More

    ಸಂವಿಧಾನದ ಆಶಯಗಳು ಬಲಗೊಳ್ಳಲಿ

    ಬೀರೂರು: ಸಂವಿಧಾನ ಎಂಬುದು ಜೀವ ಸಂಕುಲಗಳನ್ನು ರಕ್ಷಿಸಿ ಉತ್ತಮ ಬದುಕು ಕಟ್ಟಿಕೊಡುವ ಆಡಳಿತಾತ್ಮಕ ಕಾನೂನು. ಇದರಿಂದ ಪ್ರತಿಯೊಬ್ಬರ ಅಂತರಂಗದ ಕತ್ತಲೆಗೆ ಬೆಳಕಾಗಲಿ, ಸಂವಿಧಾನದ ಆಶಯಗಳು ಬಲಗೊಳ್ಳಲಿ ಎಂದು ತರೀಕೆರೆ ಉಪ ವಿಭಾಗಾಧಿಕಾರಿ ಕಾಂತರಾಜ್ ಹೇಳಿದರು.
    ಮಂಗಳವಾರ ಸಂಜೆ ಬೀರೂರಿಗೆ ಆಗಮಿಸಿದ ಸಂವಿಧಾನ ಜಾಗೃತಿ ರಥವನ್ನು ಸ್ವಾಗತಿಸಿ ಮಾತನಾಡಿದ ಅವರು, ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಲಿಖಿತ ಸಂವಿಧಾನ ರಚಿಸುವ ಮೂಲಕ ಎಲ್ಲರಿಗೂ ಸಲ್ಲುವ ಹಕ್ಕು ಮತ್ತು ಕರ್ತವ್ಯಗಳನ್ನು ಅಳವಡಿಸುವ ಮೂಲಕ ಜವಾಬ್ದಾರಿಯುತ, ಸಶಕ್ತ ಭಾರತ ನಿರ್ಮಿಸುವಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕೊಡುಗೆ ಅಪಾರ. 75 ವರ್ಷಗಳ ಸಂವಿಧಾನದ ಸುವರ್ಣ ಸಂಭ್ರಮದಲ್ಲಿ ರಾಜ್ಯದ ಜನತೆ ಮತ್ತೊಮ್ಮೆ ಸಂವಿಧಾನದ ಆಶಯಗಳನ್ನು ಜಾಗೃತಗೊಳಿಸಿಕೊಳ್ಳಲು ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
    ಕಡೂರು ತಹಸೀಲ್ದಾರ್ ಕವಿರಾಜ್ ಮಾತನಾಡಿ, ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದನ್ನು ಪ್ರತಿಪಾದಿಸುವ ಜತೆಗೆ ಅನ್ಯಾಯಕ್ಕೆ ಒಳಗಾದವರನ್ನು ವಿಶೇಷ ಕಾನೂನಿನ ಮೂಲಕ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕಲು ಪ್ರತಿಪಾದಿಸಿದ , ಸಂವಿಧಾನ ರಚನಾ ಸಭೆ ಅಧ್ಯಕ್ಷರಾದ ಅಂಬೇಡ್ಕರ್ ವಿಚಾರಧಾರೆ ನಮಗೆ ಮಾದರಿಯಾಗಬೇಕು ಎಂದು ತಿಳಿಸಿದರು.
    ಬೀರೂರು ಪುರಸಭೆ ಮುಖ್ಯಾಧಿಕಾರಿ ಶಾಂತಲಾ ಮಾತನಾಡಿ, ಪಟ್ಟಣದ ನಾಗರಿಕರು ಸಂಭ್ರಮದಿಂದ ಸಂವಿಧಾನ ಜಾಗೃತಿ ರಥಯಾತ್ರೆ ಸ್ವಾಗತಿಸಿದ್ದಾರೆ. ಅಂಬೇಡ್ಕರ್ ಚಿಂತನೆಗಳು ಅಜರಾಮರ. ದೇಶದ ಒಕ್ಕೂಟ ವ್ಯವಸ್ಥೆ ಬಲವರ್ಧನೆ ಮತ್ತು ಪ್ರಜಾಪ್ರಭುತ್ವದ ಮೌಲ್ಯವರ್ಧನೆಗೆ ಸಂವಿಧಾನ ಸೂಕ್ತ ಅಡಿಪಾಯ ಹಾಕಿಕೊಟ್ಟಿದೆ ಎಂದರು.
    ಸಂವಿಧಾನ ಜಾಗತಿ ರಥಯಾತ್ರೆಯನ್ನು ಮಹಿಳೆಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು. ಮಹಾತ್ಮ ಗಾಂಧಿ ವೃತ್ತ, ಹಳೇಪೇಟೆ ಶ್ರೀವೀರಭದ್ರ ಸ್ವಾಮಿ ದೇವಾಲಯ, ಮಹಾನವಮಿ ಬಯಲಿನ ಶಿವಾಜಿ ಪ್ರತಿಮೆ ಮಾರ್ಗದ ಮೂಲಕ ರಥಯಾತ್ರೆ ನೆರವೇರಿಸಿ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಎದುರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts