More

    ಸೈಕಲ್​ ಕದ್ದ, ಚೀಟಿ ಬರೆದಿಟ್ಟ- ಅದನ್ನು ಓದಿದ ಸೈಕಲ್​ ಮಾಲೀಕ ಕಣ್ಣೀರಾದ… ಅಂಥದ್ದೇನಿತ್ತು ಆ ಚೀಟಿಯಲ್ಲಿ?

    ಜೈಪುರ: ಲಾಕ್​ಡೌನ್​ನಿಂದ ನಲುಗಿರುವವರು ಅದೆಷ್ಟೋ ಮಂದಿ. ಅದರಲ್ಲಿಯೂ ವಲಸೆ ಕಾರ್ಮಿಕರ ಸ್ಥಿತಿಯಂತೂ ಕೇಳುವುದೇ ಬೇಡ. ರಾಜ್ಯ ಸರ್ಕಾರಗಳು ಈ ಕಾರ್ಮಿಕರಿಗೆ ಹಲವಾರು ಸೌಕರ್ಯಗಳನ್ನು ಒದಗಿಸಿದ್ದರೂ, ಏನೇನೋ ಕಾರಣಗಳಿಂದ ಹಲವು ಕಾರ್ಮಿಕರಿಗೆ ಅವು ತಲುಪಲೇ ಇಲ್ಲ. 
    ಇದೇ ಕಾರಣಕ್ಕೆ ಸರ್ಕಾರ ಸಾರಿಗೆ ವ್ಯವಸ್ಥೆ ಕಲ್ಪಿಸುವವರೆಗೂ ಕಾಯದೇ, ಅನೇಕ ವಲಸೆ ಕಾರ್ಮಿಕರು ತಮ್ಮೂರಿನತ್ತ ಮುಖ ಮಾಡಿದ್ದರು. ನಡೆದು, ಸೈಕಲ್​ನಲ್ಲಿ, ಸಿಕ್ಕ ಸಿಕ್ಕ ವಾಹನಗಳಲ್ಲಿ… ಹೀಗೆ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಪ್ರಯಾಣ ಮಾಡಿದರು.

    ಅಂಥ ಪಯಣಿಗನಲ್ಲಿ ಒಬ್ಬ ಮೊಹಮ್ಮದ್ ಇಕ್ಬಾಲ್ ಖಾನ್. ಈತ ಕೂಡ ವಲಸೆ ಕಾರ್ಮಿಕ. ಉತ್ತರ ಪ್ರದೇಶದ ಬರೇಲಿಯವ. ಕೆಲಸ ಮಾಡುತ್ತಿದ್ದುದು ರಾಜಸ್ಥಾನದ ಭರತ್ ಪುರ ಜಿಲ್ಲೆಯ ರಾರ್ಹಾ ಎಂಬ ಗ್ರಾಮದಲ್ಲಿ. ಲಾಕ್​ಡೌನ್​ನಿಂದಾಗಿ ಕೈಯಲ್ಲಿ ಕೆಲಸವಿಲ್ಲ. ಜತೆಯಲ್ಲಿ ಅಂಗವಿಕಲ ಮಗ ಸೇರಿದಂತೆ ಕುಟುಂಬಸ್ಥರು ಬೇರೆ. ದುಡಿದದ್ದೆಲ್ಲಾ ಲಾಕ್​ಡೌನ್​ ಸಮಯದಲ್ಲಿ ಖರ್ಚಾಗಿದೆ. ತುತ್ತು ಅನ್ನಕ್ಕೆ ಪರದಾಡುವ ಸ್ಥಿತಿ. ಸರ್ಕಾರ ಕೊಟ್ಟಿರುವ ಊಟದ ಸೌಲಭ್ಯ ಈತನಿಗೆ ಸಿಗುತ್ತಿದ್ದರೂ ಅಂಗವಿಕಲ ಮಗುವನ್ನು ಇಟ್ಟುಕೊಂಡು ಬೇರೆ ಊರಿನಲ್ಲಿ ಇರಲಾರದ ಸ್ಥಿತಿ. ಆದ್ದರಿಂದ  ಸುಮಾರು 250 ಕಿ.ಮೀ ದೂರದ ಊರನ್ನು ಸೇರಲೇಬೇಕು ಎಂಬ ತವಕ. ಆದರೆ ಹೇಗೆ?

    ಇದನ್ನೂ ಓದಿ: ‘ಮೋದಿಯನ್ನು ಕೊಲ್ಲುತ್ತೇನೆ’ ಎಂದ ಬಾಲಕ: ಮಕ್ಕಳಲ್ಲಿಯೂ ಬಿತ್ತಲು ಶುರುವಾಯಿತೇ ವಿಷಬೀಜ? ಬಿಜೆಪಿ ಟ್ವೀಟ್​

    ಈ ಮಗನನ್ನು ಹೊತ್ತು ಬಲುದೂರ ನಡೆದುಕೊಂಡು ಹೋಗುವ ಸಾಹಸ ಮಾಡಲು ಈತನಿಗೆ ಸಾಧ್ಯವಾಗಲಿಲ್ಲ. ಆದರೆ ಬೇರೆ ಯಾವುದೇ ವ್ಯವಸ್ಥೆಯೂ ಇರಲಿಲ್ಲ. ಅದನ್ನೇ ಯೋಚಿಸಿ ಊರಿನತ್ತ ಹೆಜ್ಜೆಹಾಕಿದಾಗ ಈತನಿಗೆ ಕಂಡದ್ದು, ಭರತ್​ಪುರದ ಸಾಹಿಬ್‌ ಸಿಂಗ್‌ ಎನ್ನುವವರ ಮನೆಯ ಮುಂದೆ ನಿಂತಿದ್ದ ಸೈಕಲ್​.

    ಮನಸ್ಸಿನಲ್ಲಿಯೇ ಸೈಕಲ್​ ಕದಿಯುವ ಕೆಟ್ಟ ಯೋಚನೆ ಬಂತು. ಇದು ತಪ್ಪು ಎಂದು ತಿಳಿದಿದ್ದರೂ ಮೊಹಮ್ಮದ್​ಗೆ ಬೇರೆ ಯಾವುದೇ ದಾರಿ ಕಾಣಿಸಲೇ ಇಲ್ಲ. ಥಟ್ಟನೆ ಸೈಕಲ್​ಗೆ ಕೈಹಾಕಿದ. ಆದರೆ ಅದ್ಯಾಕೋ ಕದಿಯುವ ಮನಸ್ಸು ಆಗಲೇ ಇಲ್ಲ. ಏನು ಮಾಡುವುದು ಎಂದು ತಿಳಿಯಲಿಲ್ಲ. ಸಿಕ್ಕ ಅವಕಾಶವನ್ನು ಬಿಡುವ ಮನಸ್ಸೂ ಬರಲಿಲ್ಲ. ಆದ್ದರಿಂದ ತನ್ನ ಬಳಿ ಇದ್ದ ಪೇಪರ್​ ಮತ್ತು ಪೆನ್ನನ್ನು ತೆಗೆದ. ಆ ಪೇಪರ್​ನಲ್ಲಿ ಮನಸ್ಸಿಗೆ ತೋಚಿದ್ದನ್ನು ಬರೆದು ಅದನ್ನು ಕಾಂಪೌಂಡ್​ ಮೇಲಿಟ್ಟು ಭಾರವಾದ ಮನಸ್ಸನ್ನು ಹಗುರ ಮಾಡಿಕೊಂಡು ಸೈಕಲ್​ ಮೇಲೆ ಮಗನನ್ನು ಕುಳ್ಳರಿಸಿಕೊಂಡು ಹೋಗಿಯೇಬಿಟ್ಟ.

    ಇದನ್ನೂ ಓದಿ: ಮೈಮೇಲೆ ಬಟ್ಟೆ ಇಲ್ಲದಿದ್ರೂ ಪರವಾಗಿಲ್ಲ, ತಲೆಗೊಂದು ನೂಡಲ್​ ಕಟ್ಟಿಕೊಳ್ಳಿ ಎಂದಿದೆ ಹೋಟೆಲ್​ಗಳು!

    ಮಾರನೆಯ ದಿನ ಸಿಂಗ್​, ಮನೆ ಎದುರು ಬಂದಾಗ ಸೈಕಲ್​ ಕಾಣಿಸಲಿಲ್ಲ. ಆತಂಕಗೊಂಡ ಅವರು ಅತ್ತಿತ್ತ ನೋಡಿದಾಗ ಚೀಟಿ ಕಾಣಿಸಿತು. ಅದನ್ನು ಬಿಡಿಸಿದರು. ಅದರಲ್ಲಿ ಹೀಗೆ ಬರೆದಿತ್ತು. ‘ನಾನೊಬ್ಬ ನಿಯತ್ತಿನ ಕಾರ್ಮಿಕ. ಹೆಸರು ಮೊಹಮ್ಮದ್ ಇಕ್ಬಾಲ್ ಖಾನ್. ಉತ್ತರ ಪ್ರದೇಶದ ಬರೇಲಿಯವ. ನಿಮ್ಮ ಪಾಲಿಗೆ ನಾನು ತಪ್ಪಿತಸ್ಥ, ಯಾಕೆಂದರೆ ನಾನು ನಿಮ್ಮ ಸೈಕಲನ್ನು ಕಳುವು ಮಾಡುತ್ತಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ. ನನಗೆ ಬರೇಲಿಗೆ ಹೋಗಲೇಬೇಕಾಗಿದೆ. ಆದರೆ ಹಾಗೆ ಹೋಗಲು ನನ್ನ ಬಳಿಯಲ್ಲಿ ಯಾವುದೇ ಸೌಕರ್ಯವಿಲ್ಲ, ನನಗೊಬ್ಬ ಅಂಗವಿಕಲ ಮಗನಿದ್ದಾನೆ. ಅವನನ್ನೂ ಕರೆದುಕೊಂಡು ಹೋಗಬೇಕು, ದಯವಿಟ್ಟು ಕ್ಷಮಿಸಿ ಎಂದಿತ್ತು.

    ಈ ಪತ್ರವನ್ನು ಓದಿದ ಸಿಂಗ್ ಅವರಿಗೆ ಆ ಕಾರ್ಮಿಕನ ಬಗ್ಗೆ ಮನ ಕರಗಿತು. ಸೈಕಲ್​ ಕಳುವು ಆಗಿದೆ ಎನ್ನುವ ವಿಷಯ ಮರೆತೇ ಹೋಯಿತು. ಆಪತ್ತಿನಲ್ಲಿ ಇರುವ ಒಬ್ಬನಿಗೆ ತನ್ನಿಂದ ಪರೋಕ್ಷವಾಗಿ ಸಹಾಯವಾಗಿದೆ ಎಂದು ಸಂತಸ ಪಟ್ಟುಕೊಂಡ ಅವರು, ಈ ಸಂಬಂಧ ಪೊಲೀಸರಿಗೆ ದೂರು ನೀಡಲಿಲ್ಲ.

    ಇದನ್ನೂ ಓದಿ: ಭಾರತದ ಕೆಂಪು ದೀಪದ ಹಿಂದಿದೆ ಕರೊನಾ ಭಯಂಕರ ರಹಸ್ಯ- ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಎಂದಿದೆ ಅಮೆರಿಕ

    ಈ ವಿಷಯ ಒಬ್ಬರ ಬಾಯಿಯಿಂದ ಒಬ್ಬರಿಗೆ ಹೋಗಿ, ಪತ್ರ ಭಾರಿ ವೈರಲ್​ ಆಗಿದೆ. ಸಿಂಗ್​ ಅವರ ಹೃದಯ ವೈಶಾಲ್ಯಕ್ಕೆ ಹಲವಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆತ ಒಳ್ಳೆಯ ಮನುಷ್ಯನೇ ಆಗಿದ್ದರೆ, ಖಂಡಿತವಾಗಿಯೂ ಸೈಕಲ್​ ಅನ್ನು ವಾಪಸ್​ ಮಾಡಬೇಕು ಎಂದು ಹಲವಾರು ಮಂದಿ ಪ್ರತಿಕ್ರಿಯಿಸಿದ್ದಾರೆ. ಸಿಂಗ್​ ಈಸ್​ ಕಿಂಗ್​ ಎಂದು ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    ಸೈಕಲ್​ ಕದ್ದ, ಚೀಟಿ ಬರೆದಿಟ್ಟ- ಅದನ್ನು ಓದಿದ ಸೈಕಲ್​ ಮಾಲೀಕ ಕಣ್ಣೀರಾದ... ಅಂಥದ್ದೇನಿತ್ತು ಆ ಚೀಟಿಯಲ್ಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts