More

    ಅಯ್ಯಯ್ಯೋ.. ಬ್ಯಾಚೆಲರ್ಸ್​ಗೇನಿದು ಸಂಕಷ್ಟ? ನಂಬರ್ ಕೇಳ್ತಾರಂತೆ, ಒಬ್ರೇ ಇರೋರ್ ಮೇಲೆನೇ ಕಣ್ಣಂತೆ!

    ಬೆಂಗಳೂರು: ನೀವು ಬ್ಯಾಚೆಲರ್ಸ್​ಗೆ ಮನೆ ಬಾಡಿಗೆಗೆ ಕೊಟ್ಟಿದ್ದೀರಾ ಅಥವಾ ಅವಿವಾಹಿತರು ನಿಮ್ಮ ಮನೆ, ಫ್ಲ್ಯಾಟ್​, ಅಪಾರ್ಟ್​ಮೆಂಟ್​ಗಳಲ್ಲಿ ಒಬ್ಬರೇ ನೆಲೆಸಿದ್ದಾರಾ? ಹಾಗಿದ್ದರೆ ಅವರ ಮೇಲೊಂದು ಕಣ್ಣಿಡಿ.

    ಡ್ರಗ್ಸ್​ ಮಾಫಿಯಾ ನಿಯಂತ್ರಿಸುವ ಸಲುವಾಗಿ ಸರ್ಕಾರ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಪೊಲೀಸರು ಈ ಹಿನ್ನೆಲೆಯಲ್ಲಿ ನಗರದಲ್ಲಿ ಏಕಾಂಗಿಯಾಗಿ ವಾಸಿಸುತ್ತಿರುವ ಅವಿವಾಹಿತರ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದಾರೆ.

    ಅದಕ್ಕಾಗಿ ಪೊಲೀಸರು ಎಲ್ಲ ಅಪಾರ್ಟ್​ಮೆಂಟ್​, ಫ್ಲ್ಯಾಟ್​ಗಳಲ್ಲಿ ನೆಲೆಸಿರುವ ಬ್ಯಾಚೆಲರ್ಸ್​ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಹೀಗಾಗಿ ನೀವು ನಿಮ್ಮ ನಿಮ್ಮ ಮನೆ, ಅಪಾರ್ಟ್​ಮೆಂಟ್​, ಫ್ಲ್ಯಾಟ್​ಗಳಲ್ಲಿ ಒಬ್ಬರೇ ವಾಸಿಸುತ್ತಿರುವ ಅವಿವಾಹಿತರ ಹೆಸರು, ಫೋನ್​ ನಂಬರ್ ಇತ್ಯಾದಿ ಮಾಹಿತಿ ಸಂಗ್ರಹಿಸಿಡಿ. ಮಾತ್ರವಲ್ಲ ಅವರು ರಾತ್ರಿ ಮನೆಗೆ ತಡವಾಗಿ ಬರುತ್ತಿದ್ದರೆ, ತಡರಾತ್ರಿ ಪಾರ್ಟಿ ಮಾಡಿ ಗದ್ದಲ ಮಾಡುತ್ತಿದ್ದರೆ, ಅನುಮಾನಾಸ್ಪದ ಚಟುವಟಿಕೆಗಳಲ್ಲಿ ತೊಡಗಿದ್ದರೆ ಪೊಲೀಸರಿಗೆ ತಿಳಿಸಿ.. ಇಂಥದ್ದೊಂದು ಸಂದೇಶ ವಾಟ್ಸ್ಯಾಪ್​-ಸೋಷಿಯಲ್​ ಮೀಡಿಯಾಗಳಲ್ಲಿ ಹರಿದಾಡಿದ್ದು, ಅವಿವಾಹಿತರನ್ನು ಚಿಂತೆಗೀಡು ಮಾಡಿತ್ತು.

    ಮೊದಲೇ ಬೆಂಗಳೂರಿನಲ್ಲಿ ಬ್ಯಾಚೆಲರ್ಸ್​​ಗೆ ಮನೆ ಸಿಗುವುದು ಕಷ್ಟ. ಹಾಗಾದರೆ ಅವಿವಾಹಿತರು ಮಾತ್ರ ಡ್ರಗ್ಸ್ ತೆಗೆದುಕೊಳ್ಳುತ್ತಾರಾ? ಇದೆಂಥ ರೂಲ್ಸ್​? ಇದು ನಿಜವೇ? ಎಂಬಿತ್ಯಾದಿ ಕಮೆಂಟ್ಸ್​ ಇವುಗಳಿಗೆ ಬಂದಿದ್ದು ತೀವ್ರ ಅಸಮಾಧಾನ ವ್ಯಕ್ತವಾಗಿತ್ತು.

    ಇದು ಬೆಂಗಳೂರಿನ ಕಾಡುಗೋಡಿ/ವೈಟ್​ಫೀಲ್ಡ್​ ಸುತ್ತಲಿನ ರೆಸಿಡೆಂಟ್​ ವೆಲ್​ಫೇರ್​ ಅಸೋಸಿಯೇಷನ್​ಗಳಲ್ಲಿ ಹರಿದಾಡುತ್ತಿರುವ ಮೆಸೇಜ್​ ಎನ್ನಲಾಗುತ್ತಿದ್ದು, ನೆಟ್ಟಿಗರು ಇದರ ಬಗ್ಗೆ ಟ್ವಿಟರ್ ಮೂಲಕ ಬೆಂಗಳೂರು ಪೊಲೀಸರ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಪೊಲೀಸರು ಪ್ರತಿಕ್ರಿಯಿಸಿದ್ದು, ಅಂತಹ ಯಾವುದೇ ನೋಟಿಸ್​/ಸುತ್ತೋಲೆ ಕಾಡುಗೋಡಿ ಅಥವಾ ವೈಟ್​ಫೀಲ್ಡ್​ ಪೊಲೀಸ್​ ಸ್ಟೇಷನ್​ಗಳಿಂದ ಹೊರಡಿಸಿಲ್ಲ ಎಂಬ ಸ್ಪಷ್ಟನೆ ನೀಡಿದ್ದಾರೆ. ಸುಳ್ಳು ಮಾಹಿತಿ ಹರಿದಾಡಿದ್ದರಿಂದ ಚಿಂತೆಗೀಡಾಗಿದ್ದ ಬ್ಯಾಚೆಲರ್ಸ್ ಕೊನೆಗೂ ಪೊಲೀಸರ ಸ್ಪಷ್ಟನೆಯಿಂದಾಗಿ ನಿರಾಳರಾಗುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts