More

    ಹಣ ಪಾವತಿಸಿದ್ದರೂ ಟಿಸಿ, ಕಂಬ ಒದಗಿಸಿಲ್ಲ ಮೆಸ್ಕಾಂ

    ಕಡೂರು: ಅಕ್ರಮ-ಸಕ್ರಮ ಯೋಜನೆಯಡಿ ಹಣ ಪಾವತಿಸಿದ್ದು, ನಿಡಘಟ್ಟ ಭಾಗದಲ್ಲಿ ಇದುವರೆಗೂ ಟಿಸಿ ಮತ್ತು ಕಂಬಗಳನ್ನು ಒದಗಿಸಿಲ್ಲ. ಬೇಸಿಗೆಯಲ್ಲಿ ನೀರಿಗೆ ಸಮಸ್ಯೆಯಾಗುತ್ತದೆ. ಅಕ್ರಮ-ಸಕ್ರಮ ಯೋಜನೆ ಕಾಮಗಾರಿ ಪೂರ್ಣಗೊಳಿಸಿಕೊಡಬೇಕು ಎಂದು ಕೆಂಚನಹಳ್ಳಿ ನಟರಾಜ್ ಒತ್ತಾಯಿಸಿದರು.

    ಮೆಸ್ಕಾಂ ಉಪವಿಭಾಗೀಯ ಕಚೇರಿಯಲ್ಲಿ ಮಂಗಳವಾರ ನಡೆದ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಟಿಸಿಗಳು ಮತ್ತು ಕಂಬಗಳನ್ನು ಅಳವಡಿಸಲು ಮೆಸ್ಕಾಂ ಅಧಿಕಾರಿಗಳು ನಿರ್ಲಕ್ಷೃ ವಹಿಸುತ್ತಿದ್ದಾರೆ. ಬಹಳಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಮೆಸ್ಕಾಂ ಹಿರಿಯ ಅಧಿಕಾರಿಗಳು ಗಮನಹರಿಸಬೇಕು ಎಂದರು.
    ಗೋವಿಂದಪುರ ಗ್ರಾಮದ ಜಯರಾಮ್ ಮಾತನಾಡಿ, ಎಸ್‌ಸಿಪಿ ಯೋಜನೆಯಡಿ ವಿದ್ಯುತ್ ಕಂಬಗಳನ್ನು ಅಳವಡಿಸಿದ್ದರೂ ಟಿಸಿಗಳನ್ನು ಒದಗಿಸಿಕೊಟ್ಟಿಲ್ಲ. ತುರ್ತಾಗಿ ಟಿಸಿ ಅಳವಡಿಸಿಕೊಡುವಂತೆ ಮನವಿ ಮಾಡಿದರು.
    ಮೆಸ್ಕಾಂ ಉಪವಿಭಾಗೀಯ ಕಾರ್ಯನಿರ್ವಾಹಕ ಅಭಿಯಂತರ ಲಿಂಗರಾಜು ಮಾತನಾಡಿ, 10 ದಿನಗಳ ಒಳಗೆ ಟಿಸಿ ನೀಡಲಾಗುತ್ತದೆ. ಅಕ್ರಮ-ಸಕ್ರಮ ಯೋಜನೆಯ ಕಾಮಗಾರಿ ಟೆಂಡರ್ ಪ್ರಕ್ರಿಯೆ ಹಂತದಲ್ಲಿದ್ದು, ಟೆಂಡರ್ ಮುಕ್ತಾಯಗೊಂಡ ಬಳಿಕ ಜ್ಯೇಷ್ಠತೆ ಆಧಾರದಲ್ಲಿ ಕಾಮಗಾರಿ ನಿರ್ವಹಿಸಿಕೊಡಲಾಗುತ್ತದೆ ಎಂದರು.
    ಪಟ್ಟಣದ ಕೆಲ ಭಾಗಗಳಲ್ಲಿ ವಿದ್ಯುತ್ ಕಂಬಗಳ ಮೇಲೆ ಟೆಲಿಫೋನ್ ಮತ್ತು ಡಿಶ್ ಕೇಬಲ್‌ಗಳನ್ನು ಅಳವಡಿಸಿದ್ದಾರೆ. ಕಂಬದಲ್ಲಿ ವಿದ್ಯುತ್ ಸಮಸ್ಯೆಯಾದಾಗ ಸರಿಪಡಿಸಲು ಲೈನ್‌ಮ್ಯಾನ್‌ಗಳಿಗೆ ತೊಂದರೆಯಾಗುತ್ತಿದೆ. ಬಹುಮುಖ್ಯವಾಗಿ ಕೋಟೆ ಶಂಕರ ಮಠ ಮತ್ತು ಫರ್ಲ್ಪ್ ಕ್ಲಬ್ ಬಳಿಯ ವಿದ್ಯುತ್ ಕಂಬಗಳಿಗೆ ಹೆಚ್ಚು ಕೇಬಲ್ ವೈರ್‌ಗಳನ್ನು ಅಳವಡಿಸಿದ್ದಾರೆ. ಅವುಗಳನ್ನು ಸರಿಪಡಿಸಬೇಕು ಹಾಗೂ ಮೆಸ್ಕಾಂ ಕಚೇರಿಯಲ್ಲಿ ಗ್ರಾಹಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡುವಂತೆ ವಿದ್ಯುತ್ ಗುತ್ತಿಗೆದಾರ ನಜೀರ್ ಮನವಿ ಮಾಡಿದರು.
    ಮತಿಘಟ್ಟ, ನಿಡಘಟ್ಟ ಭಾಗದಲ್ಲಿ ವಿದ್ಯುತ್ ತಂತಿಗಳು ಜೋತುಬಿದ್ದಿವೆ. ಜತೆಯಲ್ಲಿ ಮಾರ್ಗದ ರಸ್ತೆ ಬದಿ ವೈರ್‌ಗಳ ಮೇಲೆ ಗಿಡಗಂಟಿಗಳು ಬೆಳೆದಿದ್ದು ಕೂಡಲೇ ತೆರವುಗೊಳಿಸುವಂತೆ ಲಕ್ಷ್ಮೀಸಾಗರದ ಪ್ರದೀಪ್ ಒತ್ತಾಯಿಸಿದರು.
    ಮೆಸ್ಕಾಂ ನಗರ ಅಭಿಯಂತರ ಮಂಜೇಗೌಡ, ತಾಂತ್ರಿಕ ಶಾಖೆ ವ್ಯವಸ್ಥಾಪಕ ಸಿ.ಎಂ.ಪ್ರಸನ್ನ, ಸಿ.ವಿ.ರಾಜು, ಎಚ್.ಎಂ.ಪ್ರಶಾಂತ್ ಲೋಹಿತ್‌ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts