More

    ವಿಕ್ರಂ ಹಠಾತ್ ನಿಧನ ಹಿನ್ನೆಲೆಯಲ್ಲಿ ಕಿರ್ಲೋಸ್ಕರ್ ಕುಟುಂಬದ ಜತೆಗಿನ 2 ದಶಕಗಳ ಒಡನಾಟ ಮೆಲುಕು ಹಾಕಿದ ನಿರಾಣಿ

    ಬೆಂಗಳೂರು: ಭಾರತದ ವಾಹನೋದ್ಯಮದ ದಿಗ್ಗಜ, ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ಉಪಾಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್ ಇಂದು ಹೃದಯಾಘಾತದಿಂದ ಹಠಾತ್ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ. ಮುರುಗೇಶ ನಿರಾಣಿ, ಕಿರ್ಲೋಸ್ಕರ್ ಕುಟುಂಬದ ಜತೆಗಿನ ಒಡನಾಟ ಮೆಲುಕು ಹಾಕಿದ್ದಾರೆ.

    ವಿಕ್ರಮ್ ಕಿರ್ಲೋಸ್ಕರ್ ಅವರ ನಿಧನದಿಂದ ಉತ್ತಮ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ಕಿರ್ಲೋಸ್ಕರ್‌ ಕುಟುಂಬದ ಜತೆ ಸುಮಾರು ಎರಡು ದಶಕಗಳಿಗೂ ಹೆಚ್ಚು ಕಾಲದ ಒಡನಾಟವಿತ್ತು. 2010ರ ಜಾಗತಿಕ ಹೂಡಿಕೆದಾರರ ಸಮಾವೇಶದ ನಿಮಿತ್ತ ಅಮೆರಿಕಕ್ಕೆ ಭೇಟಿ ನೀಡಿದ್ದಾಗ ವಿಕ್ರಮ್ ಕಿರ್ಲೋಸ್ಕರ್ ಅವರೊಂದಿಗೆ ಹೆಚ್ಚು ಸಮಯ ಕಳೆಯಲು ಅವಕಾಶ ದೊರಕಿತ್ತು. ಇದರಿಂದ ನಾವು ಹೆಚ್ಚು ಆತ್ಮೀಯರಾದೆವು. ರಾಜ್ಯ ಮತ್ತು ದೇಶದ ಕೈಗಾರಿಕಾ ಪ್ರಗತಿ ಕುರಿತು ಸಾಕಷ್ಟು ವಿಚಾರ ವಿನಿಮಯ ಮಾಡಿದ್ದೇವೆ ಎಂದು ನಿರಾಣಿ ತಿಳಿಸಿದ್ದಾರೆ.

    ವಿಕ್ರಮ್ ಅವರು ಲಕ್ಷಾಂತರ ಜನರಿಗೆ ಉದ್ಯೋಗ ಒದಗಿಸಿದ್ದರು. ಕೈಗಾರಿಕೆಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮಗಳಿದ್ದರೂ ತಪ್ಪದೇ ಬರುತ್ತಿದ್ದರು. ಕೈಗಾರಿಕಾ ಬೆಳವಣಿಗೆ, ಪುನಶ್ಚೇತನ ಸೇರಿದಂತೆ ಉದ್ಯಮದ ಕುರಿತ ಅವರ ಕಳಕಳಿ ಅಪಾರವಾದುದು. ಅವರ ನಿಧನದಿಂದಾಗಿ ದೇಶ ಒಬ್ಬ ಉತ್ತಮ ಉದ್ಯಮಿಯನ್ನು ಕಳೆದುಕೊಂಡಿದೆ ಎಂದು ಕಂಬನಿ ಮಿಡಿದಿದ್ದಾರೆ.

    ಈ ತಿಂಗಳು ಬೆಂಗಳೂರು ಅರಮನೆಯಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ವಿಕ್ರಮ್ ಅವರನ್ನು ಭೇಟಿಯಾಗಿದ್ದೆ, ಅದೇ ನಮ್ಮ ಕಡೆಯ ಭೇಟಿ. ವೇದಿಕೆಯಲ್ಲಿ ವಿಕ್ರಮ್ ಅವರ ಪತ್ನಿ ಗೀತಾಂಜಲಿ ಅವರಿಗೂ ಆಹ್ವಾನ ನೀಡಿದ್ದರಿಂದ ನೀವು ಯಾಕೆ ಬಂದಿದ್ದೀರಿ ಎಂದು ನಾನು ತಮಾಷೆಯಾಗಿ ಕೇಳಿದೆ. ಆಗ ವಿಕ್ರಮ್ ಅವರು, ಗೀತಾಂಜಲಿ ಅಸ್ವಸ್ಥರಾಗಿದ್ದಾರೆ. ಆದರೆ ಈ ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸುತ್ತಿದ್ದಾರೆ ಅಂತ ಹೇಳಿದ್ದರು ಎಂದು ನಿರಾಣಿ ನೆನಪಿಸಿಕೊಂಡಿದ್ದಾರೆ.

    ವಿಕ್ರಮ್ ಕಿರ್ಲೋಸ್ಕರ್ ಅವರೊಂದಿಗಿನ ಮತ್ತೊಂದು ಪ್ರಸಂಗವನ್ನು ನೆನಪಿಸಿಕೊಂಡಿರುವ ಸಚಿವ ನಿರಾಣಿ, ಬಾಗಲಕೋಟೆ ಜಿಲ್ಲೆಯ ಮುಧೋಳವು ಸಕ್ಕರೆ ಸಮೃದ್ಧವಾಗಿರುವ ಪ್ರದೇಶ. ವಿಕ್ರಂ ಮತ್ತು ಅವರ ಕುಟುಂಬದವರು ಸಕ್ಕರೆ ಮತ್ತು ಸಂಬಂಧಿತ ಉದ್ಯಮಗಳ ಕುರಿತು ಅಧ್ಯಯನ ಮಾಡಲು ಪಟ್ಟಣಕ್ಕೆ ಭೇಟಿ ನೀಡಲು ಬಯಸಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ ಎಂದು ವಿಷಾದಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts