More

    ಅದೃಷ್ಟದ ಕ್ಷೇತ್ರಕ್ಕೆ ಮತ್ತೆ ಮಂತ್ರಿಗಿರಿ ಪಟ್ಟ

    ಹಿರಿಯೂರು: ದಕ್ಷಿಣ ಕಾಶಿ ಖ್ಯಾತಿಯ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರೆ ಮಂತ್ರಿ ಸ್ಥಾನ ಖಚಿತ ಎಂಬ ನಂಬಿಕೆಯನ್ನು 2 ನೇ ಬಾರಿ ಡಿ. ಸುಧಾಕರ್ ನಿಜ ಮಾಡಿದ್ದಾರೆ.

    ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲೆಯಲ್ಲಿ ಯಾರಿಗೆ ಸಚಿವ ಸ್ಥಾನ ಒಲಿಯಲಿದೆ ಎಂಬ ಕುತೂಹಲಕ್ಕೆ ತೆರೆಬಿದ್ದಿದೆ.

    2004 ರಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಮೊದಲ ಬಾರಿಗೆ ವಿಧಾನ ಸಭೆ ಪ್ರವೇಶಿಸಿ, 2008ರಲ್ಲಿ ಹಿರಿಯೂರಿನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಮೊದಲ ಯತ್ನದಲ್ಲೇ ಮಂತ್ರಿಯಾಗಿದ್ದು ಇತಿಹಾಸ.

    2013ರಲ್ಲಿ ಮರಳಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಸುಧಾಕರ್ ಹ್ಯಾಟ್ರಿಕ್ ಗೆಲುವಿನ ಓಟಕ್ಕೆ 2018ರ ಚುನಾವಣೆಯಲ್ಲಿ ಪೂರ್ಣಿಮಾ ಬ್ರೇಕ್ ಹಾಕಿದ್ದರು.

    ಹಿರಿಯೂರು ಕ್ಷೇತ್ರವನ್ನು ಪ್ರತಿನಿಧಿಸಿದ ಬಹುತೇಕರು ಸಚಿವರಾದ ಉದಾಹರಣೆಗಳಿವೆ. ಹೀಗಾಗಿ ಇದನ್ನು ಅದೃಷ್ಟದ ಕ್ಷೇತ್ರವೆಂದೇ ಕರೆಯಲಾಗುತ್ತದೆ. ಮುತ್ಸದ್ದಿ ರಾಜಕಾರಣಿ ಡಿ.ಮಂಜುನಾಥ್, ಕೆ.ಎಚ್.ರಂಗನಾಥ್ ಅವರು ಪ್ರತಿ ಸರ್ಕಾರದಲ್ಲಿ ಸಚಿವರಾಗಿದ್ದರು.

    ಸುಧಾಕರ್ ಹಾದಿ:

    2008ರಲ್ಲಿ ಬಿಎಸ್‌ವೈ ನೇತೃತ್ವದ ಸರ್ಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 2013 ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದರೂ ಸಚಿವ ಸ್ಥಾನದ ಅವಕಾಶ ಸಿಕ್ಕಿರಲಿಲ್ಲ.

    2018ರ ಚುನಾವಣೆಯಲ್ಲಿ ಸೋತ ನಂತರ ಕ್ಷೇತ್ರದಲ್ಲಿ ಸಕ್ರಿಯವಾಗಿ ಪಕ್ಷ-ಕಾರ್ಯಕರ್ತರ ಸಂಘಟನೆ, ಕೆಪಿಸಿಸಿ ನೀಡಿದ ಟಾಸ್ಕ್‌ಗಳನ್ನು ಯಶಸ್ವಿಗೊಳಿಸಿದ್ದರು.

    ಡಿಜಿಟಲ್ ಸದಸ್ಯತ್ವ ಅಭಿಯಾನದಲ್ಲಿ ರಾಜ್ಯಕ್ಕೆ ನಂ.1 ಸ್ಥಾನ, ಭಾರತ್ ಜೋಡೋ, ಬಾಬು ಜಗಜೀವನರಾಂ ರಾಜ್ಯ ಮಟ್ಟದ ಜಯಂತಿ, ಪ್ರಜಾಧ್ವನಿ ಯಾತ್ರೆ, ಪ್ರಿಯಾಂಕಾ ಗಾಂಧಿ ರೋಡ್ ಶೋ ಯಶಸ್ಸಿಗೆ ಶಕ್ತಿ ಮೀರಿ ಶ್ರಮಿಸಿದ್ದರು.\

    ಪಕ್ಷ ನಿಷ್ಠೆ, ತನ್ನ ಜಾತಿ ಬಲ ಇಲ್ಲದ ಕ್ಷೇತ್ರದಲ್ಲಿ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಬಲ ಅಭ್ಯರ್ಥಿಗಳನ್ನು ಸೋಲಿಸಿ, 92 ಸಾವಿರ ಮತ ಪಡೆದು ಗೆಲುವು ಸಾಧಿಸಿದ್ದು ಮಂತ್ರಿಗಿರಿ ಸಿಗಲು ಪ್ರಮುಖ ಕಾರಣ ಎನ್ನಲಾಗಿದೆ.
    ಡಿಸಿಎಂ ಡಿ.ಕೆ.ಶಿವಕುಮಾರ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಸುಧಾಕರ್ ಅವರ ಪಕ್ಷ ನಿಷ್ಠೆ, ಸಂಘಟನೆ, ಪಕ್ಷ ನೀಡಿದ ಜವಾಬ್ದಾರಿಯನ್ನು ನಿಭಾಯಿಸಿದ್ದು, ತನ್ನ ಮೆಚ್ಚಿನ ಶಿಷ್ಯನಿಗೆ ಸಚಿವ ಸ್ಥಾನ ಕೊಡಿಸಲು ಎಐಸಿಸಿ-ಸಿಎಂ ಸಿದ್ದರಾಮಯ್ಯ ಜತೆಗಿನ ಹಗ್ಗ-ಜಗ್ಗಾಟದಲ್ಲಿ ಡಿಕೆಶಿ ಕೊನೆಗೂ ಯಶಸ್ವಿಯಾದರು.

    ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ಪಕ್ಷ-ಕಾರ್ಯಕರ್ತರ ಸಂಘಟನೆ, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮೊದಲ ಆದ್ಯತೆಯಾಗಿದೆ, ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸರ್ವ ಸ್ಪರ್ಶಿ ಆಡಳಿತ ನೀಡಲಿದೆ. ಹಿರಿಯೂರಿನ ಜನರ ಪ್ರೀತಿ-ವಿಶ್ವಾಸಕ್ಕೆ ಎಂದಿಗೂ ಚಿರಋಣಿ
    ಡಿ.ಸುಧಾಕರ್, ಯೋಜನೆ-ಮೂಲ ಸೌಕರ್ಯ ಖಾತೆ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts