More

  ಸ್ವಾತಂತ್ರ್ಯೊತ್ಸವಕ್ಕೆ ಕರೊನಾ ಕರಿನೆರಳು

  ಸ್ವಾತಂತ್ರ್ಯೊತ್ಸವಕ್ಕೆ ಕರೊನಾ ಕರಿನೆರಳು

  ಚಿಕ್ಕಮಗಳೂರು: ಇತಿಹಾಸದಲ್ಲೇ ಮೊದಲ ಬಾರಿಗೆ ಸ್ವಾತಂತ್ರ್ಯೊತ್ಸವ ಅದ್ದೂರಿ ಆಚರಣೆಗೆ ಕರೊನಾ ಅಡ್ಡಿಯಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ಸರಳವಾಗಿ ಆಚರಿಸಲು ಜಿಲ್ಲಾಡಳಿತ, ಸಂಘ ಸಂಸ್ಥೆಗಳು ಸಿದ್ಧತೆ ನಡೆಸಿವೆ.

  ಆ.15 ಸಮೀಪಿಸುತ್ತಿದೆ ಎಂದರೆ ಎಲ್ಲಿಲ್ಲದ ಸಂಭ್ರಮ. ಎಲ್ಲ ಅಂಗಡಿಗಳಲ್ಲೂ ಕೇಸರಿ, ಬಿಳಿ, ಹಸಿರಿನ ತೋರಣ. ಶಾಲಾ ಕಾಲೇಜು, ಸರ್ಕಾರಿ ಕಚೇರಿ, ಖಾಸಗಿ ಸಂಸ್ಥೆಗಳು ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದವು. ಆಟೋ, ಬಸ್​ಗಳು ಸೇರಿ ಬಹುತೇಕ ವಾಹನಗಳ ಮೇಲೂ ರಾಷ್ಟ್ರಧ್ವಜ ರಾರಾಜಿಸುತ್ತಿತ್ತು. ಮಳೆಯಲ್ಲೂ ಪಥಸಂಚಲನ, ವಿದ್ಯಾರ್ಥಿಗಳ ಸಾಮೂಹಿಕ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ತಯಾರಿ ನಡೆಯುತ್ತಿದ್ದವು. ಪ್ರತಿ ವರ್ಷ ಇಂತಹ ಸಂಭ್ರಮವನ್ನು ಕಣ್ತುಂಬಿಕೊಳ್ಳುತ್ತಿದ್ದ ಸಾರ್ವಜನಿಕರಿಗೆ ಈ ಬಾರಿ ರಸಭಂಗವಾಗಲಿದೆ.

  ಕರೊನಾ ಕಾರಣಕ್ಕೆ ಎನ್​ಸಿಸಿ ವಿದ್ಯಾರ್ಥಿಗಳು ಪಥಸಂಚನದಲ್ಲಿ ಪಾಲ್ಗೊಳ್ಳಲು ಅವರ ಪಾಲಕರು ಒಪ್ಪಿಗೆ ನೀಡದ ಕಾರಣ ಐಡಿಎಸ್​ಐ ಹಾಗೂ ಡಿಎಸಿಜಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ತಂಡ ಪಾಲ್ಗೊಳ್ಳುತ್ತಿಲ್ಲ. ಡಿಎಆರ್, ಪೊಲೀಸ್, ಗೃಹ ರಕ್ಷಕದಳ, ಅಗ್ನಿಶಾಮಕದಳ ಸೇರಿ 7 ತಂಡ ಹೊರತುಪಡಿಸಿದರೆ ಯಾವುದೇ ತಂಡಗಳು ಪಥ ಸಂಚಲನದಲ್ಲಿ ಪಾಲ್ಗೊಳ್ಳುತ್ತಿಲ್ಲ. ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಪಥಸಂಚಲನದಲ್ಲಿ ಪಾಲ್ಗೊಳ್ಳಲು 7 ತುಕಡಿಗಳಿಗೆ ಜಿಲ್ಲಾಡಳಿತದಿಂದ ಸೂಚಿಸಲಾಗಿದೆ.

  ಉಸ್ತುವಾರಿ ಸಚಿವರಿಂದ ಧ್ವಜಾರೋಹಣ: ನಗರದ ಸುಭಾಷ್​ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಸ್ವಾತಂತ್ರ್ಯೊತ್ಸವ ಸರಳವಾಗಿ ಆಚರಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಆ.15ರಂದು ಬೆಳಗ್ಗೆ 9ಕ್ಕೆೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಧ್ವಜಾರೋಹಣ ನೆರವೇರಿಸುವರು. ನಂತರ ಪಥಸಂಚಲನ, ವಂದನೆ ಸ್ವೀಕಾರ ಹಾಗೂ ಸ್ವಾತಂತ್ರ್ಯೊತ್ಸವ ಸಂದೇಶ ವಾಚನವಿದೆ. ವಿಧಾನಪರಿಷತ್ ಉಪ ಸಭಾಪತಿ ಎಸ್.ಎಲ್.ಧಮೇಗೌಡ, ಸಂಸದರಾದ ಶೋಭಾ ಕರಂದ್ಲಾಜೆ, ಪ್ರಜ್ವಲ್ ರೇವಣ್ಣ, ರಾಜ್ಯಸಭೆ ಸದಸ್ಯ ಜೈರಾಮ್ ರಮೇಶ್, ಶಾಸಕರಾದ ಎಂ.ಪಿ.ಕುಮಾರಸ್ವಾಮಿ, ಡಿ.ಎಸ್.ಸುರೇಶ್, ಬೆಳ್ಳಿ ಪ್ರಕಾಶ್, ಟಿ.ಡಿ.ರಾಜೇಗೌಡ, ಎಂಎಲ್ಸಿಗಳಾದ ಆಯನೂರು ಮಂಜುನಾಥ್, ಎಂ.ಕೆ. ಪ್ರಾಣೇಶ್, ಎಸ್.ಎಲ್.ಬೋಜೇಗೌಡ, ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ತಾಪಂ ಅಧ್ಯಕ್ಷೆ ಶುಭಾ ಸತ್ಯಮೂರ್ತಿ ಭಾಗವಹಿಸುವರು.

  ಪ್ರತಿವರ್ಷ ಪಥಸಂಚಲನದಲ್ಲಿ ನಗರದ 15 ಶಾಲಾ ತಂಡ, ಸಾಮೂಹಿಕ ನೃತ್ಯದಲ್ಲಿ 2 ಸಾವಿರ ಮಕ್ಕಳು, ಸಂಜೆ ಕಲಾ ಮಂದಿರದಲ್ಲಿ ನಡೆಯುವ ಸಾಂಸ್ಕೃತಿಕ ನೃತದಲ್ಲಿ 250 ಮಕ್ಕಳು ಭಾಗವಹಿಸುತ್ತಿದ್ದರು. ಕರೊನಾ ಹಿನ್ನೆಲೆಯಲ್ಲಿ ಅಂತರ ಕಾಯ್ದುಕೊಳ್ಳುವುದು ಸೇರಿ ನಿಯಮಪಾಲನೆ ದೃಷ್ಟಿಯಿಂದ ಜಿಲ್ಲಾಡಳಿತದ ಸೂಚನೆಯಂತೆ ಎಲ್ಲವನ್ನೂ ರದ್ದುಪಡಿಸಲಾಗಿದೆ ಎಂದು ಡಿಡಿಪಿಐ ಬಿ.ವಿ.ಮಲ್ಲೇಶಪ್ಪ ಮಾಹಿತಿ ನೀಡಿದರು.

  ಎನ್​ಸಿಸಿ ಆರಂಭವಾದಾಗಿನಿಂದಲೂ ನಿರಂತರವಾಗಿ ಸ್ವಾತಂತ್ರ್ಯೊತ್ಸವ ಹಾಗೂ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಪಾಲ್ಗೊಳ್ಳುತ್ತಿದ್ದೆವು. ಈ ಬಾರಿಯೂ ಜಿಲ್ಲಾಡಳಿತದಿಂದ ಕರೆ ಬಂದಿತ್ತು. ವಿದ್ಯಾರ್ಥಿಗಳಿಗೆ ಉತ್ಸಾಹವಿದ್ದರೂ ಕರೊನಾ ಕಾರಣಕ್ಕೆ ಪಾಲಕರು ಮಕ್ಕಳನ್ನು ಕಳುಹಿಸಲು ನಿರಾಕರಿಸಿದ ಕಾರಣ ಸಾಧ್ಯವಾಗುತ್ತಿಲ್ಲ. ರಾಷ್ಟ್ರೀಯ ಹಬ್ಬದಲ್ಲಿ ನಮ್ಮ ತುಕಡಿ ಪ್ರಥಮ ಬಾರಿಗೆ ಭಾಗವಹಿಸುತ್ತಿಲ್ಲ ಎಂದು ಐಡಿಎಸ್​ಐ ಸರ್ಕಾರಿ ಕಾಲೇಜು ಎನ್​ಸಿಸಿ ಅಧಿಕಾರಿ ಲೆಫ್ಟಿನೆಂಟ್ ಗುರುಸ್ವಾಮಿ ಬೇಸರ ವ್ಯಕ್ತಪಡಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts