More

    ಸಂಪುಟ ಪುನಾರಚನೆ ಉಸಾಬರಿ ನಮಗ್ಯಾಕೆ! : ಡಾ. ಕೆ.ಸುಧಾಕರ್

    ಮೈಸೂರು: ಹಸಿರು ಪಟಾಕಿ ಎಂದರೇನು ಅಂತ ನನಗೆ ಗೊತ್ತಿಲ್ಲ. ಈ ಬಗ್ಗೆ ತಿಳಿದುಕೊಂಡು ಹೇಳುತ್ತೇನೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಹೇಳಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೀಪಾವಳಿಗೆ ಹಸಿರು ಪಟಾಕಿಗೆ ಅನುಮತಿ ವಿಚಾರವಾಗಿ ಪ್ರತಿಕ್ರಿಯಿಸಿದರು.

    ಪಟಾಕಿ ನಿಷೇಧದ ಬಗ್ಗೆ ನಮ್ಮ ಇಲಾಖೆಯಿಂದ ಮಾರ್ಗಸೂಚಿ ವರದಿ ಬಂದಿತ್ತು. ಅದನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಗಮನಕ್ಕೆ ತಂದು ಸರ್ಕಾರಕ್ಕೆ ಸಲ್ಲಿಸಿದ್ದೇನೆ. ಆ ನಂತರ ಮುಖ್ಯಮಂತ್ರಿಗಳು ಹಸಿರು ಪಟಾಕಿ ಹೊಡೆಯಲು ಅನುಮತಿ ನೀಡಿದ್ದಾರೆ. ಆದರೆ, ಹಸಿರು ಪಟಾಕಿ ಅಂದರೇನು ಅಂತ ನನಗು ಗೊತ್ತಿಲ್ಲ. ಈ ಬಗ್ಗೆ ನಾನು ತಿಳಿದುಕೊಂಡು ಮಾತನಾಡುತ್ತೇನೆ ಎಂದು ಸಚಿವರು ಪ್ರತಿಕ್ರಿಯಿಸಿ ಅಚ್ಚರಿ ಮೂಡಿಸಿದರು.

    ಸಂಪುಟ ಪುನಾರಚನೆ ಉಸಾಬರಿ ನಮಗ್ಯಾಕೆ!
    ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ಅವರು, ಸಂಪುಟ ಪುನಾರಚನೆ ಉಸಾಬರಿ ನಮಗ್ಯಾಕೆ. ಸಂಪುಟ ವಿಸ್ತರಣೆಯೋ, ಪುನಾರಚನೆಯೋ ಏನು ಮಾಡಬೇಕೆಂಬುದು ಮುಖ್ಯಮಂತ್ರಿಗಳ ಪರಮಾಧಿಕಾರ. ಆ ವಿಚಾರದಲ್ಲಿ ನಾವು ನೀವು ಮಾತನಾಡೋದು ಏನಿದೆ. ಮುಖ್ಯಮಂತ್ರಿಗಳು ಈಗಾಗಲೇ ಪುನಾರಚನೆ ಮಾಡುತ್ತೇವೆ ಅಂತ ಹೇಳಿದ್ದಾರೆ. ದೆಹಲಿಗೆ ತೆರಳುವ ವಿಚಾರವನ್ನೂ ಬಹಿರಂಗಪಡಿಸಿದ್ದಾರೆ. ಸೂಕ್ತ ಸಂದರ್ಭದಲ್ಲಿ ಅವರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.

    ಆರ್‌ಆರ್ ನಗರ ಮತ್ತು ಶಿರಾ ಉಪ ಚುನಾವಣಾ ರ‌್ಯಾಲಿಗಳಲ್ಲಿ ಮಾಸ್ಕ್ ಧರಿಸದೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ವಿಚಾರದಲ್ಲಿ ನಾನು ಅಸಹಾಯಕನಾಗಿದ್ದೇನೆ. ಕರೊನಾ ಬಗ್ಗೆ ಈಗಾಗಲೇ ಮಾರ್ಗಸೂಚಿ ಇದೆ. ನಾನು ಕೂಡ ಕಡ್ಡಾಯವಾಗಿ ಪಾಲಿಸುವಂತೆ ಎಲ್ಲರಿಗೂ ಹೇಳುತ್ತಿದ್ದೇನೆ. ಇದು ನಮಗೂ ಅನ್ವಯ ಆಗುತ್ತದೆ. ರಾಜಕೀಯ ಪಕ್ಷಗಳ ರ‌್ಯಾಲಿಗಳ ವಿಚಾರದಲ್ಲೂ ಸರ್ಕಾರಕ್ಕೆ ಸೂಚನೆ ಕೊಟ್ಟಿದ್ದೆ. ಆದರೆ ಇದು ಪಾಲನೆ ಆಗಿಲ್ಲ ಅನ್ನೋದು ನನಗಿರುವ ಬೇಸರ. ಈ ವಿಚಾರದಲ್ಲಿ ರಾಜಕೀಯ ಪಕ್ಷಗಳು ಹಾಗೂ ನಾಯಕರಿಗೆ ಸಾಮೂಹಿಕ ಜವಾಬ್ದಾರಿ ಇರಬೇಕು. ಈ ಬಗ್ಗೆ ದಂಡ ಹಾಕಲು ಅಧಿಕಾರಿಗಳಿಗೆ ತಿಳಿಸುತ್ತೇನೆ. ದಂಡ ಎಲ್ಲರಿಗೂ ಅನ್ವಯ ಆಗುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts