More

    ನೂತನ ಮೇಯರ್, ಉಪ ಮೇಯರ್‌ಅಧಿಕಾರ ಸ್ವೀಕಾರ 

    ಮಂಗಳೂರು: ನಗರದಲ್ಲಿ ಈಗ ಸಾವಿರಾರು ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಇದರ ಜತೆ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪ್ರಯತ್ನಿಸುವುದಾಗಿ ನೂತನ ಮೇಯರ್ ಪ್ರೇಮಾನಂದ ಶೆಟ್ಟಿ ಭರವಸೆ ನೀಡಿದ್ದಾರೆ.

    ಮಂಗಳೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಬುಧವಾರ ನಿಕಟಪೂರ್ವ ಮೇಯರ್ ದಿವಾಕರ ಪಾಂಡೇಶ್ವರ ಅವರಿಂದ ಅಧಿಕಾರ ವಹಿಸಿಕೊಂಡ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಹಿಂದಿನ ಅವಧಿಯಲ್ಲಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಪ್ರಥಮ ಆದ್ಯತೆ ನೀಡಲಾಗುವುದು. 24*7 ಸಮಗ್ರ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿ ಈಗಿರುವ ವ್ಯವಸ್ಥೆಯನ್ನು ಮೇಲ್ದರ್ಜೇಗೇರಿಸಿ ಪ್ರತಿ ತಿಂಗಳು ಸಭೆ ನಡೆಸಿ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

    ಕಾಲಮಿತಿಯಲ್ಲಿ ಪೂರ್ಣ: ಸ್ಮಾರ್ಟ್ ಸಿಟಿ ಯೋಜನೆ ಮಂಗಳೂರಿಗೆ ಮಂಜೂರಾಗಲು ಸಾರ್ವಜನಿಕರ ಸಹಭಾಗಿತ್ವ ಪ್ರಮುಖ ಪಾತ್ರ ವಹಿಸಿತ್ತು. ಅದೇ ರೀತಿಯಲ್ಲಿ ಸಾರ್ವಜನಿಕರ ವಿಶ್ವಾಸ ಪಡೆದು ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳನ್ನು ಸಂಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು. ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ಈಗಿರುವ ಗುತ್ತಿಗೆದಾರರ ಅವಧಿಯು ಪೂರ್ಣಗೊಳ್ಳುವ ಹಂತದಲ್ಲಿದೆ. ಸರ್ಕಾರದ ಮಾರ್ಗಸೂಚಿಯಂತೆ ಹೊರ ಗುತ್ತಿಗೆ ಅಥವಾ ನೇರ ನೇಮಕಾತಿ ಮೂಲಕ ಪೌರ ಕಾರ್ಮಿಕರ ನೇಮಕದ ಕುರಿತಂತೆ ಪಾಲಿಕೆ ಆಯುಕ್ತರು ಕ್ರಮ ಕೈಗೊಳ್ಳಲಿದ್ದಾರೆ ಎಂದರು.

    ಸಮಸ್ಯೆ ಪರಿಹಾರ: ಉರ್ವ ಮಾರ್ಕೆಟ್ ಕಟ್ಟಡದ ಪ್ರತಿಕ್ರಿಯಿಸಿದ ಅವರು, ಹಿಂದಿನ ಆಡಳಿತ ಪೂರ್ವ ಯೋಚನೆ ಇಲ್ಲದೆ ತ್ವರಿತಗತಿಯಲ್ಲಿ ಯೋಜನೆಯ ಕಾಮಗಾರಿ ನಡೆಸಿತ್ತು. ಈಗ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲ ಮುಡಾ ಅಧ್ಯಕ್ಷರು ಕೆಲಸೂತ್ರಗಳನ್ನು ಮುಂದಿರಿಸಿದ್ದಾರೆ. ಮನಪಾ ಕಡೆಯಿಂದಲೂ ಪ್ರಸ್ತಾವನೆ ಇದ್ದು, ಜತೆಯಾಗಿ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡಲಾಗುವುದು ಎಂದರು.

    ಒತ್ತುವರಿ ಬಗ್ಗೆ ನಿರ್ದಾಕ್ಷಿಣ್ಯ ಕ್ರಮ: ನಗರದಲ್ಲಿ ರಾಜಕಾಲುವೆ ಒತ್ತುವರಿಗೆ ಸಂಬಂಧಿಸಿ ಎಂಟು ವಾರ್ಡ್‌ಗಳಲ್ಲಿ ಡ್ರೋನ್ ಸರ್ವೇ ನಡೆಸಲಾಗಿದೆ. ಇದರಿಂದ ಒತ್ತುವರಿ ಸ್ಪಷ್ಟವಾಗಿ ಕಂಡುಹಿಡಿಯಬಹುದಾಗಿದೆ. ಒತ್ತುವರಿ ಆಗಿರುವಲ್ಲಿ ತೆರವುಗೊಳಿಸಲು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ನೂತನ ಮೇಯರ್ ಪ್ರೇಮಾನಂದ ಶೆಟ್ಟಿ ತಿಳಿಸಿದರು.
    ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಮುಡಾ ಅಧ್ಯಕ್ಷ ರವಿಶಂಕರ ಮಿಜಾರ್, ನಿಕಟಪೂರ್ವ ಮೇಯರ್ ದಿವಾಕರ ಪಾಂಡೇಶ್ವರ, ಉಪ ಮೇಯರ್ ವೇದಾವತಿ, ಪಾಲಿಕೆಯ ಸದಸ್ಯರು ಉಪಸ್ಥಿತರಿದ್ದರು.

    ನೀರಿನ ಬಿಲ್‌ಗೆ ಕ್ರಮ: ನೀರಿನ ಬಿಲ್ ಪ್ರತಿ ತಿಂಗಳು ನೀಡಲಾಗುತ್ತಿಲ್ಲ ಎಂಬ ದೂರು ಇರುವ ಹಿನ್ನೆಲೆಯಲ್ಲಿ ಈಗಿನ 60 ವಾರ್ಡ್‌ಗಳಿಗೆ ಇರುವ ತಲಾ ಒಬ್ಬ ಎಂಪಿಡಬ್ಲುೃ ವರ್ಕರ್‌ಗಳಿಗೆ ಹೆಚ್ಚುವರಿಯಾಗಿ ಮತ್ತೆ 30 ಮಂದಿಯನ್ನು ನೇಮಿಸಲು ಆಯುಕ್ತರು ಸಲಹೆ ನೀಡಿದ್ದಾರೆ. ಗೃಹ ಬಳಕೆಯ ನೀರಿನ ಬಿಲ್‌ಗಳಿಗೆ ಸಂಬಂಧಿಸಿ ಮೀಟರ್‌ಗಳು ಕೆಟ್ಟು ಹೋಗಿದ್ದು, ಸಾಮಾನ್ಯವಾಗಿ ರೀಡಿಂಗ್ ಮಾಡಿ ನೀರಿನ ಬಿಲ್ ನೀಡಲಾಗುತ್ತಿರುವ ಕುರಿತಂತೆ ಹಲವಾರು ದೂರುಗಳು ಬರುತ್ತಿದೆ. ಇಂತಹ ಗೃಹ ಬಳಕೆಯ ನೀರಿನ ಮೀಟರ್ ರೀಡಿಂಗ್ ಸಂದರ್ಭ ಷರಾ ಬರೆದು ಸರಾಸರಿ ಮೀಟರ್ ರೀಡಿಂಗ್ ಆಧಾರದಲ್ಲಿ ಬಿಲ್ ನೀಡುವಂತೆ ಸೂಚನೆ ನೀಡಲಾಗುತ್ತದೆ. ಪ್ರತಿ ತಿಂಗಳು ನೀರಿನ ಬಿಲ್ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು. ಇದೇ ಸಂದರ್ಭ ಉಪ ಮೇಯರ್ ಸುಮಂಗಳಾ ರಾವ್ ಅವರು ತಮ್ಮ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts