More

    ವಿಸ್ಟ್ರಾನ್ ದಾಂಧಲೆ ನಷ್ಟದ ಅಂದಾಜು ಆಗಿಲ್ಲ : ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್ ಮಾಹಿತಿ

    ಕೋಲಾರ : ವಿಸ್ಟ್ರಾನ್ ಕಂಪನಿ ದಾಂಧಲೆ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮದ ಜತೆಗೆ ಎಲ್ಲ ಕೈಗಾರಿಕೆಗಳ ಮುಖ್ಯಸ್ಥರ ಸಭೆ ಕರೆದು ಜಿಲ್ಲಾಡಳಿತದಿಂದ ನಿರ್ದೇಶನ ಕೊಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್. ನಾಗೇಶ್ ಹೇಳಿದರು.

    ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಘಟನೆ ನಡೆದ ಶನಿವಾರವೇ ಕಂಪನಿಗೆ ಭೇಟಿ ನೀಡಿ ಆಡಳಿತ ಮಂಡಳಿ ಜತೆ ಚರ್ಚಿಸಲಾಗಿದೆ. 1500 ಕಾಯಂ ಸಿಬ್ಬಂದಿಗೆ ಕಂಪನಿಯೇ ವೇತನ ಪಾವತಿಸಿದರೆ 10,000 ಸಿಬ್ಬಂದಿಯನ್ನು 6 ಏಜೆನ್ಸಿಗಳ ಮೂಲಕ ಪಡೆದಿದೆ. 8 ಗಂಟೆ ಕೆಲಸ ಹಾಗೂ ಹೆಚ್ಚುವರಿ 4 ಗಂಟೆಗೆ ದುಪ್ಪಟ್ಟು ವೇತನ ನೀಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಎಸ್ಸೆಸ್ಸೆಲ್ಸಿ, ಪದವಿ ವಿದ್ಯಾರ್ಹತೆ ಹೊಂದಿದ ನೌಕರರಿಗೆ ಒಂದೇ ರೀತಿಯ ವೇತನ ನೀಡುತ್ತಿರುವುದು ಗಮನಕ್ಕೆ ಬಂದಿದೆ ಎಂದರು.

    ಬೆಳಗಿನ ಪಾಳಿ ಶುರುವಾಗುವ ವೇಳೆ ದಾಂಧಲೆ ನಡೆದಿದೆ. ಘಟನೆಗೆ ಸ್ಪಷ್ಟ ಕಾರಣ ಏನೆಂಬುದರ ಕುರಿತು ತನಿಖೆ ನಡೆಯುತ್ತಿದೆ. ನಷ್ಟದ ಅಂದಾಜಿನ ಬಗ್ಗೆ ವಿಮಾ ಕಂಪನಿ, ಕಂಪನಿಯ ತಾಂತ್ರಿಕ ತಜ್ಞರ ತಂಡ ಭೇಟಿ ನೀಡಿ ಪರಿಶೀಲಿಸಿದ ನಂತರವಷ್ಟೇ ಹೇಳಲು ಸಾಧ್ಯ. ತನಿಖೆ ನಂತರ ಪೂರ್ಣ ವಿವರ ನೀಡಲಾಗುವುದು ಎಂದರು. ಸ್ಥಳೀಯರಿಗೆ ನಿರುದ್ಯೋಗ ಸಂಕಷ್ಟ ಇರುತ್ತದೆ. ಅವರು ಈ ಕೃತ್ಯದಲ್ಲಿ ತೊಡಗಿರುವುದಿಲ್ಲ ಎಂಬುದು ನನ್ನ ಅಭಿಪ್ರಾಯ. ಸ್ಥಳೀಯರಿಗೆ ಅನ್ಯಾಯವಾಗಲು ಅವಕಾಶ ನೀಡುವುದಿಲ್ಲ ಎಂದ ಸಚಿವರು, ಸಂಭವಿಸಿರುವ ಹಾನಿ ಸರಿಪಡಿಸಲು ಎರಡ್ಮೂರು ತಿಂಗಳಾದರೂ ಬೇಕಾಗಬಹುದು. ಆದಷ್ಟು ಬೇಗ ಶುರು ಮಾಡಲು ಆಡಳಿತ ಮಂಡಳಿಗೆ ಸೂಚಿಸಲಾಗಿದೆ ಎಂದರು.

    ಎಸ್ಪಿ ಕಾರ್ತಿಕ್ ರೆಡ್ಡಿ ಮಾತನಾಡಿ, ಸಿಸಿಟಿವಿ, ವಾಟ್ಸ್‌ಆ್ಯಪ್ ದೃಶ್ಯ ಆಧರಿಸಿ 149 ಜನರನ್ನು ಬಂಧಿಸಲಾಗಿದೆ. ಕೆಲ ಮೊಬೈಲ್, ಲ್ಯಾಪ್‌ಟಾಪ್ ಜಪ್ತಿ ಮಾಡಲಾಗಿದೆ. ದಾಂಧಲೆಯಲ್ಲಿ ಭಾಗಿಯಾಗಿರುವುದಕ್ಕೆ ಸಾಕ್ಷ್ಯಗಳು ಇದ್ದವರನ್ನಷ್ಟೇ ಬಂಧಿಸಿದ್ದೇವೆ. ಸಾಕ್ಷೃ ಇಲ್ಲದ 25 ಜನರನ್ನು ಬಿಡಲಾಗಿದೆ. ಅಮಾಯಕರನ್ನು ಬಂಧಿಸಿಲ್ಲ. ಇನ್ನಷ್ಟು ಮಂದಿಯ ಬಂಧನಕ್ಕೆ 10 ತನಿಖಾ ತಂಡಗಳು ಕಾರ್ಯಪ್ರವೃತ್ತವಾಗಿವೆ ಎಂದರು. ಕಾರ್ಮಿಕರ ಮುಷ್ಕರ ಸಂಬಂಧ ನೀಡಿದ್ದ ಮಾಹಿತಿ ಅನ್ವಯ ನಾಲ್ವರು ಸಿಬ್ಬಂದಿ ಕಳುಹಿಸಿಕೊಡಲಾಗಿತ್ತು. ದಾಂಧಲೆ ಸಂದರ್ಭದಲ್ಲಿ ಪೊಲೀಸರ ಮೇಲಿನ ಹಲ್ಲೆ ಸಂಬಂಧ ಒಂದು ಪ್ರಕರಣ ದಾಖಲಾಗಿದೆ ಎಂದರು.

    ವಿಸ್ಟ್ರಾನ್ ಸೇರಿ ಬಹುತೇಕ ಕೈಗಾರಿಕೆಗಳಲ್ಲಿ ಸಿಬ್ಬಂದಿ ನೇಮಿಸಿಕೊಂಡಿರುವ ಏಜೆನ್ಸಿಗಳು ಕಾರ್ಮಿಕರಿಗೆ ಸರಿಯಾಗಿ ವೇತನ ಪಾವತಿಸದಿರುವ ಬಗ್ಗೆ ದೂರು ಇದೆ. ಈ ಬಗ್ಗೆ ಕಾರ್ಮಿಕ ಸಚಿವರ ಜತೆ ಚರ್ಚಿಸುವುದಲ್ಲದೆ ಜಿಲ್ಲಾಡಳಿತ, ಶಾಸಕರ ಸಮ್ಮುಖದಲ್ಲಿ ಎಲ್ಲ ಕೈಗಾರಿಕೆಗಳ ಮುಖ್ಯಸ್ಥರು, ಮಾನವ ಸಂಪನ್ಮೂಲ ಒದಗಿಸುವ ಏಜೆನ್ಸಿಗಳ ಸಭೆ ಕರೆದು ಕಾರ್ಮಿಕ ಇಲಾಖೆ ನಿಬಂಧನೆಗೆ ಒಳಪಟ್ಟು ಕಾರ್ಯನಿರ್ವಹಿಸಲು ಸೂಚಿಸಲಾಗುವುದು.
    ಎಚ್.ನಾಗೇಶ್, ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts