More

  ಬಿಸಿಲ ಬೇಗೆಗೆ ದಣಿದ ರಾಜ್ಯಕ್ಕೆ ತಂಪು ನೀಡುತ್ತಿದೆ ವರ್ಷಧಾರೆ: ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

  ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ಝುಳ ಹೆಚ್ಚಳವಾಗುತ್ತಿರುವ ನಡುವೆಯೂ ಮುಂದಿನ ಒಂದು ವಾರ ಕೆಲವೆಡೆ ಗುಡುಗು ಮಿಂಚುಸಹಿತ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

  ಮಾ.23 ಮತ್ತು ಮಾ.24ರಂದು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಮಾ.19ರಿಂದ ಮುಂದಿನ ಮೂರು ದಿನ ಬೀದರ್​ನಲ್ಲಿ ವರ್ಷಧಾರೆಯಾಗಲಿದೆ. ಮಾ.19ರಂದು ಕಲಬುರಗಿ, ಮಾ.21ರಂದು ಕೊಪ್ಪಳ, ರಾಯಚೂರು, ಮಾ.19ರಿಂದ ಮುಂದಿನ ಮೂರು ದಿನ ಕೊಡಗು ಮತ್ತು ಮೈಸೂರಿನಲ್ಲಿ ಸಾಧಾರಣ ಮಳೆ ಬೀಳಲಿದೆ. ಮಾ.22ರಿಂದ ಮುಂದಿನ ಎರಡು ದಿನ ಬೆಂಗಳೂರು, ಬೆಂ. ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ಹಾಸನ, ದಾವಣಗೆರೆ, ಕೊಡಗು, ಕೋಲಾರ, ಮಂಡ್ಯ, ಮೈಸೂರು ಮತ್ತು ವಿಜಯನಗರದಲ್ಲಿ ಮಳೆ ಸುರಿಯಲಿದೆ ಎಂದು ಇಲಾಖೆ ತಿಳಿಸಿದೆ.

  ಮುಂಗಾರು ಆಶಾದಾಯಕ: ಕಳೆದ ವರ್ಷ ತೀವ್ರ ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ ಬರ ಕಾಣಿಸಿಕೊಂಡಿತು. ಆದರೆ, ಈ ಬಾರಿ ಮುಂಗಾರು ಆಶಾದಾಯಕವಾಗಿದೆ. ಉತ್ತಮ ವರ್ಷಧಾರೆಯಾಗಲಿದೆ. ಫೆಸಿಫಿಕ್ ಸಮುದ್ರದ ಪೂರ್ವ ಭಾಗದಲ್ಲಿ ಸಮುದ್ರ ನೀರಿನ ಉಷ್ಣಾಂಶ ವಾಡಿಕೆಗಿಂತ 1 ಡಿಗ್ರಿ ಸೆಲ್ಸಿಯಸ್​ನಿಂದ 1.5 ಡಿಗ್ರಿ ಸೆಲ್ಸಿಯಸ್​ವರೆಗೆ ಹೆಚ್ಚು ದಾಖಲಾದರೆ ಎಲ್ ನಿನೋ ಉಂಟಾಗುತ್ತದೆ. ಕಳೆದ ವರ್ಷ ಎಲ್ ನಿನೋ ಪ್ರಭಾವವು ಮುಂಗಾರು ಮೇಲೆ ಪರಿಣಾಮ ಬೀರಿತ್ತು. ಇದರಿಂದಾಗಿ ರಾಜ್ಯದಲ್ಲಿ ಮಳೆ ಕೊರತೆಯಾಗಿತ್ತು. ಆದರೆ, ಜಾಗತಿಕ ನಿಯಂತ್ರಕ ಸೂಚ್ಯಂಕ ಪ್ರಕಾರ ಕಳೆದ ಫೆಬ್ರವರಿಯಿಂದ ಎಲ್ ನಿನೋ ದುರ್ಬಲಗೊಂಡು ಮಧ್ಯಮ ಹಂತಕ್ಕೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ಮುಂಗಾರು ಮೇಲೆ ಇದು ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ. ಹೀಗಾಗಿ, ಉತ್ತಮ ಮಳೆ ಬೀಳುವ ಸಾಧ್ಯತೆ ಇದೆ.

  ಝುಳ ಹೆಚ್ಚಳ
  ರಾಜ್ಯದಲ್ಲಿ ನಿಧಾನವಾಗಿ ತಾಪಮಾನ ಹೆಚ್ಚುತ್ತಿರುವುದರಿಂದ ಜನರು ತತ್ತರಿಸುವಂತಾಗಿದೆ. ಯಾದಗಿರಿ, ವಿಜಯಪುರ, ರಾಯಚೂರು, ಕಲಬುರಗಿ, ಗದಗ, ಬಾಗಲಕೋಟೆ, ಬಳ್ಳಾರಿ ಸೇರಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ವಾರ ವಾಡಿಕೆಗಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚು ಉಷ್ಣಾಂಶ ದಾಖಲಾಗಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ವಾಡಿಕೆಯಂತೆ ಗರಿಷ್ಠ ತಾಪಮಾನದಲ್ಲಿ 36-37 ಡಿಗ್ರಿ ಸೆಲ್ಸಿಯಸ್​ವರೆಗೆ ಉಷ್ಣಾಂಶ ದಾಖಲಾಗಲಿದೆ. ದಕ್ಷಿಣ ಕರ್ನಾಟಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಸರಾಸರಿ 35 ಡಿಗ್ರಿ ಸೆಲ್ಸಿಯಸ್​ವರೆಗೆ ಉಷ್ಣಾಂಶ ಕಾಣಿಸಿಕೊಳ್ಳಲಿದೆ. ಮೈಸೂರು, ಮಂಡ್ಯ ಸೇರಿ ದಕ್ಷಿಣ ಕರ್ನಾಟಕದ ಒಂದೆರೆಡು ಜಿಲ್ಲೆಗಳಲ್ಲಿ 36-37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರಲಿದೆ.

  ರಾಜ್ಯದ ಕೆಲವೆಡೆ ಮಳೆ
  ಕೊಡಗು, ಕಲಬುರಗಿ, ರಾಯಚೂರು ಜಿಲ್ಲೆಯ ಕೆಲವೆಡೆ ಸೋಮವಾರ ಬಿರುಸಿನ ಮಳೆಯಾಗಿದೆ. ಮಡಿಕೇರಿ ಹಾಗೂ ಕುಶಾಲನಗರ, ವಿರಾಜಪೇಟೆ ತಾಲೂಕಿನ ವಿವಿಧೆಡೆ ಮಳೆ ಸುರಿದಿದೆ. ಬಿಸಿಲ ಧಗೆಯಿಂದ ನಲುಗಿದ್ದ ಜನರು ನಿಟ್ಟುಸಿರುಬಿಟ್ಟರು. ಮಳೆಯಿಂದಾಗಿ ಕಾಫಿ ತೋಟಗಳಿಗೆ ಅನುಕೂಲವಾಗಿದ್ದು, ಬೆಳೆಗಾರರು ಸಂತಸಗೊಂಡಿದ್ದಾರೆ. ಸೋಮವಾರ ಸಂಜೆ ಹೊತ್ತಿಗೆ ಬೀದರ್ ಜಿಲ್ಲೆಯ ಹಲವೆಡೆ ಮತ್ತು ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಕೆಲ ಭಾಗಗಳಲ್ಲಿ ಮೋಡಕವಿದ ವಾತಾವರಣ ಕಂಡಿತು. ಕುಂಚಾವರಂ ಸುತ್ತಲಿನ ಪ್ರದೇಶದಲ್ಲಿ ಮಧ್ಯಾಹ್ನ ಸುಮಾರು 25 ನಿಮಿಷ ಬಿರುಸಿನ ಮಳೆಯಾಗಿದೆ. ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಹಸಮಕಲ್ ಮತ್ತು ಪರಾಪುರ ಗ್ರಾಮದಲ್ಲಿ ಸೋಮವಾರ ಸಂಜೆ ಸುಮಾರಿಗೆ ಸಾಧಾರಣ ಮಳೆಯಾಗಿದೆ. ತಣ್ಣನೆ ಗಾಳಿಯೊಂದಿಗೆ ಸುಮಾರು ಹದಿನೈದು ನಿಮಿಷ ಮಳೆ ಸುರಿದಿದೆ.

  ಶಾಸ್ತ್ರೋಕ್ತವಾಗಿ ಸಹೋದರನನ್ನೇ ಮದುವೆಯಾದ ಮಹಿಳೆ! ಕಾರಣ ತಿಳಿದರೆ ಹೌಹಾರ್ತೀರಾ

  ಕರ್ಮದ ಫಲ ಸಿಲ್ಕ್​ ಸ್ಮಿತಾ ಸಾವಿಗೆ ಕಾರಣವಾಯ್ತಾ? ಅತಿದೊಡ್ಡ ರಹಸ್ಯ ಬಯಲು ಮಾಡಿದ ಹಿರಿಯ ನಟಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts