More

    ಎಂಇಎಸ್ ನಿಷೇಧಿಸಲು ಒತ್ತಾಯಿಸಿ ದಾವಣಗೆರೆಯಲ್ಲಿ ನಾಳೆ ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದಿಂದ ಪ್ರತಿಭಟನೆ

    ದಾವಣಗೆರೆ: ಕನ್ನಡ ಧ್ವಜ ಸುಟ್ಟಿದ್ದು, ಶಿವಾಜಿ ಪ್ರತಿಮೆಗೆ ಮಸಿ ಬಳಿದಿದ್ದು ಮತ್ತು ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿದ ಘಟನೆಗಳನ್ನು ಖಂಡಿಸಿ ಹಾಗೂ ಎಂಇಎಸ್ ನಿಷೇಧಿಸಲು ಒತ್ತಾಯಿಸಿ ನಗರದಲ್ಲಿ ಬುಧವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ಮುಖಂಡ ಯಶವಂತರಾವ್ ಜಾಧವ್ ಹೇಳಿದರು.

    ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬುಧವಾರ ಬೆಳಗ್ಗೆ 11 ಗಂಟೆಗೆ ಸಂಗೊಳ್ಳಿ ರಾಯಣ್ಣ ಪ್ರತಿಮೆ, ವೀರ ಮದಕರಿ ನಾಯಕ, ಛತ್ರಪತಿ ಶಿವಾಜಿ, ಬಸವೇಶ್ವರರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ, ನಂತರ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದರು.

    ಶಿವಾಜಿ ಮಹಾರಾಜರು ಮತ್ತು ಸಂಗೊಳ್ಳಿ ರಾಯಣ್ಣ ಇಬ್ಬರೂ ದೇಶಭಕ್ತರಾಗಿದ್ದು ಅಂಥವರ ಪ್ರತಿಮೆಗಳಿಗೆ ಅವಮಾನ ಮಾಡುವುದು ಸರಿಯಲ್ಲ. ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದರು.

    ರಾಜ್ಯದಲ್ಲಿ ಮರಾಠಾ ಸಮುದಾಯದ 40 ಲಕ್ಷ ಜನರಿದ್ದು, ಆ ಪೈಕಿ 4-5 ಲಕ್ಷ ಮಂದಿ ಎಂಇಎಸ್ ಕಡೆಗೆ ಒಲವಿರುವ ಜನ ಇರಬಹುದು. ಉಳಿದ 35 ಲಕ್ಷ ಮಂದಿ ಕರ್ನಾಟಕದಲ್ಲೇ ಹುಟ್ಟಿ ಬೆಳೆದಿದ್ದೇವೆ, ಕನ್ನಡವನ್ನೇ ಮಾತನಾಡುತ್ತೇವೆ ಎಂದು ಹೇಳಿದರು.
    ಎಂಇಎಸ್ ಸಂಘಟನೆ ನಿಷೇಧಿಸಲು ಸರ್ಕಾರ ಗಟ್ಟಿ ತೀರ್ಮಾನ ತೆಗೆದುಕೊಳ್ಳಲಿ, ನಾವು ಬೆಂಬಲವಾಗಿ ನಿಲ್ಲುತ್ತೇವೆ ಎಂದರು. ಎಂಇಎಸ್‌ನ ಪುಂಡಾಟಿಕೆ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನವಾಗಿದೆ ಎಂದು ಸಂಘದ ಅಧ್ಯಕ್ಷ ಡಿ. ಮಾಲತೇಶರಾವ್ ಜಾಧವ್ ಆರೋಪಿಸಿದರು.

    ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ಪ್ರತಿಭಟನೆಯಲ್ಲಿ ಜಿಲ್ಲಾ ಕುರುಬರ ಯುವ ಘಟಕ ಸೇರಿ ಸಮಾಜದ ವಿವಿಧ ಸಂಘಟನೆಗಳು ಪಾಲ್ಗೊಳ್ಳಲಿವೆ ಎಂದು ತಿಳಿಸಿದರು. ಮರಿಯೋಜಿರಾವ್, ಗೋಪಾಲರಾವ್, ಪರಶುರಾಮ್, ಗೌರಮ್ಮ, ಮಂಜುಳಮ್ಮ, ಚೇತನಾಬಾಯಿ, ರಾಕೇಶ್, ಸಂತೋಷ್ ಇದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts