More

    ವಾರದಲ್ಲಿ ನಾಲ್ಕು ದಿನ ಮಕ್ಕಳಿಗೆ ರಾಗಿ ಮಾಲ್ಟ್: ಮಧು ಬಂಗಾರಪ್ಪ

    ಶಿವಮೊಗ್ಗ: ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಐದು ದಿನ ಪೌಷ್ಟಿಕ ಆಹಾರ, ಹಾಲು ಮತ್ತು ಎರಡು ದಿನ ಮೊಟ್ಟೆ ನೀಡುತ್ತಿದ್ದು ಇನ್ಮುಂದೆ ವಾರದ ನಾಲ್ಕು ದಿನ ಪೌಷ್ಟಿಕ ಆಹಾರವಾಗಿ ರಾಗಿ ಮಾಲ್ಟ್ ನೀಡುವ ಕಾರ್ಯಕ್ರಮಕ್ಕೆ ಫೆ.22ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಚಾಲನೆ ನೀಡಲಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

    ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ 59 ಲಕ್ಷ ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಕಳೆದ ಸಾಲಿನಲ್ಲಿ ಶಿಕ್ಷಣ ಇಲಾಖೆಗೆ 37 ಸಾವಿರ ಕೋಟಿ ರೂ. ನಿಗದಿಗೊಳಿಸಲಾಗಿತ್ತು. ಪ್ರಸಕ್ತ ಸಾಲಿಗೆ ಅನುದಾನವನ್ನು 44 ಸಾವಿರ ಕೋಟಿ ರೂ.ಗೆ ಹೆಚ್ಚಿಸಲಾಗಿದೆ ಎಂದರು.
    ಕೇರಳದಲ್ಲಿ ಆನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಗೆ ಕರ್ನಾಟಕ ಸರ್ಕಾರ 15 ಲಕ್ಷ ರೂ. ಪರಿಹಾರ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಎಸ್.ಬಂಗಾರಪ್ಪ ಸಿಎಂ ಆಗಿದ್ದಾಗ ಶಿರಡಿ ಸತ್ಯಸಾಯಿ ಬಾಬಾ ಆಸ್ಪತ್ರೆಗೆ 2 ಕೋಟಿ ರೂ. ನೀಡಿದ್ದರು. ಅದಕ್ಕೂ ಕೆಲವರು ವಿರೋಧ ಮಾಡಿದ್ದರು. ನಮ್ಮ ರಾಜ್ಯದ ರೋಗಿಗಳು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅದೇ ರೀತಿ ಕೇರಳದಲ್ಲಿ ಆನೆ ತುಳಿದು ಮೃತಪಟ್ಟಿದ್ದಕ್ಕೆ ಪರಿಹಾರ ಕೊಡಲಾಗಿದೆ. ಬಿಜೆಪಿಯವರಿಗೆ ಯಾವುದೇ ಕೆಲಸ ಇಲ್ಲ. ಹಾಗಾಗಿ ಎಲ್ಲದಕ್ಕೂ ವಿರೋಧ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
    ‘ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ’ ಘೋಷವಾಕ್ಯ ಬದಲಾವಣೆ ವಿಚಾರದಲ್ಲಿ ಸರ್ಕಾರ ಯಾವುದೇ ಆದೇಶ ಮಾಡಿಲ್ಲ. ಯಾವುದೋ ವಾಟ್ಸ್‌ಆ್ಯಪ್‌ನಲ್ಲಿ ಬಂದ ಮೆಸೇಜ್‌ನಿಂದ ಗೊಂದಲ ಆಗಿದೆ ಎಂದ ಅವರು, ಕೆಎಫ್‌ಡಿ ಕಾಯಿಲೆಯಿಂದ ಮೃತಪಟ್ಟವರಿಗೆ ಪರಿಹಾರ ಕೊಡುವ ವಿಚಾರದಲ್ಲಿ ಸರ್ಕಾರದ ಗಮನಕ್ಕೆ ತರಲಾಗಿದೆ. ಕೆಎಫ್‌ಡಿಯಿಂದ ಮೃತಪಟ್ಟವರ ಮಾಹಿತಿ ಕೊಡಲು ಸೂಚಿಸಿದ್ದೇನೆ. ಪರಿಹಾರ ಕೊಡುವ ಬಗ್ಗೆ ಗಮನ ಹರಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts