More

    ವಿತರಣಾ ನಷ್ಟ ಪ್ರಮಾಣ ಇಳಿಕೆ

    ಭರತ್ ಶೆಟ್ಟಿಗಾರ್ ಮಂಗಳೂರು
    ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ವಿದ್ಯುತ್ ವಿತರಣಾ ನಷ್ಟ ಪ್ರಮಾಣ ಕಳೆದ ಏಳು ವರ್ಷಗಳಿಂದ ಇಳಿಕೆ ಹಾದಿಯಲ್ಲಿದೆ.
    ಕಂಪನಿಯು 2014-15ರಲ್ಲಿ ಶೇ.11.96 ವಿತರಣಾ ನಷ್ಟ ಹೊಂದಿತ್ತು. ಅದು 2020-21ನೇ ಹಣಕಾಸು ವರ್ಷದಲ್ಲಿ ಶೇ.10.07ಕ್ಕೆ ತಲುಪಿದೆ. ಆ ಮೂಲಕ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಕನಿಷ್ಠ ನಷ್ಟ ದಾಖಲಿಸಿದ ಕೀರ್ತಿಗೆ ಪಾತ್ರವಾಗಿದೆ.
    ನಷ್ಟ ಕುಗ್ಗಿಸುವ ನಿಟ್ಟಿನಲ್ಲಿ ಮೆಸ್ಕಾಂ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದು, ಗುಣಮಟ್ಟದ ವಿದ್ಯುತ್ ವಿತರಣೆಯಿಂದ ಇದು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಪ್ರಮಾಣ ಮತ್ತಷ್ಟು ತಗ್ಗಿಸುವ ಗುರಿ ಹೊಂದಿದೆ. ಇದೇ ವೇಳೆ ವಿದ್ಯುತ್ ವಿತರಣಾ ಪರಿವರ್ತಕಗಳ ವಿಫಲತೆ ಪ್ರಮಾಣವೂ ಕಡಿಮೆಯಾಗಿದೆ. 2015-16ರಲ್ಲಿ ಶೇ.11.88 ಇದ್ದ ವಿಫಲತೆ 2020-21ನೇ ಸಾಲಿನಲ್ಲಿ(ಡಿಸೆಂಬರ್ ವರೆಗೆ) ಶೇ.6.62ಕ್ಕೆ ಇಳಿದಿದೆ. ಇದೂ ವಿತರಣಾ ನಷ್ಟ ಕಡಿಮೆಯಾಗಲು ಕಾರಣ ಎನ್ನುತ್ತಾರೆ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ.

    ಮೆಸ್ಕಾಂ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ 24,049 ಚದರ ಕಿ.ಮೀ. ವಿಸ್ತೀರ್ಣ ವ್ಯಾಪ್ತಿ ಹೊಂದಿದೆ. ಡಿಸೆಂಬರ್ ಅಂತ್ಯಕ್ಕೆ ಗ್ರಾಹಕರ ಸಂಖ್ಯೆ 24.88 ಲಕ್ಷ ತಲುಪಿದೆ. ಇದರಲ್ಲಿ 18.22 ಲಕ್ಷ ಗೃಹಬಳಕೆ, 3.62 ಲಕ್ಷ ಕೃಷಿ ಪಂಪ್‌ಸೆಂಟ್, 2.27 ಲಕ್ಷ ವಾಣಿಜ್ಯ, 34 ಸಾವಿರ ಕೈಗಾರಿಕೆ, 26 ಸಾವಿರ ಬೀದಿ ದೀಪ, 17 ಸಾವಿರ ನೀರು ಸರಬರಾಜು ಸ್ಥಾವರ ಒಳಗೊಂಡಿದೆ.

    ಕಂದಾಯ ಸಂಗ್ರಹಣಾ ದಕ್ಷತೆ: ರಾಜ್ಯದ ಇತರ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳಿಗಿಂತ ಮೆಸ್ಕಾಂ ಕಂದಾಯ ಸಂಗ್ರಹಣೆಯಲ್ಲಿ ದಕ್ಷತೆ ಹೊಂದಿದೆ. 2015-16ರಲ್ಲಿ ಶೇ.102ರಷ್ಟು ಕಂದಾಯ ಸಂಗ್ರಹವಾಗಿತ್ತು. 2016-17 ಶೇ.99, 2017-18ರಲ್ಲಿ ಶೇ.105, 2018-19ರಲ್ಲಿ ಶೇ.99ರಷ್ಟು ಕಂದಾಯ ಸಂಗ್ರಹವಾಗಿತ್ತು. ಪ್ರಸಕ್ತ ಸಾಲಿನಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಸಂಗ್ರಹ ಪ್ರಮಾಣ (ಇಲ್ಲಿಯವರೆಗೆ ಶೇ.96) ಕಡಿಮೆಯಾಗಿದೆ. ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ಬಿಲ್ ಕಲೆಕ್ಷನ್‌ಗೆ ಬ್ರೇಕ್ ಬಿದ್ದಿತ್ತು. ಪ್ರಸ್ತುತ ಯಥಾಸ್ಥಿತಿಗೆ ಮರಳುತ್ತಿದೆ.

    ಸಿಬ್ಬಂದಿ ಕೊರತೆ ನಡುವೆಯೂ ಸಾಧನೆ: ಮೆಸ್ಕಾಂನ ಗ್ರೂಪ್ ‘ಎ’ 269 ಹುದ್ದೆಗಳಲ್ಲಿ 197 ಮಂದಿ ಕಾರ್ಯನಿರ್ವಹಿಸುತ್ತಿದ್ದು, 75 ಹುದ್ದೆ ಖಾಲಿ ಇದೆ. ಗ್ರೂಪ್ ‘ಬಿ’ಯ 372ರ ಪೈಕಿ 302 ಭರ್ತಿಯಾಗಿ, 67 ಖಾಲಿ ಇದೆ. ಗ್ರೂಪ್ ‘ಸಿ’ಯ 2824 ಹುದ್ದೆಗಳ ಪೈಕಿ 2032 ಭರ್ತಿಯಾಗಿದ್ದು, 792 ಹುದ್ದೆಗಳು ಖಾಲಿ ಇವೆ. ಗ್ರೂಪ್ ‘ಡಿ’ಯ 5809 ಹುದ್ದೆಗಳ ಪೈಕಿ 2866 ಹುದ್ದೆಗಳು ಭರ್ತಿಯಾಗಿದ್ದು, ಶೇ.50.66 ಅಂದರೆ 2943 ಹುದ್ದೆಗಳು ಖಾಲಿ ಇವೆ. ಸಿಬ್ಬಂದಿ ಕೊರತೆ ನಡುವೆಯೂ ಮೆಸ್ಕಾಂ ರಾಜ್ಯದ ಇತರ ವಿದ್ಯುತ್ ಸರಬರಾಜು ಸಂಸ್ಥೆಗಳಿಗಿಂತ ಉತ್ತಮ ಕಾರ್ಯನಿರ್ವಹಣೆ ಮಾಡುತ್ತಿದೆ.

    ಹಣಕಾಸು ವರ್ಷ ನಷ್ಟ ಪ್ರಮಾಣ
    2014 ಶೇ.11.96
    2015 ಶೇ.11.57
    2016 ಶೇ.11.50
    2017 ಶೇ.11.40
    2018 ಶೇ.11.32
    2019 ಶೇ.10.52
    2020 ಶೇ.10.07

    ಮೆಸ್ಕಾಂ ವ್ಯಾಪ್ತಿಯಲ್ಲಿ 45 ಸಾವಿರ ಡಿಟಿಸಿ ಮೀಟರ್‌ಗಳನ್ನು ಅಳವಡಿಸಲಾಗಿದ್ದು, ಅತಿ ಉದ್ದವಾದ ಫೀಡರ್‌ಗಳನ್ನು ಪತ್ತೆ ಹಚ್ಚಿ ನಡುವೆ ಟ್ರಾನ್ಸ್‌ಫಾರ್ಮರ್‌ಗಳನ್ನು ಸೇರ್ಪಡೆ ಮಾಡಲಾಗಿದೆ. ಇದರಿಂದ ವಿತರಣಾ ನಷ್ಟ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಜತೆಗೆ ವಿದ್ಯುತ್ ನಷ್ಟವಾಗುವ ನಿಖರ ಕಾರಣ ಪತ್ತೆ ಹಚ್ಚಿ, ಅವುಗಳನ್ನು ಸರಿಪಡಿಸುವ ಕೆಲಸವೂ ನಡೆಯುತ್ತಿದೆ.
    ಪ್ರಶಾಂತ್ ಕುಮಾರ ಮಿಶ್ರಾ ವ್ಯವಸ್ಥಾಪಕ ನಿರ್ದೇಶಕ, ಮೆಸ್ಕಾಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts