More

    ಅಧಿಕಾರ ಹಸ್ತಾಂತರಿಸದ್ದಕ್ಕೆ ಸಚಿವ ಮಂಕಾಳ ವೈದ್ಯ ಗರಂ

    ಭಟ್ಕಳ: ತಾಲೂಕಿನ ತಹಸೀಲ್ದಾರ್ ಕಚೇರಿಯಲ್ಲಿ ವರ್ಗಾವಣೆಯಾದರೂ, ನಿವೃತ್ತಿ ಹೊಂದಿದರೂ ಅಧಿಕಾರ ಚಲಾಯಿಸುತ್ತಿರುವುದನ್ನು ಕಂಡು ಸಚಿವ ಮಂಕಾಳ ವೈದ್ಯ ಅವರು ತಹಸೀಲ್ದಾರ್ ಮೇಲೆ ಕೆಂಡಾಮಂಡಲರಾದರು.

    ಪಟ್ಟಣದ ತಾಲೂಕು ಆಡಳಿತ ಕಚೇರಿಯಲ್ಲಿ ಮಂಗಳವಾರ ಜನಸ್ಪಂದನ ಸಭೆ ಆಯೋಜಿಸಲಾಗಿತ್ತು. ಇದಕ್ಕೂ ಮುಂಚೆ ಸಚಿವ ಮಂಕಾಳ ವೈದ್ಯ ಅವರು ಅಧಿಕಾರಿಗಳ ಕಾರ್ಯವೈಖರಿ ಪರಿಶೀಲಿಸಲು ಟೇಬಲ್ ಬಳಿ ಸ್ವತಃ ಅವರು ತೆರಳಿದರು. ಈ ವೇಳೆ ವಿಲೇವಾರಿ ಆಗದ ಕಡತಗಳನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ನಿಗದಿತ ಸಮಯದಲ್ಲಿ ಕಡತಗಳು ವಿಲೇವಾರಿ ಆಗದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಬಳಿಕ ಸಬ್ ರಿಜಿಸ್ಟಾರ್ ಕಚೇರಿ, ಖಜಾನೆ ಇಲಾಖೆಗೆ ತೆರಳಿ ಪರಿಶೀಲನೆ ನಡೆಸಿದರು. ಬಳಿಕ ಭೂಮಾಪನ ಇಲಾಖೆಗೆ ತೆರಳಿ ನಗರವ್ಯಾಪ್ತಿಯಲ್ಲಿ ಡ್ರೋನ್ ಸರ್ವೆ ನಡೆಸಲು ಆದೇಶ ನೀಡಿದರು.

    ಕಂದಾಯ ಇಲಾಖೆ ಹಲವು ಮಹತ್ವದ ದಾಖಲೆಗಳು ಅಧಿಕಾರಿಗಳ ಕಪಾಟಿನಲ್ಲಿ ಕೊಳೆಯುತ್ತಾ ಬಿದ್ದಿರುವುದನ್ನು ಗಮನಿಸಿದ ಸಚಿವರು, ಕೆಲಸ ಮುಗಿದ ಕೂಡಲೆ ಇದನ್ನು ರೆಕಾರ್ಡ್ ರೂಮ್‌ಗೆ ಕಳುಹಿಸಬೇಕು. ಇಷ್ಟು ಸಮಯವಾದರೂ ಏಕೆ ಇನ್ನೂ ಹಸ್ತಾಂತರಿಸಿಲ್ಲ ಎಂದು ಸಿಬ್ಬಂದಿ ಮೇಲೆ ಹರಿಹಾಯ್ದರು.
    ಕಂದಾಯ ಇಲಾಖೆಯಲ್ಲಿ 15 ವರ್ಷಗಳಿಂದ ಇದೇ ಸಿಬ್ಬಂದಿ ಇದ್ದಾರೆ. ಅವರು ಜನರಿಗೆ ಸ್ಪಂದಿಸುತ್ತಿಲ್ಲ. ಬಡವರನ್ನು ತುಚ್ಛವಾಗಿ ನೋಡುವುದಲ್ಲದೆ, ಅವರನ್ನು ಸತಾಯಿಸಲಾಗುತ್ತಿದೆ ಎಂದು ಆರ್‌ಟಿಐ ಕಾರ್ಯಕರ್ತ ನಾಗೇಶ ನಾಯ್ಕ ಹೆಬಳೆ ಅವರು ಸಿಬ್ಬಂದಿ ಹೆಸರು ಪ್ರಸ್ತಾಪ ಮಾಡಿ, ಕೂಡಲೆ ವರ್ಗಾವಣೆ ಮಾಡಿ ಎಂದು ಆಗ್ರಹಿಸಿದರು.

    ನೂರಾರು ಜನರು ಸಚಿವರಿಗೆ ತಮ್ಮ ಅಹವಾಲು ಸಲ್ಲಿಸಿದರು. ಕೆಲವು ಅಹವಾಲುಗಳಿಗೆ ಸ್ಥಳದಲ್ಲೆ ಪರಿಹಾರ ನೀಡಲಾಯಿತು. ಎಸಿ ಡಾ, ನಯನಾ, ತಹಸೀಲ್ದಾರ್ ತಿಪ್ಪೇಸ್ವಾಮಿ, ಇಒ ಪ್ರಭಾಕರ ಚಿಕ್ಕನಮನೆ, ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.

    ಓಡೋಡಿ ಬಂದು ಚಾರ್ಜ್ ಕೊಟ್ಟ ಭೂಮಿ ಕೇಂದ್ರದ ಸಿಬ್ಬಂದಿ

    ಭೂಮಿ ಕೇಂದ್ರದ ಸಿಬ್ಬಂದಿ ತುಳಸಿದಾಸ ದೇವಾಡಿಗ ಅವರಿಗೆ ವರ್ಗಾವಣೆಯಾಗಿ ಈಗಾಗಲೆ 6 ವರ್ಷ ಕಳೆದಿದೆ. ಆದರೂ, ಅವರು ಆ ನಂತರ ಬಂದ ಸಿಬ್ಬಂದಿಗೆ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಕೊಟ್ಟಿಲ್ಲ ಎನ್ನುವುದನ್ನು ಅರಿತ ಸಚಿವ ಮಂಕಾಳ ವೈದ್ಯ, ಅವರನ್ನು ಕರೆ ಮೂಲಕ ಸಂಪರ್ಕಿಸಿದರು. ಸಂಜೆಯೊಳಗೆ ಬಂದು ಚಾರ್ಜ್ ನೀಡಿಲ್ಲ ಎಂದಾದರೆ ಅಮಾನತು ಮಾಡಲಾಗುವುದು ಎಂದು ಎಚ್ಚರಿಸಿದರು. ಹೀಗಾಗಿ, ಓಡೋಡಿ ಬಂದ ತುಳಸಿದಾಸ ದೇವಾಡಿಗ ಸಂಜೆ ಹೊತ್ತಿಗೆ ಅಧಿಕಾರ ಹಸ್ತಾಂತರ ಮಾಡಿದ್ದಾರೆ. ದಾಖಲೆ ಕೊಠಡಿಯ ವಿ. ಆರ್. ನಾಯ್ಕ ನಿವೃತ್ತಿ ಹೊಂದಿದ್ದರೂ, ಅಧಿಕಾರ ಬಿಟ್ಟು ಕೊಟ್ಟಿಲ್ಲ ಏಕೆ ಎಂದು ತಹಸೀಲ್ದಾರ್ ತರಾಟೆಗೆ ತೆಗೆದುಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts