More

    ಗ್ರಾಮೀಣರ ನೆಮ್ಮದಿ ಕೆಡಿಸಿದ ನಗರ ವಲಸಿಗರು!

    ತುಮಕೂರು: ಉದ್ಯೋಗಕ್ಕಾಗಿ ವಲಸೆ ಹೋಗಿದ್ದ ಜನರು ಕರೊನಾ ಭೀತಿಯಲ್ಲಿ ಸಾಗರೋಪಾದಿಯಲ್ಲಿ ಊರುಗಳಿಗೆ ಆಗಮಿಸಲಾರಂಭಿಸಿರುವುದು ನೆಮ್ಮದಿಯಾಗಿದ್ದ ಗ್ರಾಮೀಣ ಜನರ ನೆಮ್ಮದಿ ಕದಡಿದೆ.

    ಸೋಮವಾರ ಸಾವಿರಾರು ಸಂಖ್ಯೆಯಲ್ಲಿ ಜನರು ಖಾಸಗಿ ಬಸ್ ಮೂಲಕ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಬಂದರು, ತುಮಕೂರು ಮೂಲಕ ನೆರೆಯ ಹೊಸದುರ್ಗ, ಕಡೂರು, ಅರಸೀಕೆರೆ ಮತ್ತಿತರರ ತಾಲೂಕುಗಳಿಗೆ ಪರದಾಡಿಕೊಂಡು ಸೇರಿಕೊಂಡರು.

    ಜನ ಗುಂಪುಗೂಡುವುದನ್ನು ತಪ್ಪಿಸಲು ಕೆಎಸ್‌ಆರ್‌ಟಿಸಿ ಬಸ್ ಸಂಚಾರ ನಿಲ್ಲಿಸಿದ್ದ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳಲ್ಲಿ ನೂರಾರು ಜನರು ನೇತಾಡಿಕೊಂಡೇ ಊರು ತಲುಪಿದರು. ಬಸ್ ಮೇಲೆಲ್ಲ ಜನರನ್ನು ಕುಳ್ಳಿರಿಸಿಕೊಂಡಿದ್ದ ಬಸ್‌ಗಳುನಗರದ ಮಧ್ಯೆಯೇ ಸಾಗಿ ಹೋದವು.

    ಕೆಎಸ್‌ಆರ್‌ಟಿಸಿ ತುಮಕೂರು ವಿಭಾಗದ 620 ಬಸ್‌ಗಳು ಸೋಮವಾರ ರಸ್ತೆಗೆ ಇಳಿಯಲಿಲ್ಲ, ಹಾಗಾಗಿ, ಓಡಾಡಿದ ಕೆಲವೇ ಕೆಲವು ಖಾಸಗಿ ಬಸ್‌ಗಳಲ್ಲಿ ರೋಗದ ಭಯವನ್ನೂ ತ್ಯಜಿಸಿ ಜನರು ಪ್ರಯಾಣಿಸಿ ಆಶ್ಚರ್ಯ ಹಾಗೂ ಆತಂಕ ಮೂಡಿಸಿದರು.

    ರೈಲು, ಕೆಎಸ್‌ಆರ್‌ಟಿಸಿ ಸಂಚಾರ ಸ್ಥಗಿತವಾಗಿರುವ ನಡುವೆಯೇ ಏಕಕಾಲದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸ್ವಗ್ರಾಮಗಳಿಗೆ ಹೊರಟು ನಿಂತಿದ್ದು ಇದ್ದ ಕೆಲವೇ ಬಸ್‌ನಲ್ಲಿಯೂ ಜಾಗವಿಲ್ಲದಂತಾಗಿತ್ತು.

    ಕರೊನಾ ತಡೆಗಟ್ಟುವ ನಿಟ್ಟಿನಲ್ಲಿ ನಗರಗಳಿಂದ ಹಳ್ಳಿಗಳಿಗೆ ತೆರಳದಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಪದೇಪದೆ ಮಾಡಿಕೊಳ್ಳುತ್ತಿರುವ ಮನವಿಗೂ ಸೊಪ್ಪು ಹಾಕದ ವಲಸಿಗರು ಪ್ರಾಣರಕ್ಷಣೆಗೆ ಹಳ್ಳಿಗಳೆಡೆಗೆ ಮುಖಮಾಡಿದರು. ಆದರೆ, ಗ್ರಾಮೀಣ ಭಾಗಕ್ಕೆ ಮಹಾಮಾರಿ ಎಂಟ್ರೀ ಕೊಟ್ಟರೆ ನಿಯಂತ್ರಣ ಅಸಾಧ್ಯವಾಗಿದೆ.

    ಗಾರ್ಮೆಂಟ್ಸ್‌ಗಳಲ್ಲಿ ಸಾವಿರಾರು ಜನ ಕೆಲಸ!: ಜಿಲ್ಲೆಯ ತುಮಕೂರು, ಕೆ.ಬಿ.ಕ್ರಾಸ್, ತಿಪಟೂರು, ಗುಬ್ಬಿ ಮತ್ತಿತರರ ಕಡೆ ಇರುವ ಗಾರ್ಮೆಂಟ್ಸ್ ಗಳಲ್ಲಿ ಪ್ರತಿನಿತ್ಯ ಸಾವಿರಾರು ಕಾರ್ಮಿಕರು ಒಂದೆಡೆ ಸೇರಿ ಕೆಲಸ ಮಾಡುತ್ತಿದ್ದರೂ ಜಿಲ್ಲಾಡಳಿತ ಸುಮ್ಮನಿರುವುದು ಆಂತಕ ಸೃಷ್ಠಿಸಿದೆ. ವೇತನ ಸಹಿತ ರಜೆ ನೀಡಬೇಕು ಎಂದು ಮಹಿಳಾ ಕಾರ್ಮಿಕರು ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಆಡಳಿತ ಮಂಡಳಿ ಉದಾಸೀನತೆಯಿಂದ ಕೆಲಸ ಮಾಡಿಕೊಳ್ಳುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

    ನಗರವಾಸಿಗಳಿಗೂ ಭಯವಿಲ್ಲ!: ತುಮಕೂರು ನಗರದಲ್ಲಿಯೂ ಜನರಿಗೆ ಕರೊನಾ ಭಯವಿದ್ದಂತೆ ಕಾಣಿಸುತ್ತಿಲ್ಲ, ಯುಗಾಗಿ ಹಿನ್ನೆಲೆಯಲ್ಲಿ ಸೋಮವಾರ ನಗರದ ಎಂ.ಜಿ.ರಸ್ತೆಯಲ್ಲಿ ಹೊಸಬಟ್ಟೆ, ಒಡವೆ ಹಾಗೂ ದಿನಸಿ ಕೊಂಡುಕೊಳ್ಳಲು ನಗರವಾಸಿಗಳು ಪ್ರಾಣದ ಮೇಲಿನ ಭಯ ತೊರೆದು ಮುಗಿಬಿದ್ದಿದ್ದರು. ಮಕ್ಕಳು, ಮಹಿಳೆಯರು ಹೊಸಬಟ್ಟೆ ಕೊಂಡುಕೊಂಡು ಹಬ್ಬಕ್ಕೆ ಸಿದ್ಧರಾದರು. ಹಬ್ಬದ ಸಂಭ್ರಮದಲ್ಲಿ ದೇಶದಲ್ಲಿಯೇ ಶಾಪವಾಗಿ ಕಾಡುತ್ತಿರುವ ಮಹಾಮಾರಿ ಕರೊನಾವನ್ನು ಜನರು ಮರೆತು ವರ್ತಿಸುತ್ತಿರುವುದು ಜಿಲ್ಲಾಡಳಿತದ ಆತಂಕ ಹೆಚ್ಚಿಸಿತು. ದೇವಾಲಯ, ಚರ್ಚ್, ಮಸೀದಿಗಳಲ್ಲಿಯೂ ಪ್ರಾರ್ಥನೆಗೆ ಅವಕಾಶ ನಿರಾಕರಿಸಲಾಗಿದ್ದರೂ ಜನರು ಮಾತ್ರ ಹಬ್ಬದ ನೆಪಮಾಡಿಕೊಂಡು ಮಾರುಕಟ್ಟೆಯಲ್ಲಿ ತಿರುಗುತ್ತಿರುವುದಕ್ಕೆ ಕಡಿವಾಣ ಹಾಕುವ ಅನಿವಾರ್ಯತೆಯಿದೆ.

    ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಸಭೆಗೂ ಕರೊನಾ ಅಡ್ಡಿ: ತುಮಕೂರು ಮಹಾನಗರ ಪಾಲಿಕೆಯಲ್ಲಿ ನಡೆಯಬೇಕಿದ್ದ ವಿವಿಧ ಸ್ಥಾಯಿ ಸಮಿತಿಗಳ ಸಭೆಯನ್ನು ಸೋಮವಾರ ಮುಂದೂಡಲಾಯಿತು. ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಗೆ ಪೂರ್ವಭಾವಿಯಾಗಿ ಸ್ಥಾಯಿ ಸಮಿತಿಗಳ ಸಭೆ ನಡೆಸಲಾಗುತ್ತದೆ. ಆದರೆ, ಕರೊನಾ ಭೀತಿ ಹಿನ್ನೆಲೆಯಲ್ಲಿ ಮಾ.31 ರವರೆಗೆ ಯಾವುದೇ ಸಭೆ-ಸಮಾರಂಭಗಳನ್ನು, ಕಾರ್ಯಕ್ರಮಗಳನ್ನು ನಡೆಸದಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು ಈ ಹಿನ್ನೆಲೆಯಲ್ಲಿ ಸ್ಥಾಯಿ ಸಮಿತಿಗಳ ಸಭೆಯನ್ನೂ ಮುಂದೂಡಲಾಯಿತು.

    ಜೀವನಕ್ಕಾಗಿ ನಗರಕ್ಕೆ ಹೋಗಿದ್ದೆವು, ಈಗ ಜೀವ ಉಳಿಸಿಕೊಳ್ಳುವುದೇ ಸವಾಲಾಗಿದೆ, ಮೊದಲು ಜೀವ, ಅ ಮೇಲೆ ಜೀವನ, ನಮ್ಮೂರಿಗೆ ಹೋದರಷ್ಟೇ ನಮ್ಮ ಜೀವ ಉಳಿಸಿಕೊಳ್ಳಬಹುದು. ಸರ್ಕಾರಿ ಬಸ್ ಓಡಿಸಿ ನಾವು ಊರಿಗೆ ಸೇರಿಕೊಳ್ಳಲಾದರೂ ಅವಕಾಶ ನೀಡಬೇಕಿತ್ತು.
    ಶಂಕರಪ್ಪ ಬುಕ್ಕಸಾಗರ, ಹೊಸದುರ್ಗ ತಾಲೂಕು

    ತನ್ನ ಸಾಮರ್ಥ್ಯ ಮೀರಿ ಪ್ರಯಾಣಿಕರನ್ನು ತುಂಬಿಸಿಕೊಂಡಿದ್ದ ಎರಡು ಖಾಸಗಿ ಬಸ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಮಹಾಮಾರಿ ಕರೊನಾ ತಡೆಯುವ ನಿಟ್ಟಿನಲ್ಲಿ ಪ್ರಯಾಣಿಕರ ಸುರಕ್ಷತೆಗೆ ಆಧ್ಯತೆ ನೀಡುವಂತೆ ಎಲ್ಲ ಬಸ್ ಮಾಲೀಕರಿಗೂ ಸೂಚಿಸಲಾಗಿದೆ.
    ಎಸ್.ರಾಜು
    ಪ್ರಾದೇಶಿಕ ಸಾರಿಗೆ ಅಧಿಕಾರಿ, ತುಮಕೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts