More

    ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಕಂಗೆಟ್ಟ ರೇಷ್ಮೆ ಬೆಳೆಗಾರ

    ವಿಜಯವಾಣಿ ವಿಶೇಷ ಉಜ್ಜಿನಿ: ರೇಷ್ಮೆಕೃಷಿಯಿಂದ ಬದುಕು ಕಟ್ಟಿಕೊಂಡಿದ್ದ ತಾಲೂಕಿನ ಬೆಳೆಗಾರರು ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಜತೆಗೆ ರೇಷ್ಮೆ ಹುಳುಗಳಿಗೆ ತಗುಲುತ್ತಿರುವ ರೋಗಗಳಿಂದ ಸುಸ್ತಾಗಿದ್ದಾರೆ.

    ರೇಷ್ಮೆ ಬೆಳೆಯಲು ಇಲಾಖೆಯ ವಿವಿಧ ಯೋಜನೆಗಳಲ್ಲಿ ಬೆಳೆಗಾರರಿಗೆ ಆರ್ಥಿಕ ಹಾಗೂ ತಾಂತ್ರಿಕ ಸಹಾಯ ನೀಡುತ್ತಿದೆ. ಇದರಿಂದ ಕೊಟ್ಟೂರು ತಾಲೂಕಿನಲ್ಲಿ 407 ರೈತರು 350 ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಕೃಷಿ ಕೈಗೊಂಡಿದ್ದಾರೆ. ಆದರೆ, ಇತ್ತೀಚೆಗೆ ರೇಷ್ಮೆ ಮಾರಾಟ ದರದಲ್ಲಿ ತೀವ್ರ ಇಳಿಕೆಯಾಗಿರುವುದು ಹಾಗೂ ರೇಷ್ಮೆ ಹುಳುಗಳು ವಿವಿಧ ರೋಗಗಳಿಗೆ ತುತ್ತಾಗುತ್ತಿರುವುದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಇದನ್ನೂ ಓದಿ: ಯಲಬುರ್ಗಾದಲ್ಲಿ ಕೃಷಿ ಉಪಮಾರುಕಟ್ಟೆ ಸಮಿತಿ ಸ್ಥಾಪನೆ ಶೀಘ್ರ?

    ಇತ್ತೀಚಿನ ದಿನಗಳಲ್ಲಿ ರೈತರು ಸಾಂಪ್ರದಾಯಿಕ ಬೆಳೆಗಳನ್ನು ಬಿಟ್ಟು, ಹಿಪ್ಪು ನೇರಳೆ ನಾಟಿ ಮಾಡಿ ರೇಷ್ಮೆ ಹುಳು ಸಾಕಣೆಯಯತ್ತ ಹೆಜ್ಜೆ ಹಾಕಿದ್ದಾರೆ. ಮೊದಲಿಗಿಂತ ಈಗ ರೇಷ್ಮೆ ಹುಳು ಸಾಕಣೆ ಸುಲಭವಾದರೂ ವೆಚ್ಚ ದುಬಾರಿಯಾಗುತ್ತಿದೆ. ಇದರ ಜೊತೆಗೆ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗಿರುವುದು ಚಿಂತೆಗೀಡು ಮಾಡಿದೆ. ಪ್ರತಿ ಎಕರೆ ಹಿಪ್ಪು ನೇರಳೆ ನಾಟಿ ಮಾಡಲು 25-30 ಸಾವಿರ ರೂ. ವೆಚ್ಚ ಹಾಗೂ ರೇಷ್ಮೆ ಹುಳು ಸಾಕಣೆ ಮಾಡುವ ಮನೆ ನಿರ್ಮಾಣಕ್ಕೆ 10-12 ಲಕ್ಷ ರೂಪಾಯಿ ವೆಚ್ಚ ಮಾಡಬೇಕು.

    ಕೈಕಟ್ಟಿ ಕೂಡುವಂತಾಗಿದೆ

    ಒಂದು ಬಾರಿ ರೇಷ್ಮೆ ನಾಟಿ ಮಾಡಿದ ನಂತರ ಸೊಪ್ಪು ಬರಲು ಕನಿಷ್ಠ ಮೂರು ತಿಂಗಳಾದರೂ ಬೇಕಾಗುತ್ತದೆ. ರೇಷ್ಮೆ ಗಿಡಗಳ ಮಧ್ಯ ಯಾವುದೇ ಬೆಳೆ ಬೆಳೆಯುವಂತಿಲ್ಲ. ಇದರ ಮಧ್ಯ ಪ್ರತಿ 100 ಮೊಟ್ಟೆಯ ಹುಳುಗಳಿಗೆ ಐದು ಸಾವಿರ ರೂಪಾಯಿ ವ್ಯಯಿಸಬೇಕು. ದೂರದ ರಾಮನಗರದ ಮಾರುಕಟ್ಟೆಗೆ ರೇಷ್ಮೆ ಗೂಡುಗಳನ್ನು ಸಾಗಣೆ ಮಾಡಬೇಕಾಗಿದ್ದು, ಇದರ ವೆಚ್ಚವೂ ಮೈಮೇಲೆ ಬರುತ್ತದೆ. ಈ ಮೊದಲು ಪ್ರತಿ ಕೆಜಿಗೆ 700-800 ರೂಪಾಯಿ ಸಿಗುತ್ತಿತ್ತು. ಆದರೆ, ಕಳೆದ ಎರಡು ತಿಂಗಳಿನಿಂದ 250 ರೂ.ವರೆಗೆ ಬೆಲೆ ಕುಸಿತವಾಗಿದೆ. ಇವೆಲ್ಲ ವೆಚ್ಚಗಳನ್ನು ಸರಿ ದೂಗಿಸಲು ಸಾಧ್ಯವಾಗದೆ ರೈತರು ಕೈಕಟ್ಟಿ ಕೂಡುವಂತಾಗಿದೆ.

    ರೇಷ್ಮೆ ಬಹಳಷ್ಟು ಸೂಕ್ತ ಕೃಷಿ. ಬಹುಬೇಗ ಫಸಲು ಬರುತ್ತದೆ. ಆದರೆ ಸಾಗಣೆ ಮತ್ತು ಸಾಕಣೆ ಸಂದರ್ಭ ಹುಳುಗಳಿಗೆ ಹಾಲು ರೋಗ, ಸುಣ್ಣಕಟ್ಟು ರೋಗ, ಸೊಪ್ಪೆ ರೋಗ ಬಂದರೆ ಹಾಕಿದ ಬಂಡವಾಳವೂ ಬರುವುದಿಲ್ಲ. ಮೂರ‌್ನಾಲ್ಕು ವರ್ಷಗಳ ಹಿಂದೆ ಪ್ರತಿ ಕೆ.ಜಿಗೆ 300 ರೂ. ದರ ಸಿಕ್ಕರೂ ಲಾಭವಾಗುತ್ತಿತ್ತು. ಕಾರ್ಮಿಕರ ಕೂಲಿ ಸೇರಿದಂತೆ ಇನ್ನಿತರ ಸಲಕರಣೆಗಳ ಬೆಲೆ ಕಡಿಮೆ ಇರುತ್ತಿತ್ತು. ಆಗ ಲಾಭವಾಗುತ್ತಿತ್ತು ಎನ್ನುತ್ತಾರೆ ರೈತರು.

    ಮಳೆಗಾಲದಲ್ಲಿ ರೇಷ್ಮೆ ದರ ಸ್ವಲ್ಪ ಸ್ವಲ್ಪ ಕಡಿಮೆಯಾಗುತ್ತದೆ. ಅಧಿವೇಶನದ ನಂತರ ಸರ್ಕಾರದ ಗಮನಕ್ಕೆ ತಂದಿದ್ದೇವೆ. ಸರ್ಕಾರ ಬೆಂಬಲ ಬೆಲೆ ಕೋಡುತ್ತೋ ಏನೋ ಕಾದು ನೋಡಬೇಕಾಗಿದೆ. ಸರ್ಕಾರದ ನಿರ್ದೇಶನದಂತೆ ನಾವು ಅನುಸರಿಸುತ್ತೇವೆ.


    ಸುಧೀರ್ ವಿ., ಉಪನಿರ್ದೇಶಕ, ರೇಷ್ಮೆ ಇಲಾಖೆ, ವಿಜಯನಗರ ಜಿಲ್ಲೆ.

    ರೇಷ್ಮೆ ಬೆಳೆಯಲ್ಲಿ ಉತ್ತಮ ಲಾಭ ಇದೆ ಎಂದು ಕೈತುಂಬ ಸಂಬಳ ಬರುತ್ತಿದ್ದ ಕೆಲಸ ಬಿಟ್ಟು ಏಳು ಎಕರೆಯಲ್ಲಿ ರೇಷ್ಮೆ ಹಾಕಿದ್ದೇನೆ. ಆದರೆ, ಈಗ ಬೆಲೆ ಇಳಿಕೆಯಾಗಿರುವುದು ಸಂಕಷ್ಟ ತಂದಿದೆ.


    ಬಿ.ಎಂ. ಕೊಟ್ರೇಶ್, ರೇಷ್ಮೆ ಬೆಳೆಗಾರ, ನಿಂಬಳಗೆರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts