More

    ಮನೆಯಲ್ಲೇ ಮಾಸ್ಕ್ ತಯಾರಿ

    – ಪಿ.ಬಿ.ಹರೀಶ್ ರೈ ಮಂಗಳೂರು

    ಕರೊನಾ ವೈರಸ್ ಹರಡುವ ಭೀತಿಯಿಂದ ಮಾಸ್ಕ್ ಧರಿಸುವುದು ಅನಿವಾರ್ಯವಾಗಿದ್ದು, ಎಲ್ಲೆಡೆ ಮಾಸ್ಕ್ ಪೂರೈಸುವುದು ಸವಾಲಾಗಿ ಪರಿಣಮಿಸಿದೆ. ಇದನ್ನು ಕೊಂಚ ಮಟ್ಟಿಗೆ ನಿಭಾಯಿಸಲು ಬಿಜೆಪಿ ಮಹಿಳಾ ಮೋರ್ಚಾ ಮನೆಯಲ್ಲೇ ಮಾಸ್ಕ್ ತಯಾರಿಸುವ ಅಭಿಯಾನ ಶುರು ಮಾಡಿದೆ. ಸಾಮಾಜಿಕ ಜಾಲತಾಣದ ಮೂಲಕ ಮಾಸ್ಕ್ ಹೊಲಿಯುವ ವಿಧಾನವನ್ನು ಮಹಿಳೆಯರಿಗೆ ಕಲಿಸಿಕೊಡಲಾಗುತ್ತಿದೆ.
    ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಪೂಜಾ ಪೈ ಅವರು ಮಾಸ್ಕ್‌ಗಾಗಿ ಬಟ್ಟೆ ಕಟ್ ಮಾಡುವ ಹಾಗೂ ಹೊಲಿಯುವ ಸರಳ ವಿಧಾನವನ್ನು ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಟ್ಟಿದ್ದಾರೆ. ಪಕ್ಷದ ಸದಸ್ಯೆಯರಿಗೆ ಈ ವಿಡಿಯೋ ವಾಟ್ಸಪ್ ಮೂಲಕ ರವಾನೆಯಾಗಿದೆ. ಮೊದಲ ದಿನವೇ ಪುತ್ತೂರು, ಮೂಡುಬಿದಿರೆ, ಮಂಗಳೂರು ಸಹಿತ ವಿವಿಧ ಕಡೆ 400 ಮಾಸ್ಕ್ ತಯಾರಾಗಿದೆ.

    ರಾಜ್ಯಾಧ್ಯಕ್ಷರ ಸೂಚನೆ
    ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರು ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆಯರಿಗೆ ಸಮೂಹ ಕರೆ ಮಾಡಿ ಮಾಸ್ಕ್ ತಯಾರಿ ಅಭಿಯಾನ ನಡೆಸುವಂತೆ ಸೂಚನೆ ನೀಡಿದ್ದರು. ದ.ಕ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಭಿಯಾನ ಆರಂಭಕ್ಕೆ ಮುನ್ನ ಮನೆಯಲ್ಲೇ ಹೊಲಿಗೆ ಯಂತ್ರ ಇರುವ ಕಾರ್ಯಕರ್ತೆಯರನ್ನು ಗುರುತಿಸಿ ಅವರಿಗೆ ಸೂಚನೆ ರವಾನಿಸಿದೆ. ಜಿಲ್ಲೆಯ 8 ಕ್ಷೇತ್ರ ಸಮಿತಿ ವ್ಯಾಪ್ತಿಯಲ್ಲಿ ಒಬ್ಬರನ್ನು ಪ್ರಭಾರಿಯಾಗಿ ನೇಮಿಸಿದ್ದು, ಕ್ಷೇತ್ರದಲ್ಲಿ 5 ಸಾವಿರ ಮಾಸ್ಕ್‌ನಂತೆ ಸುಮಾರು 40 ಸಾವಿರ ಮಾಸ್ಕ್ ತಯಾರಿಸುವ ಗುರಿ ಹೊಂದಿದೆ. ಬೂತ್ ಮಟ್ಟದಲ್ಲಿ ಇದನ್ನು ಮನೆಮನೆಗೆ ವಿತರಿಸಲು ಪಕ್ಷದ ಆಯ್ದ ಕಾರ್ಯಕರ್ತರಿಗೆ ಜವಾಬ್ದಾರಿ ನೀಡಲಾಗಿದೆ.

    ಬಟ್ಟೆ ಕೊರತೆ
    ಲಾಕ್‌ಡೌನ್‌ನಿಂದ ಅಂಗಡಿಗಳು ಬಂದ್ ಆಗಿರುವ ಕಾರಣ ಮಾಸ್ಕ್ ತಯಾರಿಗೆ ಹೊಸ ಬಟ್ಟೆ ಕೊರತೆ ಉಂಟಾಗಿದೆ. ಮನೆಯಲ್ಲೇ ಇರುವ ಯಾವುದಾದರೂ ಶುಭ್ರ ಹತ್ತಿ ಬಟ್ಟೆ ಬಳಸಿ ಮಾಸ್ಕ್ ತಯಾರಿಸುವಂತೆ ಸೂಚಿಸಲಾಗಿದೆ. ಟೈಲರಿಂಗ್ ವೃತ್ತಿ ನಡೆಸುವ ಕೆಲವರ ಮನೆಯಲ್ಲಿ ಬಟ್ಟೆ ಸ್ಟಾಕ್ ಇದೆ. ಅದನ್ನು ಈಗ ಮಾಸ್ಕ್ ತಯಾರಿಗೆ ಬಳಸಲಾಗುತ್ತಿದೆ. ನೈರ್ಮಲ್ಯಕ್ಕೆ ಆದ್ಯತೆ ನೀಡಿ ವೈಜ್ಞಾನಿಕ ಮಾದರಿಯ ಮಾಸ್ಕ್ ತಯಾರಿ ಮಾಡಲು ಮಹಿಳೆಯರಿಗೆ ಅಗತ್ಯ ಸಲಹೆ ನೀಡಿದ್ದೇವೆ. ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಾಸಕರ ನೆರವು ಪಡೆದು ಹೊಸ ಬಟ್ಟೆ ಒದಗಿಸಲು ಪ್ರಯತ್ನ ನಡೆಸುತ್ತೇವೆ ಎನ್ನುತ್ತಾರೆ ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಪೂಜಾ ಪೈ ಅವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts