More

    ಪೊಲೀಸರಿಂದ ಅರ್ಥಪೂರ್ಣ ವರ್ಷಾಚರಣೆ

    ಬೆಂಗಳೂರು: ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತರು, ಅಂಗವಿಲಕರು, ಬುದ್ಧಿಮಾಂದ್ಯ ಮಕ್ಕಳೊಂದಿಗೆ ಹೊಸ ವರ್ಷವನ್ನು ಆಚರಣೆ ಮಾಡುವ ಮೂಲಕ ಬೆಂಗಳೂರು ನಗರ ಪೊಲೀಸರು ಮಾದರಿಯಾಗಿದ್ದಾರೆ. ಪೊಲೀಸರ ಈ ವಿನೂತನ ಆಚರಣೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
    2024ರ ವರ್ಷಾಚರಣೆಯನ್ನು ಹೂಗುಚ್ಛ, ಸಿಹಿ ಮತ್ತು ಉಡುಗೊರೆ ಕೊಟ್ಟು ಶುಭಾಶಯ ಕೋರಿ ಸಮಯ ಮತ್ತು ಹಣ ವ್ಯರ್ಥ ಮಾಡುವುದು ಬೇಡ. ಇದರ ಬದಲಿಗೆ ವೃದ್ಧಾಶ್ರಮ, ಅನಾಥಾಶ್ರಮ, ನಿರ್ಗತಿಕರಿಗೆ ಆ ಹಣವನ್ನು ವಿನಿಯೋಗಿಸುವ ಮೂಲಕ ಆಚರಿಸಿ. ಜತೆಗೆ ಸಮಾಜಕ್ಕೆ ದುಡಿಯುವ ಮತ್ತು ನಿವೃತ್ತ ಅಧಿಕಾರಿ, ಹಿರಿಯ ನಾಗರಿಕರ ಜತೆ ಸೇರಿಕೊಂಡು ಆಚರಿಸುವಂತೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಕಿವಿಮಾತು ಹೇಳಿದ್ದರು.

    ಇದನ್ನು ಸ್ವತಃ ಪಾಲಿಸಿದ ದಯಾನಂದ್, ಆ್ಯಸಿಡ್ ದಾಳಿಗೆ ಒಳಗಾದ 17 ಮಹಿಳಾ ಸಂತ್ರಸ್ತರು ಮತ್ತು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ 16 ಸಂತ್ರಸರನ್ನು ಕಮಾಂಡ್ ಸೆಂಟರ್‌ಗೆ ಆಹ್ವಾನಿಸಿದ್ದರು. ಎಲ್ಲರ ಯೋಗಕ್ಷೇಮ ವಿಚಾರಿಸಿ ಧೈರ್ಯ ತುಂಬಿದರು. ಮಹಿಳೆಯರ ಸುರಕ್ಷತೆ ಸಲುವಾಗಿ ‘ಸ್ೇ ಸಿಟಿ’ ಯೋಜನೆಯಡಿ ನಿರ್ಮಿಸಿರುವ ಕಮಾಂಡ್ ಸೆಂಟರ್‌ನಲ್ಲಿ ನಡೆಯುವ ಕೆಲಸ ಕಾರ್ಯಗಳ ಬಗ್ಗೆ ಪರಿಚಯಿಸಿಕೊಟ್ಟರು. ದೌರ್ಜನ್ಯ ಮತ್ತು ಕಿರುಕುಳ ಸಮಯದಲ್ಲಿ ನಮ್ಮ-112 ಸಹಾಯವಾಣಿಗೆ ಕರೆ ಮಾಡುವಂತೆ ಸಲಹೆ ನೀಡುವ ಮೂಲಕ ಹೆಣ್ಣುಮಕ್ಕಳ ಸುರಕ್ಷತೆ ಕುರಿತು ಪೊಲೀಸ್ ಇಲಾಖೆ ಕೈಗೊಂಡ ಕ್ರಮಗಳನ್ನು ಪರಿಚಯಿಸಿದರು.

    ಇದಾದ ಮೇಲೆ ಮನೋವಿಕಾಸ ಕೇಂದ್ರಕ್ಕೆ ಭೇಟಿ ಕೊಟ್ಟು ಬುದ್ಧಿಮಾಂದ್ಯ ಮಕ್ಕಳೊಂದಿಗೆ ಮತ್ತು ಅಲ್ಲಿನ ಪಾಲಕರಿಗೆ ಉಡುಗೊರೆ ಕೊಟ್ಟು ಶುಭಾಶಯ ಕೋರಿದರು. ಇದೆ ವೇಳೆ ಕೇಂದ್ರ ವಿಭಾಗ ಡಿಸಿಪಿ ಎಚ್.ಟಿ. ಶೇಖರ್ ಸಹ ಭೇಟಿ ನೀಡಿದ್ದರು.

    ಮಕ್ಕಳಿಗೆ ಸಿಹಿ ಹಂಚಿಕೆ

    ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ.ಎನ್. ಅನುಚೇತ್, ಶೇಷಾದ್ರಿಪುರದ ಮಾತೃಶ್ರೀ ಮನೋವಿಕಾಸ ಕೇಂದ್ರಕ್ಕೆ ಭೇಟಿ ಕೊಟ್ಟು ಅಲ್ಲಿನ ಮಕ್ಕಳೊಂದಿಗೆ ಬೆರೆತು ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ವರ್ಷಾಚರಣೆಯಲ್ಲಿ ಭಾಗಿಯಾದರು. ಮಾಗಡಿ ರಸ್ತೆ ಪೊಲೀಸ್ ಕಾಲನಿಯಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಕುಟುಂಬ ಸದಸ್ಯರೊಂದಿಗೆ ಪಶ್ಚಿಮ ವಿಭಾಗ ಡಿಸಿಪಿ ಎಸ್. ಗಿರೀಶ್ ಸೇರಿ ಕೇಕ್ ಕತ್ತರಿಸಿದರು. ದಕ್ಷಿಣ ಸಂಚಾರ ವಿಭಾಗ ಡಿಸಿಪಿ ಶಿವಪ್ರಕಾಶ್ ದೇವರಾಜ್ ಮತ್ತು ಎಸಿಪಿ ಟಿ. ಮಹದೇವ್, ಚಾಮರಾಜಪೇಟೆಯ ಬಾಸ್ಕೋ ಮನೆಗೆ ಭೇಟಿ ಕೊಟ್ಟು ಅನಾಥ ಮಕ್ಕಳಿಗೆ ಬೆಡ್‌ಶೀಟ್, ಉಡುಪು ಮತ್ತು ಉಡುಗೊರೆ ಕೊಟ್ಟು ಕೇಕ್ ಕತ್ತರಿಸಿ ಸಂತೋಷ ಉಣಬಡಿಸಿದರು.

    ನೇತ್ರದಾನ

    ಡಾ. ರಾಜ್‌ಕುಮಾರ್ ನೇತ್ರದಾನ ಕೇಂದ್ರಕ್ಕೆ ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ನೇತ್ರದಾನ ಮಾಡಿದರು. ಇವರೊಂದಿಗೆ ಇತರ ಅಧಿಕಾರಿಗಳು ಸಹ ನೇತ್ರದಾನಕ್ಕೆ ಸಹಿ ಮಾಡಿದರು.

    ಬೆಡ್‌ಶೀಟ್, ಉಡುಪು, ದಿನಸಿ ವಿತರಣೆ

    ಇದೇ ರೀತಿಯಲ್ಲಿ ನಗರದ ಎಲ್ಲ ಠಾಣೆ ಇನ್‌ಸ್ಪೆಕ್ಟರ್‌ಗಳು ತಮ್ಮ ವ್ಯಾಪ್ತಿಯಲ್ಲಿ ಇರುವ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಭೇಟಿ ಕೊಟ್ಟು ಸಹಿ ಹಂಚಿದರು. ಜತೆಗೆ ಬೆಡ್‌ಶೀಟ್, ಉಡುಪು, ದಿನಸಿ ಇನ್ನಿತರ ವಸ್ತುಗಳನ್ನು ಉಡುಗೊರೆಯಾಗಿ ನೀಡಿದರು. ಪೊಲೀಸರ ಈ ಕಾರ್ಯಕ್ಕೆ ಜಾಲತಾಣಗಳಲ್ಲಿ ಮೆಚ್ಚುಗೆ ಗಳಿಸಿದೆ.

    ನಿವೃತ್ತ ಅಧಿಕಾರಿ, ಸಿಬ್ಬಂದಿಗೆ ಶುಭಾಶಯ

    ದಕ್ಷಿಣ ವಿಭಾಗ ಡಿಸಿಪಿ ರಾಹುಲ್ ಕುಮಾರ್ ಶಹಪುರ್‌ವಾದ್, ಗಿರಿನಗರದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿಯೊಂದಿಗೆ ಪರಸ್ಪರ ಸಿಹಿ ಹಂಚಿ ಕುಶಲೋಪರಿ ವಿಚಾರಿಸಿದರು. ಸಂಚಾರ ವಿಭಾಗ ಎಸಿಪಿ ಕಿಶೋರ್ ಭರಣಿ ಅವರು ನಿವೃತ್ತ ಐಪಿಎಸ್ ಅಧಿಕಾರಿ ಡಾ. ಅಜಯ್‌ಕುಮಾರ್ ಸಿಂಗ್ ಅವರ ಮನೆಗೆ ಭೇಟಿ ಕೊಟ್ಟು ಶುಭ ಕೋರಿದರು. ಪೂರ್ವ ಸಂಚಾರ ವಿಭಾಗ ಡಿಸಿಪಿ ಕುಲದೀಪ್ ಕುಮಾರ್ ಆರ್. ಜೈನ್ ಅವರು ಸಿಗ್ನಲ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಚಾರ ಪೊಲೀಸರನ್ನು ಭೇಟಿ ಮಾಡಿ ಶುಭ ಕೋರಿದರು.

    ರಕ್ತದಾನ ಶಿಬಿರ ಆಯೋಜನೆ:

    ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಲಯನ್ಸ್ ಕ್ಲಬ್ ಮತ್ತು ಸುಸ್ಥಿರ ಪರಿಸರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ಕಿದ್ವಾಯಿ ಆಸ್ಪತ್ರೆಯ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ರಕ್ತದ ಪ್ಲೇಟ್ಲೆಟ್ಸ್ ದಾನ ಮಾಡಲಾಯಿತು. ಆಕ್ಯುಪ್ರೆಶರ್ ಚಿಕಿತ್ಸೆ ನೀಡುವುದರ ಜತೆಗೆ ಬಿಪಿ, ಶುಗರ್ ಮಟ್ಟ ಮತ್ತು ಇಸಿಜಿ ಪರೀಕ್ಷೆ ನಡೆಸಲಾಯಿತು. ಜತೆಗೆ ಡಿ ಗ್ರೂಪ್ ಉದ್ಯೋಗಿಗಳಿಗೆ ಕಣ್ಣಿನ ತಪಾಸಣೆ ನಡೆಸಿ ಉಚಿತ ಕನ್ನಡಕ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts