More

    ಕ್ರೋಧಿನಾಮ ಸಂವತ್ಸರಕ್ಕೆ ಅದ್ದೂರು ಸ್ವಾಗತ

    ಶಿವಮೊಗ್ಗ: ಜಿಲ್ಲೆಯಲ್ಲಿ ಮಂಗಳವಾರ ಯುಗಾದಿ ಹಬ್ಬವನ್ನು ಜನರು ಸಂಭ್ರಮದಿಂದ ಆಚರಿಸಿದರು. ಹೊಸ ಸಂವತ್ಸರದ ಸ್ವಾಗತಕ್ಕೆ ಜನರ ಸಿದ್ಧತೆ ಭರ್ಜರಿಯಾಗಿಯೇ ನಡೆದಿತ್ತು. ಕ್ರೋಧಿನಾಮ ಸಂವತ್ಸರದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಾರ್ವಜನಿಕವಾಗಿ ನಡೆದಿದ್ದು ವಿಶೇಷವಾಗಿತ್ತು.

    ಮನೆ ಎದುರು ರಂಗೋಲಿಯ ಚಿತ್ತಾರ, ಬಾಗಿಲಿಗೆ ತಳಿರು ತೋರಣ ಹಾಕಿ ಹೊಸ ನಿರೀಕ್ಷೆಯೊಂದಿಗೆ ನೂತನ ಸಂವತ್ಸರವನ್ನು ಜನರು ಸ್ವಾಗತಿಸಿದರು. ಬೇವು-ಬೆಲ್ಲ ಸ್ವೀಕರಿಸಿ, ವಿವಿಧ ಖಾದ್ಯಗಳನ್ನು ತಯಾರು ಮಾಡಿ ಶಾಸ್ತ್ರೋಕ್ತವಾಗಿ ಹಬ್ಬವನ್ನಾಚರಿಸಿದರು.
    ಬೇರೆ ಊರುಗಳಲ್ಲಿ ನೆಲೆಸಿರುವ ಬಹುತೇಕರು ಸ್ವಂತ ಊರಿಗೆ ಬಂದು ಆಚರಣೆಯಲ್ಲಿ ಭಾಗವಹಿಸಿದ್ದರು. ಹೊಸ ವರ್ಷದ ಮೊದಲ ದಿನವೇ ಅನೇಕ ಕಡೆಗಳಲ್ಲಿ ಮಳೆ ಆರ್ಭಟಿಸಿತು. ಮೋಡ ಕವಿದ ವಾತಾವರಣದಿಂದ ಚಂದ್ರ ದರ್ಶನ ಸಾಧ್ಯವಾಗದೇ ಇದ್ದುದು ಅನೇಕರಿಗೆ ಬೇಸರ ಉಂಟು ಮಾಡಿತು. ವಿವಿಧ ದೇವಾಲಯಗಳಲ್ಲಿ ಮಂಗಳವಾರ ಪಂಚಾಗ ಶ್ರವಣ ನಡೆಯಿತು. ಪ್ರಮುಖ ಮಠಗಳಲ್ಲಿ ಮಠಾಧೀಶರು ಪಂಚಾಗ ಪಠಣದ ಜತೆಗೆ ಆಶೀರ್ವಚನ ನೀಡಿದರು.
    ಆರ್‌ಎಸ್‌ಎಸ್‌ನಿಂದ ಆಚರಣೆ:
    ಶಿವಮೊಗ್ಗ: ಹಬ್ಬದ ಪ್ರಯುಕ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ನಗರದ ಆದಿಚುಂಚನಗಿರಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಯುಗಾದಿ ಸಂಭ್ರಮ ವಿಶೇಷ ಕಾರ್ಯಕ್ರಮದಲ್ಲಿ ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್‌ಚನ್ನಬಸಪ್ಪ, ವಿಧಾನಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ್ ಭಾಗವಹಿಸಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಯುಗಾದಿ ಹಿಂದುಗಳ ಪಾಲಿಗೆ ವಿಶೇಷ ಹಬ್ಬ. ಎಲ್ಲ ಹಿಂದುಗಳು ಒಂದಾಗಿ ಬದುಕಬೇಕು ಎಂಬುದರ ಸಾರವೇ ಯುಗಾದಿ. ಈ ಶುಭ ಸಂದರ್ಭದಲ್ಲಿ ಆರ್‌ಎಸ್‌ಎಸ್‌ನಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತೋಷ ತಂದಿದೆ ಎಂದರು.
    ತಾರಾ ಮೆರುಗು: ಲೋಕಸಭೆ ಅಭ್ಯರ್ಥಿ ಗೀತಾ ಜತೆ ಪ್ರಚಾರಕ್ಕೆ ನಟ ಶಿವರಾಜ್‌ಕುಮಾರ್ ಸಾಥ್ ನೀಡಿರುವುದರಿಂದ ಈ ಬಾರಿ ಶಿವಮೊಗ್ಗದಲ್ಲಿ ಯುಗಾದಿಗೆ ತಾರಾ ಮೆರುಗು ಬಂದಿತ್ತು. ಮಧ್ಯಾಹ್ನ ಊಟವನ್ನು ಅಭಿಮಾನಿ ಬೆಂಕಿ ನಗರದ ಗಿರೀಶ್ ಎಂಬುವವರ ಮನೆಯಲ್ಲೇ ಮಾಡಿದ ಗೀತಾ ಹಾಗೂ ಶಿವರಾಜ್‌ಕುಮಾರ್ ಆ ಕುಟುಂಬದ ಸಂಭ್ರಮವನ್ನು ಇಮ್ಮಡಿಗೊಳಿಸಿದರು. ನಂತರ ಬಸವಕೇಂದ್ರಕ್ಕೆ ತೆರಳಿ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು. ಅಲ್ಲಿಯೂ ಶಿವಣ್ಣ ಅವರ ಬೆಂಬಿಡದ ಅಭಿಮಾನಿ ಪಡೆ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿತು. ಶಿವಣ್ಣ ದಂಪತಿಗೆ ಶ್ರೀಗಳು ಬಸವಣ್ಣನ ಭಾವಚಿತ್ರ ನೀಡಿ ಆಶೀರ್ವದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts