More

    ಎಂಡಿಸಿಸಿ ಕೈ ವಶ, ಮನ್ಮುಲ್‌ಗೆ ಗುದ್ದಾಟ: ವಿಧಾನಸಭಾ ಚುನಾವಣೆ ಸೋಲಿನ ಎಫೆಕ್ಟ್

    ಮಂಡ್ಯ: ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್(ಎಂಡಿಸಿಸಿ) ಕಾಂಗ್ರೆಸ್ ತೆಕ್ಕೆ ಸೇರಲಿದೆ. ಅಂತೆಯೆ, ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ (ಮನ್‌ಮುಲ್) ಅಧ್ಯಕ್ಷ ಸ್ಥಾನಕ್ಕೆ ಬಿ.ಆರ್.ರಾಮಚಂದ್ರು ರಾಜೀನಾಮೆ ನೀಡಿರುವುದರಿಂದ ಅಧಿಕಾರದ ಗದ್ದುಗೆ ಹಿಡಿಯಲು ಜೆಡಿಎಸ್ ಮತ್ತು ಕಾಂಗ್ರೆಸ್‌ನಿಂದ ಪ್ರಯತ್ನ ಆರಂಭವಾಗುವ ಮುನ್ಸೂಚನೆ ಕಂಡುಬರುತ್ತಿದೆ.
    ಚುನಾವಣಾ ಫಲಿತಾಂಶದ ಎಫೆಕ್ಟ್ ಹಲವು ಬದಲಾವಣೆ ತಂದಿದೆ. ಅಂದರೆ ನಾಮನಿರ್ದೇಶಿತ ಸ್ಥಾನಗಳು ಸರ್ಕಾರದ ಪಾಲಾಗಲಿವೆ. ಈ ಹಿನ್ನೆಲೆಯಲ್ಲಿ ಎರಡರಲ್ಲಿಯೂ ಹೊಸ ಆಡಳಿತ ಮಂಡಳಿ ರಚನೆಯಾಗುವುದು ಬಹುತೇಕ ಖಚಿತ. ಅದರಂತೆ ರಾಜಕೀಯ ಚಟುವಟಿಕೆ ಗರಿಗೆದರಿವೆ. ಸರ್ಕಾರ ರಚನೆಯಾದ ಕೆಲವೇ ದಿನಗಳಲ್ಲಿ ಎರಡೂ ಆಡಳಿತ ಮಂಡಳಿಗೂ ಚುನಾವಣೆ ನಡೆಯಲಿದೆ. ಈ ಸಂಬಂಧ ಪ್ರಕ್ರಿಯೆ ಪ್ರಾರಂಭಗೊಂಡಿದೆ.
    ಬಹುಮತವಿದ್ದರೂ ತಪ್ಪಿದ್ದ ಸ್ಥಾನ: 2020ರಲ್ಲಿ ಎಂಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ನಡೆದಿದ್ದ ಚುನಾವಣೆಯಲ್ಲಿ ಬಹುಮತವಿದ್ದರೂ ಕಾಂಗ್ರೆಸ್ ಅಧಿಕಾರ ದಕ್ಕಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. 12 ಸದಸ್ಯ ಬಲದ ಎಂಡಿಸಿಸಿ ಬ್ಯಾಂಕ್‌ಗೆ 8 ಕಾಂಗ್ರೆಸ್ ಬೆಂಬಲಿತ ಹಾಗೂ ನಾಲ್ವರು ಜೆಡಿಎಸ್ ಬೆಂಬಲಿತರು ಆಯ್ಕೆಯಾಗಿದ್ದರು.
    ಆದರೆ ಕಾಂಗ್ರೆಸ್ ಬೆಂಬಲಿತರ ಪೈಕಿ ಸಿ.ಅಶ್ವಥ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ನಾಯಕರಿಂದ ಒಪ್ಪಿಗೆ ಸಿಕ್ಕಿರಲಿಲ್ಲ. ಪರಿಣಾಮ ಅಶ್ವಥ್ ಜೆಡಿಎಸ್ ಪಾಳಯ ಸೇರಿಕೊಂಡರು. ಇದಲ್ಲದೆ ಕಾಂಗ್ರೆಸ್‌ಗೆ ಅಧಿಕಾರ ಕೊಡಬಾರದೆಂಬ ಉದ್ದೇಶದಿಂದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಮೈತ್ರಿ ಮಾಡಿಕೊಂಡರು. ಮಾತ್ರವಲ್ಲದೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದ್ದ ದಿನದಂದು ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ಎಚ್.ಎಸ್.ನರಸಿಂಹಯ್ಯ ಅವರ ಸದಸ್ಯತ್ವವನ್ನು ಒಂದು ದಿನದ ಮಟ್ಟಿಗೆ ಅನರ್ಹಗೊಳಿಸಲಾಗಿತ್ತು. ಇದರಿಂದಾಗಿ ಕಾಂಗ್ರೆಸ್‌ನ ಬಲ 6ಕ್ಕೆ ಕುಸಿಯಿತು. ಜೆಡಿಎಸ್ ಬೆಂಬಲಿತ ನಿರ್ದೇಶಕರು, ಒಬ್ಬ ಕಾಂಗ್ರೆಸ್ ಬೆಂಬಲಿತ ಹಾಗೂ ಮೂವರು ಸರ್ಕಾರಿ ನಾಮನಿರ್ದೇಶಿತರ ಬೆಂಬಲದೊಂದಿಗೆ ಬ್ಯಾಂಕ್ ಅಧ್ಯಕ್ಷರಾಗಿ ಬಿಜೆಪಿ ನಾಮನಿರ್ದೇಶಿತ ನಿರ್ದೇಶಕರಾಗಿದ್ದ ಸಿ.ಪಿ.ಉಮೇಶ್, ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಶೋಕ್ ಆಯ್ಕೆಯಾದರು.
    ಇದೀಗ ಬಿಜೆಪಿ ಸರ್ಕಾರ ಇಲ್ಲದ ಹಿನ್ನೆಲೆಯಲ್ಲಿ ಮೂವರು ನಾಮನಿರ್ದೇಶಿತರ ಸದಸ್ಯತ್ವ ಕಾಂಗ್ರೆಸ್ ತೆಕ್ಕೆಗೆ ಸೇರಲಿದೆ. ಇದರಿಂದಾಗಿ ಅನಾಯಾಸವಾಗಿ ಎಂಡಿಸಿಸಿ ಬ್ಯಾಂಕ್ ಗದ್ದುಗೆ ಸಿಗಲಿದೆ. ಸರ್ಕಾರ ರಚನೆಯಾದ ಸುಮಾರು ಹದಿನೈದು ದಿನದೊಳಗೆ ನೂತನ ಆಡಳಿತ ಮಂಡಳಿ ರಚನೆಯಾಗುವ ಸಾಧ್ಯತೆ ಇದೆ.
    ಜೋಗಿಗೌಡರಿಗೆ ಪಟ್ಟ?: ಕಾಂಗ್ರೆಸ್ ಬೆಂಬಲದಿಂದ ಆಯ್ಕೆಯಾಗಿರುವವರ ಪೈಕಿ ಹಲವರು ಅನುಭವಿಗಳಿದ್ದಾರೆ. ಅದರಲ್ಲಿ ಜಿಲ್ಲೆಯ ಕೈಗಾರಿಕಾ ಸಹಕಾರ ಸಂಘಗಳ ವಿಭಾಗದಿಂದ ಆಯ್ಕೆಯಾಗಿರುವ ಕೆ.ಸಿ.ಜೋಗಿಗೌಡ ಪ್ರಮುಖರು. ಎಂಡಿಸಿಸಿ ಬ್ಯಾಂಕ್‌ಗೆ ಮೂರು ಬಾರಿ ಆಯ್ಕೆಯಾಗಿದ್ದು, ಒಮ್ಮೆ ಅಪೆಕ್ಸ್ ಬ್ಯಾಂಕ್‌ಗೆ ಜಿಲ್ಲಾ ಪ್ರತಿನಿಧಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನದ ಆಯ್ಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಜತೆಗೆ ಜಿಲ್ಲಾ ನಾಯಕರಾದ ಎನ್.ಚಲುವರಾಯಸ್ವಾಮಿ ಹಾಗೂ ಪಿ.ಎಂ.ನರೇಂದ್ರಸ್ವಾಮಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಅವರಿಗೆ ಅಧ್ಯಕ್ಷ ಪಟ್ಟ ಸಿಗುವ ಸಾಧ್ಯತೆ ನಿಚ್ಚಳವಾಗಿದೆ.
    ಕಾಂಗ್ರೆಸ್‌ಗೆ ಅನರ್ಹತೆಯ ಅಸ್ತ್ರ: ಬಹುಮತದ ಹೊರತಾಗಿಯೂ 2020ರಲ್ಲಿ ಕಾಂಗ್ರೆಸ್‌ಗೆ ಅಧಿಕಾರ ತಪ್ಪಿಸುವಲ್ಲಿ ಷಡ್ಯಂತ್ರ ನಡೆದಿತ್ತು. ಅಂದು ಸರಿಯಾದ ದಾಖಲೆ ನೀಡಿಲ್ಲ ಎನ್ನುವ ಆರೋಪದ ಮೇಲೆ ಬಿಜೆಪಿ ಸರ್ಕಾರ, ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ಎಚ್.ಎಸ್.ನರಸಿಂಹಯ್ಯ ಅವರ ಸದಸ್ಯತ್ವವನ್ನು ಒಂದು ದಿನದ ಮಟ್ಟಿಗೆ ಅನರ್ಹಗೊಳಿಸುವಲ್ಲಿ ಯಶಸ್ವಿಯಾಗಿತ್ತು. ಆ ಸಮಯದಲ್ಲಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಚುನಾವಣೆಯನ್ನು ಬಹಿಷ್ಕಾರ ಮಾಡಿದ್ದರು. ಇದೀಗ ಕಾಂಗ್ರೆಸ್ ಸರ್ಕಾರ ಬಂದಿರುವುದರಿಂದ ಆಡಳಿತಾರೂಢ ಪಕ್ಷ ವಿಪಕ್ಷಗಳ ನಿರ್ದೇಶಕರ ಮೇಲೆ ಅನರ್ಹತೆಯ ಅಸ್ತ್ರ ಪ್ರಯೋಗಿಸಿದರೂ ಅಚ್ಚರಿಪಡಬೇಕಿಲ್ಲ.
    ಮನ್‌ಮುಲ್ ಗದ್ದುಗೆ ಯಾರಿಗೆ?: ವರಿಷ್ಠರ ಸೂಚನೆ ಮೇರೆಗೆ ಮನ್‌ಮುಲ್ ಅಧ್ಯಕ್ಷ ಸ್ಥಾನಕ್ಕೆ ರಾಮಚಂದ್ರು ರಾಜೀನಾಮೆ ನೀಡಿರುವುದರಿಂದ ಶೀಘ್ರದಲ್ಲೇ ಚುನಾವಣೆ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಕಸರತ್ತು ನಡೆಯುತ್ತಿದೆ.
    12 ನಿರ್ದೇಶಕ ಬಲದ ಮನ್‌ಮುಲ್‌ನಲ್ಲಿ ಜೆಡಿಎಸ್ ಬೆಂಬಲಿತ ಎಂಟು ಜನರು ಆಯ್ಕೆಯಾಗಿದ್ದರು. ಈ ಪೈಕಿ ಮದ್ದೂರಿನಿಂದ ಆಯ್ಕೆಯಾಗಿದ್ದ ಎಸ್.ಪಿ.ಸ್ವಾಮಿ ಬಿಜೆಪಿ ಸೇರಿದರು. ಅಂತೆಯೆ, ಬಿಜೆಪಿಯಿಂದ ರೂಪಾ ಚುನಾಯಿತರಾಗಿದ್ದ ಹಿನ್ನೆಲೆಯಲ್ಲಿ ಕಮಲ ಪಾಳಯದ ಬಲ ಎರಡಕ್ಕೇರಿತ್ತು. ಇನ್ನು ಕಾಂಗ್ರೆಸ್ ಬೆಂಬಲಿತ ಮೂವರು ಚುನಾಯಿತರಾಗಿದ್ದರು. ಬಹುಮತ ಸಾಬೀತುಪಡಿಸಿ ಜೆಡಿಎಸ್ ಅಧಿಕಾರ ಹಿಡಿದಿತ್ತು.
    ಬದಲಾದ ರಾಜಕೀಯ ಪರಿಸ್ಥಿತಿಯಿಂದ ಜೆಡಿಎಸ್ ಬೆಂಬಲಿತ ಕಾಡೇನಹಳ್ಳಿ ರಾಮಚಂದ್ರು ಕಾಂಗ್ರೆಸ್‌ಗೆ, ಕಾಂಗ್ರೆಸ್ ಬೆಂಬಲಿತ ಡಾಲು ರವಿ ಜೆಡಿಎಸ್‌ಗೆ ಸೇರಿದ್ದಾರೆ. ಆದ್ದರಿಂದ ಅಂಕಿ ಅಂಶದಲ್ಲಿ ವ್ಯತ್ಯಾಸವಿಲ್ಲ. ಇನ್ನು ಸಹಕಾರ ನಿಯಮ ಉಲ್ಲಂಘನೆ ಆರೋಪದ ಮೇಲೆ ರೂಪಾ ಸದಸ್ಯತ್ವ ಅನರ್ಹಗೊಂಡಿದ್ದು, ಈ ಆದೇಶವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಆದ್ದರಿಂದ ರೂಪಾ ಅವರ ಸದಸ್ಯತ್ವ ಪ್ರಕರಣದ ಇತ್ಯರ್ಥ ಬಾಕಿ ಇದೆ.
    ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಮೂವರ ಜತೆಗೆ ಸರ್ಕಾರದ ನಾಲ್ಕು ನಾಮನಿರ್ದೇಶಿತ ಸ್ಥಾನ ಸೇರಿದರೆ ಏಳು ಆಗಲಿದೆ. ಅತ್ತ ಜೆಡಿಎಸ್ ಸದಸ್ಯ ಬಲವೂ ಏಳು ಇದೆ. ಆದ್ದರಿಂದ ಅಧ್ಯಕ್ಷ ಗಾದಿ ಹಿಡಿಯಲು ಎರಡೂ ಪಕ್ಷದ ನಡುವೆ ಪೈಪೋಟಿ ನಡೆಯುತ್ತಿದೆ. ಇದಕ್ಕಾಗಿ ಬಿಜೆಪಿ ಬೆಂಬಲ ಪಡೆದು ಅಥವಾ ಎದುರಾಳಿ ಪಕ್ಷದ ನಿರ್ದೇಶಕರನ್ನು ತಮ್ಮ ಪಾಳಯ ಸೇರಿಸಿಕೊಳ್ಳುವ ಮೂಲಕ ಗದ್ದುಗೆ ಏರುವ ಸಾಧ್ಯತೆ ಇದೆ. ಇನ್ನು ಕೆ.ಆರ್.ಪೇಟೆ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್.ಟಿ.ಮಂಜು ಪರ ಡಾಲು ರವಿ ಕೆಲಸ ಮಾಡಿದ್ದರು. ಪರಿಣಾಮ ಮಂಜು ಶಾಸಕರಾಗಿಯೂ ಆಯ್ಕೆಯಾಗಿದ್ದಾರೆ. ಒಂದು ವೇಳೆ ಜೆಡಿಎಸ್ ಗದ್ದುಗೆ ಹಿಡಿದರೆ ಹಿರಿಯ ನಿರ್ದೇಶಕ ರವಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಮಾತ್ರವಲ್ಲದೆ ಇವರ ಬೆನ್ನಿಗೆ ಶಾಸಕ ಎಚ್.ಟಿ.ಮಂಜು, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಇದ್ದಾರೆ. ಇನ್ನು ನೆಲ್ಲಿಗೆರೆ ಬಾಲು, ರಘುನಂದನ್ ಕೂಡ ರೇಸ್‌ನಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಉಮ್ಮಡಹಳ್ಳಿ ಶಿವಪ್ಪ, ಬೋರೇಗೌಡ ನಡುವೆ ಪೈಪೋಟಿ ಇದೆ. ಈ ನಡುವೆ ನಾಮನಿರ್ದೇಶಿತರಾಗುವವರು ಯಾರು ಎನ್ನುವ ಕುತೂಹಲವೂ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts