More

    ಮೇಲುಕೋಟೆಯಲ್ಲಿ ಬ್ರಹ್ಮೋತ್ಸವದಲ್ಲಿ ಮೂರು ಲಕ್ಷ ಜನರು ಭಾಗಿ: ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಹೇಳಿಕೆ

    ಮಂಡ್ಯ: ವಿಶ್ವವಿಖ್ಯಾತ ಮೇಲುಕೋಟೆಯಲ್ಲಿ ಏ.1ರಂದು ನಡೆದ ವೈರಮುಡಿ ಬ್ರಹ್ಮೋತ್ಸವದಲ್ಲಿ ಮೂರು ಲಕ್ಷ ಜನರು ಭಾಗಿಯಾಗಿದ್ದಾರೆ. ಅಂತೆಯೇ ಇಡೀ ಧಾರ್ಮಿಕ ಕೈಂಕರ್ಯಗಳನ್ನು ಕಣ್ತುಂಬಿಕೊಂಡಿದ್ದಾರೆ. ಇನ್ನು ಏ.4ರಂದು ನಡೆಯಲಿರುವ ಚಲುವನಾರಾಯಣಸ್ವಾಮಿ ಶ್ರೀಮನ್ಮಹಾರಥೋತ್ಸವಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಮಾಹಿತಿ ನೀಡಿದರು.
    ಎಲ್ಲರ ಸಹಕಾರದಿಂದ ಬ್ರಹ್ಮೋತ್ಸವ ಯಶಸ್ವಿಯಾಗಿ ನಡೆಯಿತು. ಅದರಂತೆ ಬಹಳ ವಿಜೃಂಭಣೆಯಿಂದ ಚಲುವನಾರಾಯಣಸ್ವಾಮಿ ಶ್ರೀಮನ್ಮಹಾರಥೋತ್ಸವವನ್ನು ಆಯೋಜಿಸಲಾಗಿದೆ. ಬೆಳಗ್ಗೆ 9ಗಂಟೆಗೆ ಉತ್ಸವ ಮೂರ್ತಿಯನ್ನು ಅಲಂಕಾರಗೊಳಿಸಿ ಯಾತ್ರಾದಾನದ ಪೂರ್ವಕ ದೇವಾಲಯದಿಂದ ವೇದಗೋಷ್ಠಿ ಪಠಣದೊಂದಿಗೆ ಮೆರವಣಿಗೆ ಸಹಿತ ರಥ ಮಂಟಪದಲ್ಲಿ ಮೂಹೂರ್ತದೊಂದಿಗೆ ರಥೋತ್ಸವ ರೂಢರಾಗುತ್ತಾರೆ. ಬಳಿಕ ದ್ರಾವಿಡ ಪ್ರಬಂಧ ಪೂರ್ವಕ ರಥಕ್ಕೆ ಚಾಲನೆ ಸಿಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
    ಈ ರಥೋತ್ಸವಕ್ಕೆ ರಾಜ್ಯ, ಅಂತರಾಜ್ಯದಿಂದ ಸಹಸ್ರಾರೂ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ. ಆದ್ದರಿಂದ ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇನ್ನು ಈ ಬಾರಿ ರಥದ ದುರಸ್ತಿಯನ್ನು ಸಮರ್ಪಕ ರೀತಿಯಲ್ಲಿ ಸಜ್ಜುಗೊಳಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಭಿಪ್ರಾಯದ ಮೇರೆಗೆ ರಥದ ಹಿಂದಿನ ಎರಡು ಚಕ್ರವನ್ನು ಹೊಸದಾಗಿ ನಿರ್ಮಿಸಿ ಅಳವಡಿಸಲಾಗಿದೆ. ರಥೋತ್ಸವ ಸಂಚರಿಸುವ ಬೀದಿಗಳ ಸ್ವಚ್ಛತೆಗೆ ಕ್ರಮ ವಹಿಸಲಾಗಿದೆ. ಬಿಸಿಲು ಹೆಚ್ಚಿರುವುದರಿಂದ ರಥ ಚಲಿಸುವ ಮಾರ್ಗದಲ್ಲಿ ಆಗಿಂದ್ದಾಗೆ ಟ್ಯಾಂಕರ್ ಮೂಲಕ ನೀರನ್ನು ಹಾಕಿಸಲಾಗುತ್ತಿದೆ. ಭಕ್ತರಿಗೆ ಅನುಕೂಲವಾಗಲೆಂದು ಸ್ವಚ್ಛ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಪ್ರಮುಖ ಸ್ಥಳದಲ್ಲಿ ನೀರಿನ ಟ್ಯಾಂಕ್ ಇಡಲಾಗಿದೆ ಎಂದರು.
    ಭದ್ರತೆ ಹಾಗೂ ಭಕ್ತರ ಹಿತದೃಷ್ಟಿಯಿಂದ ವಾಹನ ನಿಲುಗಡೆಗೆ ಮೇಲುಕೋಟೆಯ ಹೊರಭಾಗದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಆಯಕಟ್ಟಿನ ಸ್ಥಳದಲ್ಲಿ ಅಗತ್ಯ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಅಂತೆಯೇ ಭಕ್ತರ ಅನುಕೂಲಕ್ಕಾಗಿ ಬಯೋ ಶೌಚಗೃಹ ಅಳವಡಿಸಲಾಗಿದೆ. ಇದಲ್ಲದೆ ತಾತ್ಕಾಲಿಕ ಚಿಕಿತ್ಸಾಲಯ, ಆಂಬುಲೆನ್ಸ್ ವ್ಯವಸ್ಥೆ ಜತೆಗೆ ವೈದ್ಯರು ಹಾಗೂ ಶುಶ್ರೂಷಕರ ನಿಯೋಜನೆ ಮಾಡಲಾಗಿದೆ. ಆಗಮಿಸುವ ಭಕ್ತರ ಸಂಚಾರಕ್ಕಾಗಿ ಬೆಂಗಳೂರು, ಮೈಸೂರು, ಮಂಡ್ಯ ಹಾಗೂ ಇತರೆ ಜಿಲ್ಲಾ ಕೇಂದ್ರಗಳಿಂದ ಹೆಚ್ಚುವರಿ ಬಸ್ ಹಾಕಲಾಗಿದೆ. ಶ್ರೀಮನ್ಮಹಾರಥೋತ್ಸವ ಹಾಗೂ ಏ.5ರಂದು ಸಂಜೆ 6ಗಂಟೆಗೆ ತೇಪೋತ್ಸವ ಅದ್ಧೂರಿಯಾಗಿ ಆಚರಣೆ ಮಾಡಲು ಎಲ್ಲ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಲ್ಲಾ ವಾರ್ತಾಧಿಕಾರಿ ಎಚ್.ಎಸ್.ನಿರ್ಮಲಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts