಕ ವಯಸ್ಸಿನಲ್ಲಿಯೇ ಅಗಾಧ ಪ್ರತಿಭೆ ನಿನ್ನದಾಗಿದೆ ಎಂದು ಹೇಳಲು ಬಹಳ ಸಂತೋಷವಾಗುತ್ತದೆ. ದಿನಾಚರಣೆಗಳು, ಚುಟುಕುಗಳು, ಗಾದೆಗಳು, ಮಕ್ಕಳ ಕಥೆಗಳು, ಒಗಟುಗಳು ಸೇರಿ ಹಲವು ವಿಷಯಗಳನ್ನು ಒಳಗೊಂಡ ಜ್ಞಾನದ ವಿಕಾಸ ಪುಸ್ತಕ ತುಂಬ ಚೆನ್ನಾಗಿ ಮೂಡಿ ಬಂದಿದೆ. ಮಕ್ಕಳ ಜ್ಞಾನದ ವಿಕಾಸಕ್ಕೆ ನಿಜಕ್ಕೂ ಜ್ಞಾನವನ್ನು ಧಾರೆಯೆರೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಈಗಾಗಲೇ ನಿನ್ನ ಒಂದು ಕಥಾಸಂಕಲನ ಗುಂಡಿಯಲ್ಲಿ ಸಿಕ್ಕ ಗುಂಡಣ್ಣ ಬಿಡುಗಡೆಯಾಗಿದ್ದು, ಅದರ ಬೆನ್ನಲ್ಲೇ ಇನ್ನೊಂದು ಪುಸ್ತಕ ಹೊರ ಬಂದಿರುವುದು ನಿನ್ನ ಸಾಹಿತ್ಯಾಸಕ್ತಿಯನ್ನು ಪರಿಚಯಿಸಿದೆ. ವಿಶೇಷವಾಗಿ ಪುಸ್ತಕವನ್ನು ನನಗೆ ಅರ್ಪಿಸಿರುವುದಲ್ಲದೆ, ಕರೊನಾ ಹಿನ್ನೆಲೆಯಲ್ಲಿ ಈ ಪುಸ್ತಕದ ಪಾರ್ಸಲ್ ಒಡೆಯುವ ನಾನು ಇರುವಲ್ಲಿಂದಲೇ ಬಿಡುಗಡೆಗೊಳಿಸಬೇಕೆಂದು ಮಾಡಿರುವ ನಿನ್ನ ಮನವಿಗೆ ಮೂಕವಿಸ್ಮಿತನಾಗಿದ್ದೇನೆ. ನಾನು, ಅತ್ಯಂತ ಖುಷಿಯಿಂದ ಜ್ಞಾನದ ವಿಕಾಸ ಪುಸ್ತಕವನ್ನು ಬಿಡುಗಡೆ ಮಾಡಿದ್ದೇನೆ. ನಿನ್ನ ಈ ಸಾಹಿತ್ಯ ಕೃಷಿಗೆ ಪ್ರೋತ್ಸಾಹ ನೀಡಿದ ನಿನ್ನ ಅಪ್ಪ, ಅಮ್ಮ ಸೇರಿ ಎಲ್ಲರಿಗೂ ನನ್ನ ಕೃತಜ್ಞತೆಗಳು ಎಂದು ಸಚಿವರು ಬಾಲಕಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts