More

    ಉಡುಪಿ ಜಿಲ್ಲಾಸ್ಪತ್ರೆಗೆ ತ್ಯಾಜ್ಯದಿಂದ ಆದಾಯ

    ಅವಿನ್ ಶೆಟ್ಟಿ ಉಡುಪಿ 
    ಜಿಲ್ಲಾಸ್ಪತ್ರೆಯಲ್ಲಿ ಉತ್ಪಾದನೆಯಾಗುವ ವೈದ್ಯಕೀಯ ತ್ಯಾಜ್ಯಗಳನ್ನು ವ್ಯವಸ್ಥಿತವಾಗಿ ವಿಲೇವಾರಿ ಮೂಲಕ ಮಾದರಿಯಾಗಿದ್ದು, ವಾರ್ಷಿಕ 65 ಸಾವಿರ ರೂ. ಆದಾಯದ ನಿರೀಕ್ಷೆ ಹೊಂದಿದೆ. ಆಸ್ಪತ್ರೆ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸಲು 1 ವರ್ಷ ಹಿಂದೆ ತ್ಯಾಜ್ಯ ನಿರ್ವಹಣೆ ಘಟಕ ನಿರ್ಮಿಸಲಾಗಿದ್ದು, ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.

    ಜಿಲ್ಲಾಸ್ಪತ್ರೆ, ತಾಲೂಕು ಆರೋಗ್ಯ ಕೇಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರ ಕಚೇರಿ, ಸರ್ವೇಕ್ಷಣಾ ಘಟಕ, ಜಿಲ್ಲಾಸ್ಪತ್ರೆ ಸಿಟಿ ಸ್ಕಾೃನ್ ಸೆಂಟರ್ ಮತ್ತು ಆಯುಷ್ ಆಸ್ಪತ್ರೆಗಳ ತ್ಯಾಜ್ಯಗಳನ್ನು ಸಂಗ್ರಹಿಸಿ ಬೇರ್ಪಡಿಸಲಾಗುತ್ತದೆ. ಮೆಡಿಸಿನ್ ಕವರ್, ಮೆಡಿಸಿನ್ ಬಾಕ್ಸ್, ಬಾಟಲಿಗಳು, ಇತರ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿ ಘಟಕದಲ್ಲಿ ಪುನರ್‌ವಿಂಗಡಿಸಲಾಗುತ್ತಿದೆ. ಆರು ತಿಂಗಳ ಹಿಂದೆ ಇಲ್ಲಿ ವಿಲೇವಾರಿಯಾದ ತ್ಯಾಜ್ಯವನ್ನು ಟೆಂಡರ್ ಮೂಲಕ ಮಾರಾಟ ಮಾಡಲಾಗಿದ್ದು, 5.30 ಟನ್ ತ್ಯಾಜ್ಯ ಸಂಗ್ರಹವಾಗಿ ಜಿಲ್ಲಾಸ್ಪತ್ರೆಗೆ 32 ಸಾವಿರ ರೂ. ಆದಾಯ ಬಂದಿತ್ತು. ಈ ಬಾರಿ 6 ಟನ್ ತ್ಯಾಜ್ಯ ಸಂಗ್ರಹಗೊಂಡಿದೆ.

    ಪಾಳುಬಿದ್ದ ಕಟ್ಟಡ ಬಳಕೆ : ಹಲವಾರು ವರ್ಷದಿಂದ ಪಾಳುಬಿದ್ದಿದ್ದ ಜಿಲ್ಲಾ ಸರ್ಜನ್ ವಸತಿ ನಿಲಯವನ್ನು ವಿಂಗಡಣೆ ಘಟಕವಾಗಿ ಪರಿವರ್ತಿಸಲಾಗಿದೆ. 7.5 ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಳಿಸಿ, ನಿರ್ವಹಣ ಕೇಂದ್ರವಾಗಿಸಲಾಗಿದೆ. ಇಲ್ಲಿ ದಿನಕ್ಕೆ 50 ಕೆಜಿ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಆಸ್ಪತ್ರೆಯ 159 ಬಗೆಯ ತ್ಯಾಜ್ಯಗಳನ್ನು ಇಲ್ಲಿ ವಿಂಗಡಿಸಿ ಮಾರಾಟ ಮಾಡಲಾಗುತ್ತದೆ.

    65 ಸಾವಿರ ರೂ. ಆದಾಯ ನಿರೀಕ್ಷೆ: 35 ರಿಂದ 50 ಕೆಜಿ ಪ್ರತಿ ನಿತ್ಯ ತ್ಯಾಜ್ಯದಂತೆ ತಿಂಗಳಿಗೆ ಸುಮಾರು 1ಟನ್ ಸಂಗ್ರಹವಾಗುತ್ತದೆ. ವಾರ್ಷಿಕ ಆದಾಯ ನಿರೀಕ್ಷೆ 65 ಸಾವಿರ ರೂ., ಇದೆ. ಇಲ್ಲಿ ಒಂದೊಂದು ತ್ಯಾಜ್ಯಗಳಿಂದಲೂ ಅನೇಕ ಉತ್ಪನ್ನಗಳನ್ನು ಬೇರ್ಪಡಿಸಲಾಗುತ್ತದೆ. ಪ್ರಥಮ, ದ್ವಿತೀಯ ಮತ್ತು ತೃತೀಯ ದರ್ಜೆ ಗುಣಮಟ್ಟದ ಕವರ್‌ಗಳನ್ನು ಪ್ರತ್ಯೇಕ ಮಾಡಲಾಗುತ್ತದೆ. ಬಾಕ್ಸ್, ಕವರ್, ಪ್ಲಾಸ್ಟಿಕ್ ಪ್ರಿಂಟ್‌ಗಳನ್ನು ಪ್ರತ್ಯೇಕವಾಗಿಸಲಾಗುತ್ತದೆ. ಪ್ಲಾಸ್ಟಿಕ್‌ನಲ್ಲಿ ಪೆಟ್ ಬಾಟಲ್, ಮಿಲ್ಕಿ ವೈಟ್, ನ್ಯಾಚುರಲ್ ಪ್ಲಾಸ್ಟಿಕ್, ಎಲ್‌ಡಿ ಕವರ್ಸ್‌ ಇರುತ್ತವೆ. ಬಾಕ್ಸ್‌ಗಳನ್ನು ಕಟ್ಟಲು ಬಳಸಲಾಗುವ ಮೋನೋಪಟ್ಟಿಯನ್ನು ಪುನರ್‌ಬಳಕೆಗಾಗಿ ಬಳಸಲಾಗುತ್ತದೆ. ವಿಂಗಡಣೆಯಾದ ಇತರ ವಸ್ತುಗಳು ಕೂಡ ಮರುಬಳಕೆ ಅಥವಾ ಉಪ ಉತ್ಪನ್ನಕ್ಕೆ ರವಾನೆಯಾಗುತ್ತದೆ. ಅವುಗಳನ್ನು ಖರೀದಿಸುವ ಸಂಸ್ಥೆಗಳಿವೆ. ಇದರಿಂದಾ ನಿರ್ವಹಣೆ ಜತೆ ಒಂದಷ್ಟು ಆದಾಯವೂ ಸಿಗುತ್ತದೆ. ಸರ್ಕಾರಿ, ಖಾಸಗಿ ಆಸ್ಪತ್ರೆಗಳಿಗೆ ಘಟಕ ಮಾದರಿಯಾಗಿದೆ.

    ಜಿಲ್ಲಾಸ್ಪತ್ರೆ ತ್ಯಾಜ್ಯವನ್ನು ಈ ಹಿಂದೆ ನಗರಸಭೆ ಸಂಗ್ರಹಿಸುತ್ತಿತ್ತು. ಇದರಿಂದ ಸಮರ್ಪಕ ವಿಲೇವಾರಿ ಸಾಧ್ಯವಾಗುತ್ತಿರಲಿಲ್ಲ. ನಾವೇ ಘಟಕ ಸ್ಥಾಪನೆ ಮಾಡಿದ್ದರಿಂದ ತ್ಯಾಜ್ಯ ವಿಲೇವಾರಿ ವ್ಯವಸ್ಥಿತವಾಗಿದೆ. ಜಿಲ್ಲಾಸ್ಪತ್ರೆಗೆ ರೋಗಿಗಳ ಸಂಖ್ಯೆಯೂ ಹೆಚ್ಚಳವಾದ ಜತೆಗೆ ವೈದ್ಯಕೀಯ ತ್ಯಾಜ್ಯವೂ ಹೆಚ್ಚುತ್ತಿದೆ. ಈ ಹಿಂದೆ ಒಂದು ಬಾರಿ ವಿಲೇವಾರಿ ನಡೆದಿದ್ದು ಉತ್ತಮ ಆದಾಯ ಬಂದಿದೆ. ಮತ್ತೊಂದು ವಿಲೇವಾರಿ ಮಾಡಲು ಈಗಾಗಲೇ ಟೆಂಡರ್ ಕರೆದಿದ್ದು, ಶೀಘ್ರ ಪ್ರಕ್ರಿಯೆ ಮುಗಿಯಲಿದೆ.
    -ಡಾ.ಮಧುಸೂದನ ನಾಯಕ್, ಜಿಲ್ಲಾ ಸರ್ಜನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts