More

    ವೈದ್ಯಕೀಯ ಸಿಬ್ಬಂದಿಗೆ ಸಹಕಾರ ನೀಡುವುದು ಅಗತ್ಯ

    ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಪ್ರಾರಂಭಿಸಲಾದ ಕರೊನಾ ವೈರಸ್ ಪರೀಕ್ಷಾ ಪ್ರಯೋಗಾಲಯವನ್ನು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಬುಧವಾರ ಲೋಕಾರ್ಪಣೆ ಮಾಡಿದರು.

    ಈ ಪ್ರಯೋಗಾಲಯವು ವಿಶ್ವ ಆರೋಗ್ಯ ಸಂಸ್ಥೆ, ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ, ಅಮೆರಿಕದ ಆಹಾರ ಮತ್ತು ಔಷಧ ಸಂಸ್ಥೆ ಮಾನ್ಯತೆ ಪಡೆದಿದೆ. ಅತ್ಯಾಧುನಿಕ ವೈದ್ಯಕೀಯ ಸಾಮಗ್ರಿ ಹೊಂದಿದ್ದು ಇಲ್ಲಿ ಟಿಬಿ, ಎಚ್1ಎನ್1, ಹೆಪಟೈಟಿಸ್ (ಬಿಳಿ ಕಾಮಾಲೆ) ವೈರಸ್ ಪರೀಕ್ಷಿಸಬಹುದಾಗಿದೆ.

    ಪ್ರಯೋಗಾಲಯ ಉದ್ಘಾಟಿಸಿದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮಾತನಾಡಿ, ಇಡೀ ವಿಶ್ವ ಇಂದು ಕರೊನಾ ವೈರಸ್‌ನಿಂದ ತತ್ತರಿಸಿದೆ. ಅದನ್ನು ಹಿಮ್ಮೆಟ್ಟಿಸಲು ಕೇಂದ್ರ ಸರ್ಕಾರ ಸಕಲ ಮುಂಜಾಗ್ರತಾ ಕ್ರಮ ಕೈಕೊಂಡಿದೆ. ಎಲ್ಲರ ಆರೋಗ್ಯ ಕಾಪಾಡಲು ಅಗತ್ಯ ಸೇವಾ ಸೌಲಭ್ಯ ಒದಗಿಸಲಾಗುತ್ತಿದೆ.

    ವೈದ್ಯಕೀಯ ಸಿಬ್ಬಂದಿ ಸಾರ್ವಜನಿಕರ ಆರೋಗ್ಯ ಕಾಪಾಡುತ್ತಿದ್ದು, ಸಾರ್ವಜನಿಕರು ಅವರಿಗೆ ಸಹಕಾರ ನೀಡಬೇಕು ಎಂದು ಕೋರಿದರು. ಸರಳ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆ್ಯಂಡ್ ರಿಸರ್ಚ್‌ನ ಕುಲಾಧಿಪತಿ ಡಾ. ಪ್ರಭಾಕರ ಕೋರೆ ಮಾತನಾಡಿ, ಕರೊನಾ ವೈರಸ್ ಕುರಿತಂತೆ ಕೆಎಲ್‌ಇ ಸಂಸ್ಥೆಯು ಅನೇಕ ಜಾಗೃತಿ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದೆ.

    ಕರೊನಾ ವೈರಸ್ ಇಲ್ಲದ ರೋಗಿಗಳ ಚಿಕಿತ್ಸೆಗೆ ಯಾವುದೇ ರೀತಿ ತೊಂದರೆ ಆಗದಂತೆ ಎಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಫ್ಲ್ಯು ಕ್ಲಿನಿಕ್, ಉಚಿತ ಆಂಬುಲನ್ಸ್ಸ್, ಕೋವಿಡ್ ಪರಿಹಾರ ನಿಧಿಗೆ 2 ಕೋಟಿ ರೂ. ದೇಣಿಗೆ ನೀಡಲಾಗಿದೆ.

    ಜಿಲ್ಲಾಡಳಿತ ಹಾಗೂ ಸರ್ಕಾರದ ಕಾರ್ಯಕ್ಕೆ ಕೆಎಲ್‌ಇ ಸಂಸ್ಥೆ ಸದಾ ಬೆನ್ನೆಲುಬಾಗಿ ನಿಲ್ಲಲಿದೆ ಎಂದರು. ಸಂಸ್ಥೆ ನಿರ್ದೇಶಕ ಡಾ. ವಿ.ಎಸ್. ಸಾಧುನವರ, ಡಾ. ವಿವೇಕ ಸಾವೋಜಿ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ.ವಿ. ಜಾಲಿ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎನ್.ಎಸ್. ಮಹಾಂತಶೆಟ್ಟಿ, ಡಾ. ವಿ.ಅ. ಕೋಠಿವಾಲೆ, ಡಾ. ವಿ.ಡಿ. ಪಾಟೀಲ, ಡಾ.ಎಚ್.ಬಿ. ರಾಜಶೇಖರ, ಡಾ. ಪ್ರೀತಿ ಮಾಸ್ತೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts