More

    ಬೂತ್ ಬಲಿಷ್ಟಗೊಳಿಸಿ, ಎಲ್ಲ ವರ್ಗದ ಮನ ಗಳಿಸಿ   ಬಿಜೆಪಿ ಸಂಸ್ಥಾಪನಾ ದಿನಾಚರಣೆಯಲ್ಲಿ ಎಂಎಲ್ಸಿ  ರವಿಕುಮಾರ್ ಹೇಳಿಕೆ

    ದಾವಣಗೆರೆ: ಮೇರಾ ಬೂತ್ ಸಬ್‌ಸೇ ಮಜಬೂತ್ ಎಂಬ ಅಮಿತ್ ಷಾ ಮಂತ್ರದಂತೆ ಬೂತ್ ಸಮಿತಿ ಕಾರ್ಯಕರ್ತರು ಮತಗಟ್ಟೆಯ ಶಕ್ತಿ ವೃದ್ಧಿಸಬೇಕು. ಎಲ್ಲ ಸಮುದಾಯದವರ ಮನೆಗೂ ತೆರಳಿ ಮತ ಯಾಚಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಹೇಳಿದರು.
    ಇಲ್ಲಿನ ದಾವಣಗೆರೆ ಹರಿಹರ ಅರ್ಬನ್ ಸಹಕಾರ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಿಜೆಪಿ ಸಂಸ್ಥಾಪನಾ ದಿನ ಹಾಗೂ ದಾವಣಗೆರೆ ದಕ್ಷಿಣ ಮಂಡಲದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.
    ಜನಪರ ಯೋಜನೆಗಳಿಂದಾಗಿ ದೇಶದಲ್ಲಿ 25 ಕೋಟಿ ಜನರು ಬಡತನ ರೇಖೆಯಿಂದ ಮೇಲೆ ಬಂದಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಪ್ರತಿ ಮನೆಗೂ ತಲುಪಿಸಬೇಕು. ಕ್ಷೇತ್ರದ ಮಹಿಳೆಯರು, ಯುವಕರು, ಎಸ್ಸಿ-ಎಸ್ಟಿ ಹೀಗೆ ಎಲ್ಲರನ್ನೂ ಕಾರ್ಯಕರ್ತರು ತಲುಪಬೇಕು ಎಂದು ತಿಳಿಸಿದರು.
    ಬಿಜೆಪಿ ಎರಡು ಸ್ಥಾನದಿಂದ ಇಂದು ಏಕಪಕ್ಷದ ಅಧಿಕಾರ ಪಡೆಯುವಷ್ಟರ ಮಟ್ಟಿಗೆ ಸ್ವಂತ ಬಲದಿಂದ ಬೆಳೆದಿದೆ. ಯಾವುದೇ ವ್ಯಕ್ತಿಯ ಸಣ್ಣ ಮನಸ್ಸು, ಸಣ್ಣ ಹೃದಯದಿಂದ ಬೆಳೆಯಲಾಗದು ಎಂದು ವಾಜಪೇಯಿ ಹೇಳಿದ್ದರು. ಅದೇ ರೀತಿ ಪಕ್ಷ ಹೆಮ್ಮರವಾಗಲು ಮನಸ್ಸು, ಹೃದಯದ ಜತೆಗೆ ದೊಡ್ಡ ಹೊಟ್ಟೆಯೂ ಬೇಕಿದೆ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ಎಲ್ಲವನ್ನೂ ಹೊಟ್ಟೆಗೆ ಹಾಕಿಕೊಳ್ಳಬೇಕು ಎಂದೂ ಸೂಕ್ಷ್ಮವಾಗಿ ಹೇಳಿದರು.
    ಜೆಡಿಎಸ್ ಮುಖಂಡ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಮಾತನಾಡಿ, ದೇಶದಲ್ಲಿ ಉಗ್ರವಾದ ತಾಂಡವಾಡುತ್ತಿದೆ. ಎಲ್ಲೆಡೆ ಬಾಂಬ್ ಸ್ಪೋಟ ಆಗುತ್ತಿವೆ. ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳುವವರನ್ನು ಹತ್ತಿಕ್ಕಲು, ಭಾರತದ ಸಂಸ್ಕೃತಿ ಉಳಿಸಲು ಮೋದಿ ಕೈ ಬಲಪಡಿಸಬೇಕಿದೆ ಎಂದರು.
    ವರಿಷ್ಠ ಎಚ್.ಡಿ.ದೇವೇಗೌಡರ ಸೂಚನೆಯಂತೆ ಜೆಡಿಎಸ್ ಕೊಟ್ಟ ಮಾತು, ಇಟ್ಟ ಹೆಜ್ಜೆಗೆ ಎಂದೂ ತಪ್ಪುವುದಿಲ್ಲ. ನಾಯಕರು ಹೆಚ್ಚಿದಂತೆ ಬಡಿದಾಟ ಸಹಜ. ಬಿಜೆಪಿ ಮುಖಂಡರು ಭಿನ್ನಾಭಿಪ್ರಾಯ ಮರೆತು ಪ್ರಾಮಾಣಿಕ ಕೆಲಸ ಮಾಡಬೇಕು. ಚುನಾವಣೆಯಲ್ಲಿ ವ್ಯತ್ಯಾಸ ಮಾಡಿದರೆ ಪಕ್ಷದ್ರೋಹ ಆಗಲಿದೆ ಎಂದು ಹೇಳಿದರು.
    ಬಿಜೆಪಿ-ಕಾಂಗ್ರೆಸ್‌ನ ಸ್ಥಳೀಯ ಅಭ್ಯರ್ಥಿಗಳು ಮತ ಕೇಳಲು ಬೆಳಗ್ಗೆ 6 ಕ್ಕೆ ಬೀದಿಗಿಳಿಯುತ್ತಿದ್ದಾರೆ. ಈ ಚುನಾವಣೆ ಸುಲಭದ್ದಲ್ಲ. ಕಾರ್ಯಕರ್ತರು ಮೈಮರೆಯದೆ ಜಾಗರೂಕವಾಗಿ ಕೆಲಸ ಮಾಡಬೇಕಿದೆ ಎಂದು ಕಿವಿಮಾತು ಹೇಳಿದರು.
    ಮಾಜಿ ಮೇಯರ್ ಅಜಯಕುಮಾರ್ ಮಾತನಾಡಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಕಳೆದ ಬಾರಿ 8503 ಮತಗಳ ಅಂತರ ಪಡೆದಿತ್ತು. ಈ ಬಾರಿಯೂ ಹೆಚ್ಚಿನ ಮತಗಳ ನಿರೀಕ್ಷೆ ಇದೆ ಎಂದರು. ನರೇಂದ್ರ ಮೋದಿ, ದೇಶದ ಜನರಿಗೆ ಮೂರು ಹಂತದ ಕೋವಿಡ್ ಲಸಿಕೆ ನೀಡಿದರು. ಈಗ ಮತದಾರರು ಗೆಲುವಿನ ಮೂಲಕ ಅವರಿಗೆ ಬೂಸ್ಟರ್ ಡೋಸ್ ನೀಡಬೇಕು ಎಂದು ತಿಳಿಸಿದರು.
    ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಹುವರ್ಷದಿಂದ ಒಂದೇ ಮನೆತನ ಅಧಿಕಾರ ನಡೆಸುತ್ತಿದೆ. ಅದರ ವಿರುದ್ಧದ ಹೋರಾಟ ಇದಾಗಿದೆ. ಅಪ್ಪ ಶಾಸಕ, ಮಗ ಮಂತ್ರಿ ಈಗ ಅದೇ ಮನೆಗೆ ಲೋಕಸಭೆ ಟಿಕೆಟ್ ಕೊಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಪಿ.ಸಿ.ಶ್ರೀನಿವಾಸ್ ಪ್ರಾಸ್ತಾವಿಕ ಮಾತನಾಡಿದರು. ಪಕ್ಷದ ಮುಖಂಡರಾದ ಆನಂದರಾವ್ ಶಿಂದೆ, ದೇವರಮನೆ ಶಿವಕುಮಾರ್, ಮುರುಗೇಶ್ ಆರಾಧ್ಯ, ಎಸ್‌ಟಿ.ವೀರೇಶ್, ಶ್ರೀನಿವಾಸ ದಾಸಕರಿಯಪ್ಪ, ರಾಜನಹಳ್ಳಿ ಶಿವಕುಮಾರ್, ರಮೇಶನಾಯ್ಕ, ಸೋಗಿ ಶಾಂತಕುಮಾರ್, ಜಯಲಕ್ಷ್ಮೀ, ಗಾಯತ್ರಿ ಖಂಡೋಜಿರಾವ್, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts