More

    ಶಿವಮೊಗ್ಗ ಮಾರಿಜಾತ್ರೆ ಮುಂದೂಡಿಕೆ?

    ಶಿವಮೊಗ್ಗ: ಫೆಬ್ರವರಿ ಕೊನೆ ವಾರದಲ್ಲಿ ನಿಗದಿಯಾಗಿರುವ ಶಿವಮೊಗ್ಗ ಮಾರಿಕಾಂಬಾ ಜಾತ್ರೆಗೆ ಕರೊನಾ ಹಿನ್ನೆಲೆಯಲ್ಲಿ ಅನಿಶ್ಚಿತತೆ ಎದುರಾಗಿದೆ. ಹಾಗಾಗಿ ಕರೊನಾ ಸೋಂಕಿನ ತೀವ್ರತೆ ಮತ್ತು ಸರ್ಕಾರದ ಮಾರ್ಗಸೂಚಿಗಳನ್ನು ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳಲು ಕೋಟೆ ಮಾರಿಕಾಂಬಾ ಸಮಿತಿ ನಿರ್ಧರಿಸಿತು.
    ಸಚಿವ ಕೆ.ಎಸ್.ಈಶ್ವರಪ್ಪ ಅವರ ಮಲ್ಲೇಶ್ವರದ ನಿವಾಸದಲ್ಲಿ ಭಾನುವಾರ ಸಭೆ ಸೇರಿದ ಸಮಿತಿ ಪ್ರಮುಖರು, ಫೆ.22ರಿಂದ 26ರವರೆಗೆ ಜಾತ್ರೆ ನಡೆಸುವ ಬಗ್ಗೆ ಈಶ್ವರಪ್ಪ ಅವರೊಂದಿಗೆ ಸಮಾಲೋಚನೆ ನಡೆಸಿದರು.
    ಪ್ರಸ್ತುತ ಕರೊನಾ ಮಾರ್ಗಸೂಚಿ ಜಿಲ್ಲೆಯಲ್ಲೂ ಜಾರಿಯಲ್ಲಿದೆ. ಅಲ್ಲದೆ ಕರೊನಾ ಹೆಚ್ಚಾಗುವ ಬಗ್ಗೆ ತಜ್ಞರು ವರದಿ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಜಾತ್ರೆ ನಡೆಸುವುದು ಸಮಯೋಚಿತವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಮುಂದಿನ ದಿನಗಳಲ್ಲಿ ಸೋಂಕು ಕಡಿಮೆ ಆಗದಿದ್ದರೆ ಸರ್ಕಾರ ಮತ್ತಷ್ಟು ಕಠಿಣ ಮಾರ್ಗಸೂಚಿ ಜಾರಿಗೊಳಿಸುವ ಸಾಧ್ಯತೆಯೂ ಇದೆ. ಹಾಗಾಗಿ ಸರ್ಕಾರದ ಮುಂದಿನ ನಡೆ ನೋಡಿಕೊಂಡು ಜಾತ್ರೆ ನಡೆಸಲು ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಯಿತು.
    ಇತ್ತೀಚೆಗೆ ಕೋಟೆ ಮಾರಿಕಾಂಬಾ ಸೇವಾ ಸಮಿತಿ ಸಭೆಯಲ್ಲಿ ಜಾತ್ರೆ ರದ್ದುಪಡಿಸಲು ಹಲವು ಸದಸ್ಯರು ಒತ್ತಾಯಿಸಿದ್ದರು. ಆದರೆ ಕೆಲವರು ಮಾತ್ರ ಜಾತ್ರೆ ನಡೆಸುವ ಇಂಗಿತ ವ್ಯಕ್ತಪಡಿಸಿದ್ದರು. ಅದರ ನಡುವೆ ಎಂದಿನಂತೆ ೆ.22ರಿಂದ 26ರವರೆಗೆ ಜಾತ್ರೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಈ ಅವಧಿಯಲ್ಲಿ ಸೋಂಕು ಹೆಚ್ಚಾಗಲಿದೆ ಎಂದು ತಜ್ಞರು ನೀಡಿದ ವರದಿಯ ಹಿನ್ನೆಲೆಯಲ್ಲಿ ಮಾರ್ಚ್ 3ನೇ ವಾರದಲ್ಲಿ ಜಾತ್ರೆ ನಡೆಸಬಹುದೆಂಬ ಸಲಹೆ ನೀಡಿದ್ದರು. ಹಾಗಾಗಿ ಭಾನುವಾರ ಸಚಿವ ಈಶ್ವರಪ್ಪ ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಲುವಾಗಿ ಸಮಾಲೋಚನೆ ನಡೆಸಲಾಯಿತು.
    ಈಗಾಗಲೇ ಸೋಂಕು ಹೆಚ್ಚುತ್ತಿರುವುದರಿಂದ ಶಿಕಾರಿಪುರ ಸೇರಿ ಹಲವು ಕಡೆಗಳಲ್ಲಿ ಜಾತ್ರೆಗಳನ್ನು ರದ್ದುಪಡಿಸಲಾಗಿದೆ. ಜಿಲ್ಲಾಡಳಿತ ಕೂಡ ಕರೊನಾ ನಿಯಮ ಅನುಸರಿಸಿ ಜಾತ್ರೆ ನಡೆಸಲು ಅನುಮತಿ ನೀಡುವುದು ಅನುಮಾನವಾಗಿದೆ.
    ಮುಖಂಡರಾದ ಎಸ್.ಕೆ.ಮರಿಯಪ್ಪ, ಎನ್.ಮಂಜುನಾಥ, ಕೆ.ಎನ್.ಶ್ರೀನಿವಾಸ್, ಎನ್.ಉಮಾಪತಿ, ಎಚ್.ವಿ.ತಿಮ್ಮಪ್ಪ, ಎಸ್.ಹನುಮಂತಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts