More

    ಮಾಸ್ಕ್ ದಿನದ ಅಂಗವಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಾಗೃತಿ ಜಾಥಾ

    ರಾಮನಗರ: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ವತಿಯಿಂದ ಕೋವಿಡ್-19 ಸೋಂಕು ನಿಯಂತ್ರಿಸಲು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಮಾಸ್ಕ್ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜನ ಜಾಗೃತಿ ಜಾಥಾಗೆ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಗುರುವಾರ ಚಾಲನೆ ನೀಡಿದರು.

    ಕರೊನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜನರಿಗೆ ಮಾಸ್ಕ್ ವಿತರಿಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿಯಿಂದ ಆರಂಭಗೊಂಡ ಜಾಥಾ ಜಿಲ್ಲಾ ಆಸ್ಪತ್ರೆಯವರೆಗೆ ನಡೆಯಿತು.

    ಜಿಪಂ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಇಕ್ರಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಎ. ಶೆಟ್ಟಿ, ಅಪರ ಜಿಲ್ಲಾಧಿಕಾರಿ ಬಿ.ಪಿ ವಿಜಯ್, ಅಪರ ವಿಭಾಗಾಧಿಕಾರಿ ದಾಕ್ಷಾಯಿಣಿ, ಜಿಲ್ಲಾ ಆರೋಗ್ಯಧಿಕಾರಿ ಡಾ. ನಿರಂಜನ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಿಬ್ಬಂದ ಭಾಗವಹಿಸಿದ್ದರು. ಪಿಡಬ್ಲ್ಯುಡಿ ವೃತ್ತದ ಬಳಿ ಮಾಸ್ಕ್ ಬಳಕೆ ಅರಿವು ಮೂಡಿಸುವ ಪ್ರತಿಜ್ಞಾ ವಿಧಯನ್ನು ಜಿಲ್ಲಾಧಿಕಾರಿ ಅರ್ಚನಾ ಬೋಧಿಸಿದರು.

    23 ಸಾವಿರ ರೂ. ದಂಡ ವಸೂಲಿ: ಚನ್ನಪಟ್ಟಣದಲ್ಲಿ ಮಾಸ್ಕ್ ಧರಿಸದೇ ಓಡಾಡುತ್ತಿದ್ದವರಿಗೆ ನಗರಸಭೆ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದೆ. ಕಳೆದ ಹಲವು ದಿನಗಳಿಂದ ಕಾರ್ಯಾಚರಣೆಗೆ ಇಳಿದಿರುವ ನಗರಸಭೆ ಆರೋಗ್ಯಾಧಿಕಾರಿಗಳ ತಂಡ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದ ಸಾರ್ವಜನಿಕರು ಹಾಗೂ ದ್ವಿಚಕ್ರ ವಾಹನ ಸವಾರರಿಂದ ನೂರು ರೂ. ದಂಡ ವಸೂಲು ಮಾಡುತ್ತಿದೆ ಹಾಗೂ ಜತೆಗೆ ಮಾಸ್ಕ್ ನೀಡಿ, ಕಡ್ಡಾಯವಾಗಿ ಧರಿಸುವಂತೆ ತಾಕೀತು ಮಾಡುತ್ತಿದೆ. ಇದುವರೆಗೆ 23 ಸಾವಿರ ರೂ. ದಂಡ ವಸೂಲು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಕಾರ್ಯಾಚರಣೆ ಮಾಡುವುದಾಗಿ ಪೌರಾಯುಕ್ತ ಶಿವನಂಕಾರಿಗೌಡ ಹಾಗೂ ಆರೋಗ್ಯ ನಿರೀಕ್ಷಕಿ ವರಲಕ್ಷ್ಮೀ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts