More

    ಕೋಟ್ಯಂತರ ರೂಪಾಯಿ ‘ಉಪ್ಪು ನೀರು’ ಪಾಲು

    ಕಾರವಾರ: ಜಮೀನಿಗೆ ಉಪ್ಪು ನೀರು ನುಗ್ಗುವುದನ್ನು ತಡೆಯಲು ಹಣಕೋಣದಲ್ಲಿ ನಿರ್ವಿುಸಿದ್ದ ಖಾರ್ಲ್ಯಾಂಡ್ ಒಡ್ಡು ನಿರ್ವಹಣೆ ಇಲ್ಲದೆ ಹಾಳಾಗಿದೆ. ಪರಿಣಾಮ ಸಮೀಪದ ನದಿ ಹಿನ್ನೀರಿನ ಸಮೀಪದ ಬಾವಿಗಳ ನೀರು ಪ್ರಯೋಜನಕ್ಕೆ ಬಾರದಂತಾಗಿದೆ. ಜನ ಕುಡಿಯುವ ನೀರಿಗಾಗಿ ತೊಂದರೆಪಡಬೇಕಾಗಿದೆ.

    ಕಾಳಿ ನದಿಯ ಭರತದ ಸಮಯದಲ್ಲಿ ಕೆಲವೆಡೆ ಗದ್ದೆಗಳಿಗೆ ಉಪ್ಪು ನೀರು ನುಗ್ಗುತ್ತದೆ. ಇದರಿಂದ ಬಾವಿಗಳ ನೀರೂ ಉಪ್ಪಾಗಿ ಬಳಕೆಗೆ ಬಾರದಂತಾಗುತ್ತದೆ. ಅದನ್ನು ತಡೆಯಲು ಹಣಕೋಣ ಜೂಗಕ್ಕೆ ತೆರಳುವ ಮಾರ್ಗದಲ್ಲಿ ಬೃಹತ್ ಖಾರ್ಲ್ಯಾಂಡ್ ಒಡ್ಡು ನಿರ್ಮಾಣ ಮಾಡಲಾಗಿತ್ತು. 2014ರಲ್ಲಿ ಹಣಕೋಣ ಜೂಗ ರಸ್ತೆ ಎಡ ಹಾಗೂ ಬಲ ದಂಡೆಗಳಲ್ಲಿ ಒಟ್ಟು 1 ಕಿಮೀ ಒಡ್ಡು ದುರಸ್ತಿ ಮಾಡಲಾಗಿತ್ತು. ಹಾಗೂ ಉಪ್ಪು ನೀರು ನುಗ್ಗುವುದನ್ನು ತಡೆಯಲು ಗೇಟ್ ಅಳವಡಿಸಲಾಗಿತ್ತು. 1 ಕೋಟಿ ರೂ. ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆ ಕಾಮಗಾರಿ ಕೈಗೊಂಡಿತ್ತು.

    ಆದರೆ, ಸಣ್ಣ ನೀರಾವರಿ ಇಲಾಖೆಯು ಕಾಮಗಾರಿ ಮುಗಿದ ನಂತರ ಇತ್ತ ಸುಳಿದಂತೆಯೇ ಇಲ್ಲ. ಇದರಿಂದ ಒಡ್ಡಿನ ಮೇಲೆ ಗಿಡ ಗಂಟಿಗಳು ಬೆಳೆದು ದೊಡ್ಡ ಕಾಡಿನಂತಾಗಿದೆ. ಕೆಲವೆಡೆ ಕುಸಿಯುತ್ತಿದೆ. ಉಪ್ಪು ನೀರು ನುಗ್ಗುವುದನ್ನು ತಡೆಯಲು ಮಾಡಿದ್ದ ಗೇಟ್​ಗಳು ಹಾಳಾಗಿ ಕಿತ್ತು ಹೋಗಿದೆ. ಸಣ್ಣ ಬ್ರಿಜ್ ಕುಸಿದು ಹೋಗಿದೆ. ಇದರಿಂದ ಇಡೀ ಯೋಜನೆ ಎಂಟೇ ವರ್ಷದಲ್ಲಿ ಪ್ರಯೋಜನಕ್ಕೆ ಬಾರದಂತಾಗಿದೆ. ಬೇಸಿಗೆ ಬಂತೆಂದರೆ ಸಾಕು ನದಿಯ ಸುತ್ತಲಿನ ಗದ್ದೆಗಳಿಗೆ ಉಪ್ಪು ನೀರು ನುಗ್ಗುತ್ತಿದೆ. ಗದ್ದೆಯ ಪಕ್ಕದ ಅಂಬಿವಾಡದ ಹತ್ತಕ್ಕೂ ಹೆಚ್ಚು ಬಾವಿಗಳ ನೀರು ಬಳಕೆಗೆ ಅಯೋಗ್ಯವಾಗಿದೆ.

    ಗ್ರಾಮದಲ್ಲಿ ಬೇರೆ ಕುಡಿಯುವ ನೀರಿನ ಸೌಲಭ್ಯವಿಲ್ಲ. ಈ ಸಮಸ್ಯೆಯಿಂದ ಬೇಸತ್ತ ಹತ್ತಾರು ಕುಟುಂಬಗಳು ಮನೆ ಬಿಟ್ಟು ಬೇರೆಡೆ ವಲಸೆ ಹೋಗಿವೆ. ಇನ್ನು ಕೆಲ ಕುಟುಂಬಗಳು ದೂರದ ಒಂದು ಬಾವಿಯಿಂದ ನೀರು ಪಡೆದು ಕಷ್ಟದ ಜೀವನ ನಡೆಸುತ್ತಿವೆ.

    ಪ್ರತಿಕ್ರಿಯೆಗೆ ಲಭ್ಯರಿಲ್ಲ: ಹಣಕೋಣ ಗ್ರಾಮಸ್ಥರ ಸಮಸ್ಯೆಯ ಬಗ್ಗೆ ಗಮನ ಸೆಳೆಯಲು ವಿಜಯವಾಣಿ ಸಣ್ಣ ನೀರಾವರಿ ಇಲಾಖೆ ಎಇಇ ವಿನೋದ ನಾಯ್ಕ ಅವರಿಗೆ ಕರೆ ಮಾಡಿದಾಗ ಅವರು ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ. ಕಚೇರಿಯಲ್ಲೂ ಲಭ್ಯವಾಗಲಿಲ್ಲ. ಇತರ ನೌಕರರಿಂದ ಸಮರ್ಪಕ ಉತ್ತರ ದೊರೆಯಲಿಲ್ಲ.

    ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ವಿುಸಿದ ಒಡ್ಡು ಪ್ರಯೋಜನಕ್ಕೆ ಬಾರದಂತಾಗಿದೆ. ಕೇವಲ ಕಸ, ಗಿಡಗಂಟಿ ಬೆಳೆದು ಹಾಳಾಗಿದೆ. ಜನವರಿ ಬಂದ ತಕ್ಷಣ ಬಾವಿಯ ನೀರು ಉಪ್ಪಾಗಿಬಿಡುತ್ತದೆ. ವಾಸನೆ ಬರುತ್ತದೆ.

    ಜಗದೀಶ ಗಂಗೆಪುತ್ರ, ಹಣಕೋಣ ನಿವಾಸಿ

    ಸಣ್ಣ ನೀರಾವರಿ ಇಲಾಖೆ ಒಡ್ಡನ್ನು ನಮಗೆ ಹಸ್ತಾಂತರ ಮಾಡಿಲ್ಲ. ಇದರಿಂದ ನಿರ್ವಹಣೆಯ ಜವಾಬ್ದಾರಿ ನಮಗೆ ಬರುವುದಿಲ್ಲ.

    ಪ್ರೀತಿ ಹೊಸಮನಿ, ಹಣಕೋಣ ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts