More

    ಯಲಬುರ್ಗಾದಲ್ಲಿ ಕೃಷಿ ಉಪಮಾರುಕಟ್ಟೆ ಸಮಿತಿ ಸ್ಥಾಪನೆ ಶೀಘ್ರ?

    ವಿಜಯವಾಣಿ ವಿಶೇಷ ಯಲಬುರ್ಗಾ
    ರೈತರು ಬೆಳೆಯುವ ಕೃಷಿ ಆಧಾರಿತ ಬೆಳೆಗಳ ಮಾರಾಟಕ್ಕೆ ತಾಲೂಕು ಕೇಂದ್ರದಲ್ಲಿ ಉಪಮಾರುಕಟ್ಟೆ ಸಮಿತಿ ಮಂಜೂರು ಮಾಡುವಂತೆ ಒತ್ತಾಯಿಸಿ ಶಾಸಕ ಬಸವರಾಜ ರಾಯರಡ್ಡಿ ಅವರು ಜವಳಿ ಮತ್ತು ಸಕ್ಕರೆ ಅಭಿವೃದ್ಧಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್‌ಗೆ ಪತ್ರ ಬರೆದು ರೈತರಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.

    ತಾಲೂಕಿನ ಸುತ್ತಲಿನ ರೈತರು ಸಾಕಷ್ಟು ಪ್ರಮಾಣದಲ್ಲಿ ಕೃಷಿ ಆಧಾರಿತ ಬೆಳೆಗಳನ್ನು ಬೆಳೆಯುತ್ತಿದ್ದು, ಅವುಗಳ ಮಾರಾಟಕ್ಕೆ ಒಂದು ಉಪಮಾರುಕಟ್ಟೆ ಅವಶ್ಯವಿದೆ ಎಂದು ಜು.13ರಂದು ಸಚಿವ ಶಿವಾನಂದ ಪಾಟೀಲ್‌ಗೆ ಶಾಸಕ ರಾಯರಡ್ಡಿ ಪತ್ರ ಬರೆದಿದ್ದರು. ಸಚಿವರು, ಶಾಸಕರ ಪತ್ರವನ್ನು ಆಧರಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜು.20ರಂದು ಸಂಬಂಧಪಟ್ಟ ಕೃಷಿ ಮಾರುಕಟ್ಟೆ ನಿರ್ದೇಶಕರಿಗೆ ಸೂಚಿಸಿದ್ದು, ಸಚಿವರಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಇದರಿಂದ ತಾಲೂಕಿನ ರೈತರಿಗೆ ಬಹುದಿನಗಳ ಬೇಡಿಕೆ ಈಡೇರುವ ಭರವಸೆ ಹೆಚ್ಚಿಸಿದೆ.
    ತಾಲೂಕಿನಲ್ಲಿ ಹೆಸರು, ಅಲಸಂದೆ, ಸೂರ್ಯಕಾಂತಿ, ಸಜ್ಜೆ, ಜೋಳ, ಮೆಕ್ಕೆಜೋಳ, ತೊಗರಿ, ಹುರಳಿ, ಎಳ್ಳು ಸೇರಿ ಇತರ ಕೃಷಿ ಬೆಳೆಗಳನ್ನು ಯಥೇಚ್ಛವಾಗಿ ಬೆಳೆಯಲಾಗುತ್ತದೆ. ಅವುಗಳ ಮಾರಾಟಕ್ಕೆ ಪಕ್ಕದ ಕೊಪ್ಪಳ, ಕುಷ್ಟಗಿ, ಗಜೇಂದ್ರಗಡ, ತಾವರಗೇರಾ, ಕನಕಗಿರಿ ಕೃಷಿ ಮಾರುಕಟ್ಟೆಗಳಿಗೆ ಸಾಗಿಸಲಾಗುತ್ತಿದೆ.

    ನಮ್ಮದೇ ಕ್ಷೇತ್ರದ ಕುಕನೂರು ತಾಲೂಕು ಕೇಂದ್ರದಲ್ಲಿ ಕೃಷಿ ಮಾರುಕಟ್ಟೆ ಸಮಿತಿ ಇದ್ದರೂ ಎರಿ ಭಾಗದ ರೈತರಿಗೆ ಅನುಕೂಲವಾಗುತ್ತದೆ. ಯಲಬುರ್ಗಾ ತಾಲೂಕು ಕೇಂದ್ರದಲ್ಲಿ ಉಪಮಾರುಕಟ್ಟೆ ಸ್ಥಾಪನೆಯಾಗುವುದರಿಂದ ಎರೆ ಮತ್ತು ಮಸಾರಿ ಭಾಗದಲ್ಲಿ ಬೆಳೆದ ಬೆಳೆಗಳ ಫಸಲು ಮಾರಾಟಕ್ಕೆ ಅನುಕೂಲವಾಗುತ್ತದೆ. ಇದರಿಂದ ಸಾಗಣೆ ವೆಚ್ಚವೂ ಕಡಿಮೆ ಆಗುತ್ತದೆ ಎನ್ನುತ್ತಾರೆ ತಾಲೂಕಿನ ರೈತರು.

    ಯಲಬುರ್ಗಾ ತಾಲೂಕಿನ ರೈತರ ಅನುಕೂಲಕ್ಕಾಗಿ ಕೃಷಿ ಉಪಮಾರುಕಟ್ಟೆ ಸ್ಥಾಪಿಸುವ ಅಗತ್ಯತೆ ಇದೆ. ಆದ್ದರಿಂದ ತಾಲೂಕು ಕೇಂದ್ರದಲ್ಲಿ ಕೃಷಿ ಉಪಮಾರುಕಟ್ಟೆ ಸಮಿತಿ ಸ್ಥಾಪನೆ ಮಂಜೂರಾತಿಗಾಗಿ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್‌ಗೆ ಪತ್ರ ಬರೆದಿದ್ದೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಅಗತ್ಯ ಕ್ರಮಕ್ಕಾಗಿ ನಿರ್ದೇಶನ ನೀಡಿದ್ದಾರೆ.
    ಬಸವರಾಜ ರಾಯರಡ್ಡಿ, ಶಾಸಕ, ಯಲಬುರ್ಗಾ

    ಯಲಬುರ್ಗಾ ತಾಲೂಕಿನ ರೈತರು ಬೆಳೆಯುವ ಬೆಳೆಗಳ ಮಾರಾಟಕ್ಕಾಗಿ ಪಕ್ಕದ ತಾಲೂಕು ಕೇಂದ್ರಗಳ ಮಾರುಕಟ್ಟೆಗಳನ್ನು ಅವಲಂಬಿಸಿದ್ದಾರೆ. ಯಲಬುರ್ಗಾದಲ್ಲಿ ಎಪಿಎಂಸಿ ಸ್ಥಾಪನೆಗೆ ಒತ್ತಾಯಿಸಿ ಈ ಹಿಂದೆ ಸಂಬಂಧಿಸಿದ ಅಧಿಕಾರಿಗಳಿಗೆ ನಮ್ಮ ಸಂಘದಿಂದ ಒತ್ತಾಯಿಸಲಾಗಿತ್ತು. ಈಗ ಶಾಸಕ ಬಸವರಾಜ ರಾಯರಡ್ಡಿ ಅವರು ತಾಲೂಕಿನಲ್ಲಿ ಉಪಮಾರುಕಟ್ಟೆ ಸ್ಥಾಪನೆಗೆ ಮುತುವರ್ಜಿ ವಹಿಸಿರುವುದು ಉತ್ತಮ ಬೆಳವಣಿಗೆ. ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ.
    ಶರಣಯ್ಯ ಮುಳ್ಳೂರಮಠ, ರೈತ ಸಂಘ ಹಾಗೂ ಹಸಿರು ಸೇನೆ, ತಾಲೂಕು ಅಧ್ಯಕ್ಷ, ಯಲಬುರ್ಗಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts