More

    ಮಸ್ಕಿಯಲ್ಲಿ ವಿಜಯ ಸಂಕಲ್ಪ ಸಮಾವೇಶ

    ಮಸ್ಕಿ: ಬಿಜೆಪಿಯ ವಿಜಯ ಸಂಕಲ್ಪ ಸಮಾವೇಶ ಹಿನ್ನೆಲೆಯಲ್ಲಿ ಪಟ್ಟಣ ಮದುವಣಗಿತ್ತಿಯಿಂತೆ ಶೃಂಗಾರಗೊಂಡಿದೆ. ವಿಜಯ ಸಂಕಲ್ಪ ಯಾತ್ರೆ ಮೂಲಕ ಬಿಜೆಪಿಯ ರಾಜ್ಯ ನಾಯಕರು, ಸಚಿವರ ದಂಡು ಮಾ.11ರಂದು ಪಟ್ಟಣಕ್ಕೆ ಆಗಮಿಸಲಿದ್ದು, ಬೃಹತ್ ಶಕ್ತಿ ಪ್ರದರ್ಶನ ನಡೆಸಲಿದ್ದಾರೆ.

    ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಮಸ್ಕಿ ಕ್ಷೇತ್ರದಲ್ಲಿ ಇದುವರೆಗೆ 4 ಚುನಾವಣೆಗಳು ನಡೆದಿವೆ. ಬೇಸಿಗೆ ಬಿಸಿಲಿನಂತೆ 5ನೇ ಚುನಾವಣೆಯ ಕಾವು ಕೂಡ ಏರತೊಡಗಿದೆ. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಅಗ್ನಿ ಪರೀಕ್ಷೆಗೆ ಸಿದ್ಧಗೊಂಡಿದ್ದು, ಈಗಾಗಲೇ ಕ್ಷೇತ್ರದ ತುಂಬ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತುತ್ತಿದ್ದಾರೆ. ಮುಂಬರುವ ಚುನಾವಣೆಗಾಗಿ ವಿಜಯ ಸಂಕಲ್ಪ ಯಾತ್ರೆ ಮೂಲಕ ರಣ ಕಹಳೆ ಮೊಳಗಿಸಲು ಸಿದ್ಧರಾಗಿದ್ದಾರೆ.

    ಪೊಲೀಸ್ ಠಾಣೆ ಪಕ್ಕದ ಬಯಲಿನಲ್ಲಿ ಬೃಹತ್ ಪೆಂಡಾಲ ಹಾಕಿದ್ದು, 30 ಸಾವಿರ ಜನರಿಗಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್ ನೇತೃತ್ವದ ತಂಡ ಮಸ್ಕಿಗೆ ಆಗಮಿಸಲಿದ್ದು, ಕೇಂದ್ರ ಸಚಿವ ಭಗವಂತ ಕೂಬಾ, ಸಚಿವರಾದ ಆನಂದಸಿಂಗ್, ಹಾಲಪ್ಪ ಆಚಾರ್, ಪಕ್ಷದ ಹಲವು ನಾಯಕರು ಭಾಗವಹಿಸಲಿದ್ದಾರೆ.

    ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಕುರಿತು ಅವರ ಅಭಿಮಾನಿಗಳು ಹೊರತಂದಿರುವ ಅಭಿನಂದನಾ ಗ್ರಂಥವನ್ನು ಬಿ.ಎಸ್.ಯಡಿಯೂರಪ್ಪ ಬಿಡುಗಡೆ ಮಾಡಲಿದ್ದಾರೆ.

    ಕೇಸರಿ ಪಡೆ ನಡೆಸಿದೆ ಕಸರತ್ತು: ಕ್ಷೇತ್ರದ ಪ್ರತಿಯೊಂದು ಊರಿನಿಂದ ಜನರನ್ನು ಕರೆತರಲು ಕೇಸರಿ ಪಡೆ ಕಸರತ್ತು ನಡೆಸಿದೆ. ಪ್ರತಾಪಗೌಡ ಪಾಟೀಲ ಕುಟುಂಬದವರು, ಬಿಜೆಪಿಯ ಪ್ರಮುಖರು ಹೆಚ್ಚು ಜನ ಸೇರಿಸಲು ಎಲ್ಲಿಲ್ಲದ ಪ್ರಯತ್ನ ನಡೆಸಿದ್ದಾರೆ.

    ಪ್ರತಾಪಗೌಡ ಪಾಟೀಲ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2018 ರಲ್ಲಿ ಕಾಂಗ್ರೆಸ್ಸಿನಿಂದ ಗೆದ್ದಿದ್ದ ಪ್ರತಾಪಗೌಡ ಪಾಟೀಲ ನಂತರ ರಾಜೀನಾಮೆ ನೀಡಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾಗಿದ್ದರು. ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ಕ್ಷೇತ್ರದಲ್ಲಿ ಮತ್ತೆ ಕಮಲ ಅರಳುವಂತೆ ಮಾಡಲು ತಯಾರಿ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts