More

    ಅಂಧರಿಗೆ ಯಾಂತ್ರಿಕ ಊರುಗೋಲು


    ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಂಶೋಧನೆ


    ಮೈಸೂರು: ನಗರದ ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯದ ನಾಲ್ವರು ವಿದ್ಯಾರ್ಥಿಗಳು ಅಂಧರಿಗಾಗಿ ಯಾಂತ್ರಿಕ ಊರುಗೋಲನ್ನು ರೂಪಿಸಿದ್ದಾರೆ.
    ಇದು ದೃಷ್ಟಿ ವಿಕಲಚೇತನರು ಮನೆಯಿಂದ ಹೊರಗೆ ಓಡಾಡುವಾಗ ಗುಂಡಿಗಳು ಮತ್ತು ಅಡೆತಡೆಗಳನ್ನು ಗುರುತಿಸಿ ಸರಾಗವಾಗಿ ನಡೆದಾಡಲು ಸಹಾಯ ಮಾಡುತ್ತದೆ. ಈ ಊರುಗೋಲು ಕಡಿಮೆ ವೆಚ್ಚ, ಕಡಿಮೆ ವಿದ್ಯುತ್ ಬಳಕೆ ಮತ್ತು ಶೀಘ್ರ ಪ್ರತಿಕ್ರಿಯೆಯೊಂದಿಗೆ ದೃಢವಾದ ಪರಿಹಾರವಾಗಿದೆ.


    ಪ್ರಸ್ತುತ ಇರುವ ಯಾಂತ್ರಿಕ ಊರುಗೋಲುಗಳು ಅಡಚಣೆ ಮತ್ತು ಗುಂಡಿ ಪತ್ತೆಗಾಗಿ ಅಲ್ಟ್ರಾಸಾನಿಕ್ ಸಂವೇದಕ ಮತ್ತು ಡಿಜಿಟಲ್ ಇಮೇಜ್ ಪ್ರೊಸೆಸಿಂಗ್ ಅನ್ನು ಕ್ರಮವಾಗಿ ಬಳಸಿಕೊಳ್ಳುತ್ತಿದ್ದು, ಇವು ವಿಳಂಬದ ಸಮಸ್ಯೆಗೆ ಕಾರಣವಾಗುತ್ತವೆ. ವಿದ್ಯಾರ್ಥಿಗಳು ವಿನ್ಯಾಸಗೊಳಿಸಿರುವ ನೂತನ ಯಾಂತ್ರಿಕ ಊರುಗೋಲು ಅಡೆತಡೆ ಪತ್ತೆ ಮತ್ತು ಪಾಟ್‌ಹೋಲ್ ಪತ್ತೆ ಎರಡಕ್ಕೂ ಅಲ್ಟ್ರಾಸಾನಿಕ್ ಸಂವೇದಕಗಳನ್ನು ಬಳಸುವುದರಿಂದ ಎಚ್ಚರಿಕೆ ಸಮಯೋಚಿತವಾಗಿರುವಂತೆ ಕಾರ್ಯನಿರ್ವಹಿಸುತ್ತದೆ.
    ಕಾಲೇಜಿನ ಮೂರನೇ ವರ್ಷದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್ ಇಂಜಿನಿಯರಿಂಗ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಸ್ಮತಿ ಬಾಳಿಗಾ, ಎಚ್.ಎಂ.ಸಪ್ನಾ, ಎನ್.ಶ್ರೇಯಸ್ ಮತ್ತು ಯೋಗೇಶ್‌ಗೌಡ ಅವರು ಇಸಿಇ ವಿಭಾಗದ ಪ್ರಾಧ್ಯಾಪಕ ಡಾ. ಚಂದ್ರಶೇಖರ ಎಂ. ಪಾಟೀಲ್ ಮತ್ತು ಇಸಿಇ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಿ.ಎಲ್.ಗಿರಿಜಾಂಬ ಅವರ ಮಾರ್ಗದರ್ಶನದಲ್ಲಿ ಊರುಗೋಲುನ್ನು ಆವಿಷ್ಕಾರ ಮಾಡಿದ್ದಾರೆ.


    ‘ವಿನೂತನ ಯೋಜನೆಯನ್ನು ಕೈಗೆತ್ತಿಕೊಂಡ ನಮ್ಮ ವಿದ್ಯಾರ್ಥಿಗಳ ಬಗ್ಗೆ ನಮಗೆ ಹೆಮ್ಮೆ ಇದೆ. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನವು ವಿಶ್ವದಾದ್ಯಂತ ಆರೋಗ್ಯ ಸೇವೆಯನ್ನು ಸುಧಾರಿಸಲು ಸಹಾಯ ಮಾಡಿದೆ. ಈ ಯೋಜನೆಯ ಮೂಲಕ ವಿದ್ಯಾರ್ಥಿಗಳು ದೃಷ್ಟಿವಿಕಲತೆಯ ವಿರುದ್ಧ ಹೋರಾಡಲು ತಂತ್ರಜ್ಞಾನವನ್ನು ಹೇಗೆ ಬಳಸಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ. ನಮ್ಮ ವಿದ್ಯಾರ್ಥಿಗಳು ರೂಪಿಸಿದ ಈ ಯಾಂತ್ರಿಕ ಊರುಗೋಲು ದೃಷ್ಟಿಹೀನ ವ್ಯಕ್ತಿಗಳಿಗೆ ಆತ್ಮವಿಶ್ವಾಸದಿಂದ ರಸ್ತೆಯ ಮೇಲೆ ಓಡಾಡಲು ಸಹಾಯ ಮಾಡುತ್ತದೆ’ ಎಂದು ಪ್ರಾಂಶುಪಾಲ ಪ್ರೊ.ಬಿ.ಸದಾಶಿವೇಗೌಡ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts