More

    ಸಿಎಂ ಜತೆ ಸರ್ಕಾರಿ ನೌಕರರ ಸಂಘದ ಸಭೆ ಮುಕ್ತಾಯ: ಬಗೆಹರಿಯದ ಗೊಂದಲ!

    ಬೆಂಗಳೂರು: ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಿ ನೌಕರರ ಸಂಘ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಇಂದು ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮತ್ತೊಮ್ಮೆ ಸಭೆ ನಡೆಸಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಜತೆಗೆ ಸಿಎಂ ಸಭೆ ನಡೆಸಿದ್ದು, ಫಲಿತಾಂಶ ಸದ್ಯಕ್ಕೆ ಬಗೆಹರಿಯದ ಗೊಂದಲವಾಗಿದೆ. 

    ಸಭೆಯ ನಂತರ ಸಿಎಂ ಬೊಮ್ಮಾಯಿ‌ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದು, ನೌಕರರು ಸರ್ಕಾರದ ಭಾಗವಾಗಿದ್ದಾರೆ. ಮುಕ್ತ, ಸೌಹಾರ್ದಯುತವಾಗಿ ಮಾತುಕತೆ ನಡೆದಿದೆ. ಎರಡು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ನಾವು ಕೂಡ ಕಾನೂನಿನ ಇತಿಮಿತಿ, ಹಣಕಾಸಿನ ಪರಿಸ್ಥಿತಿ ಅವಲೋಕಿಸಬೇಕಾಗುತ್ತದೆ ಎಂದಿದ್ದೇವೆ ಎಂಬುದಾಗಿ ತಿಳಿಸಿದ್ದಾರೆ.

    ಕೋವಿಡ್ ಸಂದರ್ಭದಲ್ಲಿ ವೇತನ ಕಡಿತ ಮಾಡಿಲ್ಲ. ಭತ್ಯೆಯನ್ನು 24 ತಾಸಿನಲ್ಲಿ ಭರಿಸಿದ್ದೇವೆ ಎಂದು ತಿಳಿಸಿದಾಗ ಅವರು ಪ್ರಶಂಸಿಸಿದ್ದಾರೆ. ನೌಕರರ ಸಂಘದ ಜತೆಗೆ ಚರ್ಚಿಸಿ ತಿಳಿಸಲು ಮಾತುಕತೆಗೆ ಬಂದಿದ್ದ ಪದಾಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವುದಕ್ಕೆ ಸರ್ಕಾರ ಮುಕ್ತವಾಗಿದೆ ಎಂದು ಹೇಳಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸುವ‌ ವಿಶ್ವಾಸವಿದೆ ಎಂದು ಸಿಎಂ ತಿಳಿಸಿದ್ದಾರೆ.

    ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಹೇಳುವುದೇನು?

    ಸಿಎಂ ಎರಡು ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದಿಸಿದ್ದಾರೆ. ಅದಕ್ಕಾಗಿ ಸಿಎಂ 10 ದಿನಗಳ ಕಾಲಾವಕಾಶ ಕೇಳಿದ್ದು, ಸಂಘದ ಸಭೆಯಲ್ಲಿ ಚರ್ಚಿಸಿ ತಿಳಿಸುವುದಾಗಿ ಹೇಳಿದ್ದೇವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದ್ದಾರೆ. ಸಂಧಾನ ಸಫಲ-ವಿಫಲ ಎಂಬ ವ್ಯಾಖ್ಯಾನ ಬೇಡವೆಂದು ಮನವಿ ಮಾಡಿಕೊಂಡಿರುವ ಅವರು, ಸಿಎಂ ಹೇಳಿದ ಅಭಿಪ್ರಾಯಗಳನ್ನು ಸಂಘದ ಸಭೆಯಲ್ಲಿ ಚರ್ಚಿಸಿ ನಿರ್ಣಯ ತಿಳಿಸುತ್ತೇವೆ ಎಂದಿದ್ದಾರೆ. ಅಲ್ಲದೆ ಪೂರ್ವ ನಿರ್ಧಾರದಂತೆ ಮುಷ್ಕರ ಮುಂದುವರಿಯಲಿದೆ. ತಡರಾತ್ರಿಯಾದರೂ ಸರಿ ಸಂಘದ ಒಟ್ಟು ಅಭಿಪ್ರಾಯವನ್ನು ಸರ್ಕಾರದ ಗಮನಕ್ಕೆ ತರುತ್ತೇವೆ ಎಂದಿದ್ದಾರೆ.

    ಮುಷ್ಕರ ಒಂದು ದಿನವೋ ಎರಡು ದಿನವೋ ಹಾಗೂ ನಿರ್ಣಯ ಸಕಾರಾತ್ಮಕವೋ ನಕಾರಾತ್ಮಕವೋ ಎಂದು ಹೇಳಲಾಗದು. ಆದರೆ ಬೇಡಿಕೆ ಈಡೇರಿಸುವ ವಿಚಾರದಲ್ಲಿ ಸಿಎಂ ಬೊಮ್ಮಾಯಿ‌ಗೆ ಸಹಮತವಿದೆ. ಕಾಲಾವಕಾಶ ನೀಡುವುದು ಸೇರಿ ಎಲ್ಲ ವಿಚಾರಗಳು ಚರ್ಚೆಯಾಗಲಿವೆ. ಸಂಘದ ಸಭೆಯಲ್ಲಿ ತೀರ್ಮಾನ, ಸಿಎಂ ಸ್ಪಂದನೆ ಮೇಲೆ ಎಲ್ಲವೂ ಅವಲಂಬಿತ ಎಂದಿರುವ ಷಡಾಕ್ಷರಿ, ಸಿಎಂ ಹೇಳಿದ ಎಲ್ಲವನ್ನೂ ಬಹಿರಂಗಪಡಿಸುವುದು ಅಸಾಧ್ಯ. ಅವರು ನಮ್ಮ ಮುಖ್ಯಸ್ಥರು. ಏಳನೇ ವೇತನ ಆಯೋಗದ ವಿಷಯದಲ್ಲಿ ಅವರ ನಿಲುವು ಬದಲಾಗಿಲ್ಲ. ಜಿಲ್ಲಾ ಅಧ್ಯಕ್ಷರ ಜತೆಗೆ ವರ್ಚುವಲ್, ರಾಜ್ಯ ಪದಾಧಿಕಾರಿಗಳ ಜತೆಗೆ ನೇರ ಸಭೆ ಇದೀಗ ನಡೆಯಲಿದೆ ಎಂದಿದ್ದಾರೆ.

    ಒಟ್ಟಿನಲ್ಲಿ ಎರಡೂ ಕಡೆಯಿಂದ ಸ್ಪಷ್ಟ ನಿಲುವು ಹೊರಹೊಮ್ಮದ್ದರಿಂದ ಮತ್ತು ಇನ್ನೂ ಬಿರುಸಿನ ಬೆಳವಣಿಗೆಗಳು ನಡೆಯುತ್ತಿರುವುದರಿಂದ ನಾಳೆ ಏನಾಗಲಿದೆ? ಸರ್ಕಾರಿ ನೌಕರರ ಸಂಘದ ಮುಂದಿನ ನಡೆ ಏನು? ಸರ್ಕಾರ ಇನ್ಯಾವ ಆಯ್ಕೆಗಳನ್ನು ಮುಂದಿರಿಸಿಕೊಂಡಿದೆ ಎಂಬೆಲ್ಲ ಸಂಗತಿಗಳ ಕುರಿತು ಕುತೂಹಲ ಕೆರಳಿದೆ. ಇನ್ನೊಂದೆಡೆ ಸರ್ಕಾರಿ ನೌಕರರ ಸಂಘದ ಮುಷ್ಕರ-ಪ್ರತಿಭಟನೆ ಹಿನ್ನೆಲೆಯಲ್ಲಿ ನಾಳೆ ಸಾರ್ವಜನಿಕರು ಸರ್ಕಾರಿ ಸೇವೆಗಳನ್ನು ಪಡೆಯುವಲ್ಲಿ ತೊಂದರೆ ಎದುರಿಸಬೇಕಾಗುವ ಸಾಧ್ಯತೆಗಳು ಕೂಡ ಗೋಚರಿಸಿವೆ.

    ಮಗನ ಕಾಟ ತಾಳಲಾಗದೇ ಆತನನ್ನು ಬರ್ಬರವಾಗಿ ಕೊಲೆ ಮಾಡಿದ ತಂದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts