More

    ಹಸೆಮಣೆ ಏರಲು ಅಡ್ಡಿಯಿಲ್ಲ: COVID19 ಮಾರ್ಗಸೂಚಿಯಲ್ಲಿ ಇಲ್ಲ ಮದುವೆ ಹೀಗೇ ಮಾಡಬೇಕು ಎಂಬ ನಿರ್ದೇಶನ…

    ಪ್ರಕಾಶ್ ಮಂಜೇಶ್ವರ ಮಂಗಳೂರು

    ಒಂದು ಬೆಳಗ್ಗೆ ಸಾರ್ವಜನಿಕರೊಬ್ಬರಿಂದ ಗ್ರಾಮ ಪಂಚಾಯಿತಿ ಅಧಿಕಾರಿ ಅವರಿಗೆ ಕರೆ ಬರುತ್ತದೆ.
    ‘ಸರ್ …… ಪ್ರದೇಶದ …… ಇವರ ಮದುವೆ ಇಂದು ನಡೆಯುತ್ತಿದೆ. ಮನೆಯಲ್ಲಿ ಭಾರಿ ಜನ ಸೇರಿದ್ದಾರೆ’ ಎನ್ನುತ್ತದೆ ಆ ಕಡೆಯ ಧ್ವನಿ. ಫೋನ್‌ನಲ್ಲಿ ದೊರೆತ ಮಾಹಿತಿ ಪ್ರಕಾರ ಕಾರ್ಯಪಡೆಯು ದೊರೆತ ವಿಳಾಸ ಹುಡುಕಿ ತೆರಳುತ್ತದೆ. ಆ ಮನೆಯಲ್ಲಿ ಮಕ್ಕಳು ಸೇರಿ ಸುಮಾರು 10 ಮಂದಿ ಸೇರಿದ್ದರು.
    ಅಲ್ಲಿ ಮದುವೆ ನಡೆಯುತ್ತಿರುವುದು ನಿಜವಾಗಿತ್ತು. ಆದರೆ ಯಾವುದೇ ಸದ್ದುಗದ್ದಲ ಇರಲಿಲ್ಲ. ಬೆಳಗ್ಗೆ ಮೌಲ್ವಿ ಬಂದು ಪಾರಾಯಣ ಮಾಡಿ ಹೋಗಿದ್ದರು. ಮಧ್ಯಾಹ್ನ ಮೂರು ಮಂದಿ ಕಾರಿನಲ್ಲಿ ತೆರಳಿ ಮದುಮಗಳನ್ನು ಕರೆದುಕೊಂಡು ಬರಲು ವ್ಯವಸ್ಥೆಯಾಗಿತ್ತು. ಸುತ್ತಮುತ್ತಲಿನ ಮನೆಗೆ ತಲುಪಿಸಲು ಸ್ವಲ್ಪ ಬಿರಿಯಾನಿ ಪಾರ್ಸಲ್ ಗಳು ಸಿದ್ಧವಾಗುತ್ತಿತ್ತು.
    ಹಿಂದು ಧರ್ಮದ ಸಂಪ್ರದಾಯದಂತೆ ಇದೇ ಭಾನುವಾರ ಇನ್ನೊಂದು ಮದುವೆ ನಡೆಯಲಿದೆ. ಲಾಕ್‌ಡೌನ್ ಅವಧಿಯಲ್ಲಿ ಬಡವರ ಇಂತಹ ಹಲವು ಮದುವೆಗಳು ಸದ್ದುಗದ್ದಲವಿಲ್ಲದೆ ನಡೆದು ಹೋಗಿವೆ. ಇನ್ನೂ ಕೆಲವು ನಡೆಯಲಿವೆ.

    ಮಾರ್ಗ ಸೂಚಿಯಲ್ಲಿ ಇಲ್ಲ: ಕೊವಿಡ್ 19 ಲಾಕ್‌ಡೌನ್ ಇರುವ ಈ ಅವಧಿಯಲ್ಲಿ ಮದುವೆಗಳು ಹೇಗೆ ನಡೆಯಬೇಕು ಎನ್ನುವುದು ಸರ್ಕಾರದ ಮಾರ್ಗಸೂಚಿಯಲ್ಲಿ ಇಲ್ಲ. ಅದು ತುರ್ತು/ ಅನಿವಾರ್ಯ ಕಾರ್ಯಕ್ರಮಗಳ ಪಟ್ಟಿಯಲ್ಲೂ ಇಲ್ಲ. ಆದರೆ ಕನಿಷ್ಠ ಜನರ ಉಪಸ್ಥಿತಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ನಡೆಯುತ್ತಿರುವ ಮದುವೆಗಳಿಗೆ ಜಿಲ್ಲಾಡಳಿತ ವಿರೋಧ ವ್ಯಕ್ತಪಡಿಸಿಲ್ಲ.
    ಹಿಂದು ಮತ್ತು ಮುಸ್ಲಿಂ ಧರ್ಮಗಳಿಗೆ ಸೇರಿದ ಮದುವೆಗಳು ಸರಳವಾಗಿ ನಡೆಯುತ್ತಿವೆ. ಅದರಲ್ಲೂ ಹೆಚ್ಚಿನವರು ಬಡವರು. ಆದರೆ ಚರ್ಚ್‌ನಲ್ಲಿಯೇ ಪ್ರಮುಖ ವಿಧಿವಿಧಾನಗಳನ್ನು ನಡೆಸುವ ಸಂಪ್ರದಾಯ ಹೊಂದಿರುವ ಕ್ರಿಶ್ಚಿಯನ್ನರ ಮದುವೆಗಳು ನಡೆದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಅದ್ದೂರಿಯಾಗಿ ಮದುವೆಯಾಗಲು ಬಯಸಿರುವ ಭಾಗಶಃ ಎಲ್ಲರೂ ಲಾಕ್‌ಡೌನ್ ಪೂರ್ಣ ತೆರವಾಗಲು ಕಾಯುತ್ತಿದ್ದಾರೆ.

    ನೋಂದಣಿ ಹೇಗೆ?
    ಮದುವೆಗೆ ಸಾಕ್ಷಿ ಮುಖ್ಯ. ಸಭಾಂಗಣಗಳಲ್ಲಿ ನಡೆದ ಮದುವೆಗಳಿಗೂ ಒಂದು ಆಧಾರ ಇರುತ್ತದೆ. ಆದರೆ ಕೇವಲ ಎರಡು ಮನೆಗಳ ಸದಸ್ಯರ ನಡುವೆ ನಡೆಯುವ ಮದುವೆಗೆ ಏನು ಆಧಾರ ಎನ್ನುವ ಪ್ರಶ್ನೆ ಕೆಲವರಲ್ಲಿ ಇದೆ. ಸಮೀಪದ ಕೇರಳ ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಮದುವೆ ನೋಂದಣಿ ನಡೆಸಿಕೊಂಡ ರೀತಿ ಕರ್ನಾಟಕದಲ್ಲೂ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಗ್ರಾಮ ಕರಣಿಕರ ಮೂಲಕ ಮದುವೆ ನೋಂದಣಿಗೆ ಅವಕಾಶವಿದೆ ಎನ್ನುತ್ತಾರೆ ಓರ್ವ ಹಿರಿಯ ಅಧಿಕಾರಿ.

    ಸಾಮಾಜಿಕ ಅಂತರ ಕಾಯ್ದುಕೊಂಡು ಗಂಡು ಮತ್ತು ಹೆಣ್ಣಿನ ಎರಡು ಮನೆಯವರು ಮಾತ್ರ ಇದ್ದು ನಡೆಸಿದ ಮದುವೆಗಳಿಗೆ ಯಾರೂ ಅಡ್ಡಿಪಡಿಸಿಲ್ಲ. ಸ್ಥಳೀಯವಾಗಿ ಅಧಿಕಾರಿಗಳಿಗೆ ಕೂಡ ಸಹಕಾರ ನೀಡಿದ್ದಾರೆ. ಲಾಕ್‌ಡೌನ್ ಆಶಯಕ್ಕೆ ವಿರುದ್ಧವಾಗಿ ಸಮಾರಂಭ ಏರ್ಪಡಿಸಿದರೆ ಕ್ರಮ ಕೈಗೊಳ್ಳಲಾಗುವುದು.
    – ಸಿಂಧೂ ಬಿ. ರೂಪೇಶ್ ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ

    ಲಾಕ್‌ಡೌನ್ ಘೋಷಣೆಯಾಗುವ ಮೊದಲೇ ನಿಗದಿಯಾಗಿದ್ದ ಮದುವೆಗಳಿಗೆ ಅವಕಾಶ ನೀಡಲಾಗಿದೆ. ಅತ್ಯಂತ ಸರಳವಾಗಿ ನಡೆಯಬೇಕಾಗಿರುವ ಈ ವಿವಾಹದಲ್ಲಿ ಹಳೇ ಮಾರ್ಗಸೂಚಿ ಪ್ರಕಾರ 20 ಜನರು ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ವಾಸ್ತವವಾಗಿ ಹೊಸ ಮಾರ್ಗಸೂಚಿ ಪ್ರಕಾರ ಅನುಮತಿಗೆ ಅವಕಾಶವೇ ಇಲ್ಲ.
    – ಬಿ.ಎಂ.ಲಕ್ಷಿ ಪ್ರಸಾದ್, ಪೊಲೀಸ್ ಅಧೀಕ್ಷಕರು, ದ.ಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts