More

    ವಾರ್ಡ್ ಮರು ವಿಂಗಡಣೆ ಮಾರ್ಗಸೂಚಿ ಕಳುಹಿಸಿ

    ಬೆಂಗಳೂರು: ಹೈಕೋರ್ಟ್ ಸೂಚನೆಯಂತೆ ಹು-ಧಾ ಅವಳಿ ನಗರದ ವಾರ್ಡ್​ಗಳ ಮರು ವಿಂಗಡಣೆಯ ಬಗ್ಗೆ ಮಹಾನಗರ ಪಾಲಿಕೆಗೆ ಸರ್ಕಾರದಿಂದ ಮಾರ್ಗಸೂಚಿ ಕಳುಹಿಸಿ ಕೊಡುವಂತೆ ಅಧಿಕಾರಿಗಳಿಗೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹಾಗೂ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಸೂಚಿಸಿದರು.

    ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ಪಾಲಿಕೆಯ ಅಭಿವೃದ್ಧಿ ಕಾಮಗಾರಿಗಳು ಮತ್ತು ಕ್ರೆಡೈ ಸಂಸ್ಥೆಗಳ ಸಮಸ್ಯೆಗಳು, ಕೈಗಾರಿಕೆ ಟೌನ್​ಶಿಪ್ ನಿರ್ವಣ, ಕೈಗಾರಿಕೆ ವಸಾಹತು ಪ್ರದೇಶಗಳಲ್ಲಿನ ತೆರಿಗೆ ಸಮಸ್ಯೆ ಕುರಿತು ಸಚಿವರು ಸಭೆ ನಡೆಸಿದರು. ಹುಬ್ಬಳ್ಳಿ ಮತ್ತು ಧಾರವಾಡ ಡಂಪಿಂಗ್ ಯಾರ್ಡ್​ನಲ್ಲಿ ಹಲವು ವರ್ಷಗಳಿಂದ ಸಂಗ್ರಹವಾಗಿರುವ ತ್ಯಾಜ್ಯದ ವೈಜ್ಞಾನಿಕ ವಿಲೇವಾರಿಗೆ 54 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಕೇಂದ್ರದಿಂದ ಅನುದಾನದ ಅವಶ್ಯಕತೆ ಇದ್ದು, ಕೇಂದ್ರಕ್ಕೆ ತಕ್ಷಣ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

    ಆರ್ಯಭಟ ಟೆಕ್ ಪಾರ್ಕ್​ನಲ್ಲಿ ಈಗಾಗಲೇ 4 ಐಟಿ ಕಂಪನಿಗಳು ಉದ್ದಿಮೆ ಪ್ರಾರಂಭಿಸಲು ಮುಂದಾಗಿವೆ. ಈ ಪಾರ್ಕ್​ನಲ್ಲಿ ಹಂಚಿಕೆ ಆಗದಿರುವ 10 ಎಕರೆ ಜಮೀನನ್ನು ಹಂಚಿಕೆ ಮಾಡಲು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ದರ ನಿಗದಿಪಡಿಸಲಾಗಿದೆ. ಈ ಸಂಬಂಧ ಕಡತವನ್ನು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಲಾಗಿದೆ. ತಕ್ಷಣ ತೀರ್ಮಾನ ಕೈಗೊಳ್ಳುವಂತೆ ಸಚಿವ ಶೆಟ್ಟರ್ ಹೇಳಿದರು. ಇದೇ ವೇಳೆ, ಕ್ರೆಡೈ ಹುಬ್ಬಳ್ಳಿ-ಧಾರವಾಡ ಸದಸ್ಯರು ಭೂ-ಪರಿವರ್ತನೆ, ಇ-ಆಸ್ತಿ ದಾಖಲಿಸುವ ವ್ಯವಸ್ಥೆ ಎದುರಿಸುತ್ತಿರುವ ಹಲವು ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಇದಕ್ಕೆ ಪರಿಹಾರ ಸೂಚಿಸಿದ ಸಚಿವರು ಕೂಡಲೆ ಅಗತ್ಯವಿರುವ ಆದೇಶ ಹಾಗೂ ಸೂಚನೆಗಳನ್ನು ಹೊರಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ, ಪೌರಾಡಳಿತ ನಿರ್ದೇಶಕಿ ಬಿ.ಬಿ. ಕಾವೇರಿ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮದ ಎಂಡಿ ಡಾ.ಎಂ.ಟಿ. ರೇಜು, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಕ್ರೆಡೈ ಕರ್ನಾಟಕ ಉಪಾಧ್ಯಕ್ಷ ಪ್ರದೀಪ ರಾಯ್ಕರ್ ಹಲವರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts