More

    ಹಾಲಿಗೆ ಕರೊನಾ ಹುಳಿ

    ಬೆಳಗಾವಿ: ಏ. 14ರ ವರೆಗೆ ಇಡೀ ದೇಶ ಲಾಕ್‌ಡೌನ್ ಆಗಿದ್ದು, ಅಗತ್ಯ ವಸ್ತು ಸರಬರಾಜು ಮತ್ತು ಮಾರಾಟಕ್ಕೆ ಮಾತ್ರ ಸಮಯ ನಿಗದಿಪಡಿಸಿ ಅವಕಾಶ ನೀಡಲಾಗಿದೆ. ಆದರೆ, ಅತ್ಯವಶ್ಯಕ ಆಹಾರ ಪದಾರ್ಥಗಳಲ್ಲಿ ಒಂದಾದ ಹಾಲು ಆಮದು ಮಾಡಿಕೊಳ್ಳಲು ಪಕ್ಕದ ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರ ನಿರಾಕರಿಸಿದೆ. ಇದರಿಂದ ಕೆಎಂಎ್ ಹಾಲು ವ್ಯಾಪಾರಕ್ಕೂ ಕರೊನಾ ಹುಳಿ ಹಿಂಡಿದಂತಾಗಿದೆ.

    ಪ್ರತಿದಿನ ಗೋವಾ ರಾಜ್ಯಕ್ಕೆ 45 ಸಾವಿರ ಲೀಟರ್ ಹಾಗೂ ಮಹಾರಾಷ್ಟ್ರಕ್ಕೆ 35 ಸಾವಿರ ಲೀಟರ್ ಹಾಲು ಸೇರಿ ನಿತ್ಯವೂ ಒಟ್ಟೂ 80 ಸಾವಿರ ಲೀಟರ್ ಹಾಲನ್ನು ಬೆಳಗಾವಿಯ ಕೆಎಂಎ್ ಪೂರೈಸುತ್ತಿತ್ತು. ಕರೊನಾ ವೈರಸ್ ಹಬ್ಬುವ ಆತಂಕದಿಂದ ಹಾಗೂ ಮುನ್ನೆಚ್ಚರಿಕೆಯ ಕ್ರಮವಾಗಿ ಎಲ್ಲೆಡೆಯೂ ಹೊರರಾಜ್ಯದ ಸಂಪರ್ಕ ಕಡಿತಗೊಳಿಸಲಾಗಿದೆ. ಅಲ್ಲದೆ, ಕರ್ನಾಟಕದಿಂದ ಯಾವುದೇ ಕಾರಣಕ್ಕೂ ಹಾಲು ಆಮದು ಮಾಡಿಕೊಳ್ಳುವುದು ಬೇಡ ಎಂದು ಗೋವಾ ಹಾಗೂ ಮಹಾ ಸರ್ಕಾರ ಕಟ್ಟು ನಿಟ್ಟಿನ ಆದೇಶ ನೀಡಿದೆ. ಕರೊನಾ ಸೋಂಕಿನಿಂದಾಗಿ ರಾಜ್ಯ ಹಾಗೂ ಹೊರ ರಾಜ್ಯಗಳಿಗೆ ಪೂರೈಕೆಯಾಗುತ್ತಿದ್ದ ಹಾಲಿನಲ್ಲಿ ನಿತ್ಯವೂ ಸುಮಾರು 8 ಲಕ್ಷ ಲೀಟರ್‌ನಷ್ಟು ಹಾಲು ಮಾರಾಟವಾಗದೇ ಉಳಿಯುತ್ತಿದ್ದು, ಇದರಿಂದಾಗಿ ಕೆಎಂಎ್ಗೆ ದಿನವೂ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ ಎಂದು ಕೆಎಂಎ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

    ಜನರ ಪರದಾಟ: ದೇಶವ್ಯಾಪಿ ಲಾಕ್‌ಡೌನ್ ನಡುವೆಯೂ ಜನ ಜೀವನಕ್ಕೆ ತೊಂದರೆಯಾಗದಂತೆ ಅಗತ್ಯವಸ್ತುಗಳ ಪೂರೈಕೆಗೆ ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಅಗತ್ಯ ವಸ್ತುಗಳಲ್ಲಿಯೇ ಮುಖ್ಯವಾಗಿರುವ ಹಾಲು ಲಭ್ಯವಿಲ್ಲದೆ ಇದೀಗ ಗೋವಾದಲ್ಲಿ ಜನತೆ ಪರದಾಡುವಂತಾಗಿದೆ. ‘ಚಿಕ್ಕ ಮಕ್ಕಳಿವೆ. ಅವರಿಗೆ ಕುಡಿಯಲು ಹಾಲು ಬೇಕು’ ಎಂದು ಎಷ್ಟೇ ಅಲೆದರೂ ಗೋವಾದಲ್ಲಿ ಹಾಲು ಲಭ್ಯವಾಗುತ್ತಿಲ್ಲ. ಅಲ್ಲಿನ ಮಧ್ಯವರ್ತಿಗಳು ಹಾಲು ಪೂರೈಸುವಂತೆ ಮನವಿ ಮಾಡುತ್ತಿದ್ದಾರೆ. ರಾಜ್ಯದಲ್ಲಿಯೂ ಹಲವೆಡೆ ಸಮಸ್ಯೆಯಿದೆ. ಸರ್ಕಾರ ಸಾರಿಗೆ ಸಂಪರ್ಕ ಕಡಿತಗೊಳಿಸಿದ್ದರಿಂದ ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಕೆಎಂಎ್ ಅಧಿಕಾರಿಗಳು.

    ತೀವ್ರ ಕಟ್ಟೆಚ್ಚರ: ರಾಜ್ಯದ ಗಡಿಯಲ್ಲಿ ಸಂಪೂರ್ಣವಾಗಿ ಸಾರಿಗೆ ಸಂಪರ್ಕ ಬಂದ್ ಮಾಡಿ, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಅಗತ್ಯ ವಸ್ತು ಪೂರೈಸುವವರಿಗೆ ಗರಿಷ್ಠ ಮುನ್ನೆಚ್ಚೆರಿಕೆ ವಹಿಸಿ, ಸರಬರಾಜು ಮಾಡುವಂತೆ ಸೂಕ್ತ ನಿರ್ದೇಶನ ನೀಡಿ ಪೂರಕ ವ್ಯವಸ್ಥೆ
    ಕಲ್ಪಿಸಲಾಗುತ್ತಿದೆ. ಹಾಲು ಪೂರೈಸುವಲ್ಲಿ ತೊಂದರೆಯಾಗುತ್ತಿದ್ದರೆ ಸಂಬಂಧಪಟ್ಟವರು ಗಮನಕ್ಕೆ ತಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಬೆಳಗಾವಿ ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ.

    ಸರಬರಾಜಿಗೆ ಸಾರಿಗೆ ಸಂಪರ್ಕ ತೊಡಕು: ನೆರೆಯ ರಾಜ್ಯಗಳಿಗೆ ಕೆಎಂಎ್ ಉತ್ಪನ್ನಗಳ ಸರಬರಾಜಿಗೆ ವ್ಯತ್ಯಯ ಆಗಿರುವ ಕುರಿತು ಬೆಳಗಾವಿಯ ಕೆಎಂಎ್ ವ್ಯವಸ್ಥಾಪಕ ಡಾ.ಜಯಪ್ರಕಾಶ್ ಮನ್ನೇರಿ ‘ವಿಜಯವಾಣಿ’ ಜತೆ ಮಾತನಾಡಿ, ಕಳೆದ 40 ವರ್ಷಗಳಿಂದ ರಾಜ್ಯದ ಹಲವು ಜಿಲ್ಲೆ ಹಾಗೂ ನೆರೆಯ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಕೆಎಂಎ್ ಉತ್ಪನ್ನ ಮಾರಾಟ ಮಾಡಲಾಗುತ್ತಿತ್ತು. ಆದರೆ, ಇದೀಗ ವಿದೇಶ ಮತ್ತು ಹೊರ ರಾಜ್ಯಗಳಿಂದ ಆಗಮಿಸಿದವರಿಂದಲೇ ಕರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಎಲ್ಲ ರಾಜ್ಯಗಳ ಗಡಿಗಳಲ್ಲಿಯೂ ಸಂಪರ್ಕ ಕಡಿತಗೊಳಿಸಲಾಗಿದೆ. ನಮ್ಮ ಜಿಲ್ಲಾಡಳಿತ ಮತ್ತು ಪೊಲೀಸರೂ ಸಹ ಬೆಳಗಾವಿ ಗಡಿ ದಾಟಲು ಅವಕಾಶ ನೀಡುತ್ತಿಲ್ಲ. ಹೀಗಾಗಿ ಗೋವಾ ಮತ್ತು ಮಹಾರಾಷ್ಟ್ರದ ಪುಣೆಗೆ ನಮ್ಮ ವಾಹನ ಕಳುಹಿಸಲಾಗುತ್ತಿಲ್ಲ ಎಂದರು.

    ಗೋವಾ ರಾಜ್ಯದಲ್ಲಿ ಕೆಎಂಎ್ ಉತ್ಪನ್ನ ಹಾಗೂ ಹಾಲಿಗೆ ಹೆಚ್ಚಿನ ಬೇಡಿಕೆಯಿದೆ. ಆದರೆ, ಕರೊನಾ ಆತಂಕದಿಂದ ಅಲ್ಲಿನ ಸರ್ಕಾರ ಆಮದು ನಿಲ್ಲಿಸಿದೆ. ಜನತೆಗೆ ಅತ್ಯಗತ್ಯವಾಗಿರುವ ಹಾಲನ್ನು ಸೂಕ್ತ ಮುನ್ನೆಚ್ಚರಿಕೆ ವಹಿಸಿಕೊಂಡು ಸರಬರಾಜು ಮಾಡುತ್ತೇವೆ. ಎಂದಿನಂತೆ ಬೆಳಗಾವಿಯ ಕೆಎಂಎ್ನಿಂದ ಆಮದು ಮಾಡಿಕೊಳ್ಳುವಂತೆ ಗೋವಾ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಆದರೆ, ಇನ್ನೂ ಪ್ರತಿಕ್ರಿಯೆ ಬಂದಿಲ್ಲ.
    | ಬಾಲಚಂದ್ರ ಜಾರಕಿಹೊಳಿ ಕೆಎಂಎ್ ಅಧ್ಯಕ್ಷ

    | ರವಿ ಗೋಸಾವಿ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts