More

    ಎಂಇಎಸ್ ಪುಂಡಾಟಿಕೆಗೆ ಬ್ರೇಕ್

    ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿರುವ ಕನ್ನಡ ಧ್ವಜ ತೆರವುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನಾ ರ‌್ಯಾಲಿ ನೆಪದಲ್ಲಿ ಪುಂಡಾಟಿಕೆಗೆ ಮುಂದಾದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕಾರ್ಯಕರ್ತರನ್ನು ಪೊಲೀಸರು ಸೋಮವಾರ ತಡೆಹಿಡಿದರು.

    ನಗರದ ಪಾಲಿಕೆ ಆವರಣದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಸ್ಥಾಪಿಸಿದ್ದ ಕನ್ನಡ ಧ್ವಜ ತೆರವುಗೊಳಿಸುವಂತೆ ಆಗ್ರಹಿಸಿ ಎಂಇಎಸ್ ಕಾರ್ಯಕರ್ತರು, ಪಾಲಿಕೆಯ ಮಾಜಿ ಸದಸ್ಯರು ನಗರದ ಸಂಭಾಜಿ ವೃತ್ತದಿಂದ ಕಾಲೇಜ್ ರಸ್ತೆಯಲ್ಲಿರುವ ಸರ್ದಾರ್ ಹೈಸ್ಕೂಲ್‌ವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.

    ಲಘು ಲಾಠಿ ಪ್ರಹಾರ: ನಾಡಧ್ವಜದ ವಿರೋಧ ವಾಗಿ ಭಗವಾಧ್ವಜ ನೆಡಲು ಮುಂದಾದ ಎಂಇಎಸ್ ಮಹಿಳಾ ಕಾರ್ಯಕರ್ತೆಯರನ್ನು ಲಾಠಿ ಬೀಸಿ ಚದುರಿಸಿದರು. ಬಳಿಕ ಪೊಲೀಸರು ಅವರನ್ನು ವಶಕ್ಕೆ ಪಡೆದು, ಸ್ವಲ್ಪ ಸಮಯದ ಬಳಿಕ ಬಿಡುಗಡೆ ಮಾಡಿದರು.

    ಸಂಚು ವಿಲ: ರಾಜ್ಯ ಸರ್ಕಾರ ಮತ್ತು ನಾಡ ವಿರೋಧ ಘೋಷಣೆ ಕೂಗುತ್ತ ಪ್ರತಿಭಟನಾ ರ‌್ಯಾಲಿ ನಡೆಸುತ್ತಿದ್ದ ಎಂಇಎಸ್ ಕಾರ್ಯಕರ್ತರು ಅಲ್ಲಲ್ಲಿ ವಾಹನಗಳ ಮೇಲೆ ಕಲ್ಲು ಎಸೆದು ಗಲಾಟೆ ನಡೆಸಲು ಸಂಚು ರೂಪಿಸಿದ್ದರು. ಇದನ್ನು ಮೊದಲೇ ಅರಿತುಕೊಂಡಿದ್ದ ಪೊಲೀಸರು ಮಹಾನಗರ ಪಾಲಿಕೆ ಆವರಣದಲ್ಲಿ ಭಗವಾ ಧ್ವಜ ನೆಡಲು ಜಿಲ್ಲಾಧಿಕಾರಿ ಕಚೇರಿ ಮಾರ್ಗವಾಗಿ ಪಾಲಿಕೆ ಕಡೆಗೆ ರ‌್ಯಾಲಿ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಆಗಮಿಸಿದ ಪೊಲೀಸರು ರ‌್ಯಾಲಿ ತಡೆದರು. ಇದರಿಂದ ಪೊಲೀಸರು ಮತ್ತು ಎಂಇಎಸ್ ಮುಖಂಡರ ನಡುವೆ ವಾಗ್ವಾದ ನಡೆಯಿತು.

    ಕನ್ನಡದಲ್ಲೇ ಮಾತನಾಡಿ ಅಭಿಮಾನ ಮೆರೆದ ಡಿಸಿ

    ಪೊಲೀಸರು ರ‌್ಯಾಲಿ ತಡೆದಿರುವುದನ್ನು ಖಂಡಿಸಿ ಎಂಇಎಸ್ ಕಾರ್ಯಕರ್ತರು ರಸ್ತೆ ಮಧ್ಯೆಯೇ ಕುಳಿತು ಧರಣಿ ನಡೆಸಿದರು. ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು, ಎಂಇಎಸ್ ಮುಖಂಡರ ಬೇಡಿಕೆಗಳನ್ನು ಆಲಿಸಿದರು. ಮನವಿ ಸ್ವೀಕರಿಸಿದ ಅವರ ಬಳಿ, ಹಿಂದಿಯಲ್ಲಿ ಮಾತನಾಡುವಂತೆ ಎಂಇಎಸ್ ಮುಖಂಡರಾದ ದೀಪಕ ದಳವಿ, ಶುಭಂ ಶೇಳಕೆ, ಪ್ರಕಾಶ
    ಶಿರೋಳಕರ್, ಪಾಲಿಕೆಯ ಮಾಜಿ ಸದಸ್ಯರು ಒತ್ತಡ ಹಾಕಿದರು. ಆದರೆ, ಅದಕ್ಕೆಲ್ಲ ಮಣಿಯದ ಡಿಸಿ ಹಿರೇಮಠ, ‘ಕನ್ನಡ ಆಡಳಿತ ಭಾಷೆ. ಕನ್ನಡದಲ್ಲೇ ಮಾತನಾಡುತ್ತೇನೆ’ ಎಂದು ತಿರುಗೇಟು ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts