More

    ರಂಗಭೂಮಿಗೆ ಹೆಚ್ಚೆಚ್ಚು ಕಲಾವಿದರು ಬರಲಿ

    ಮರಿಯಮ್ಮನಹಳ್ಳಿ: ರಂಗಭೂಮಿ ಉಳಿವಿಗೆ ಹೆಚ್ಚೆಚ್ಚು ಕಲಾತಂಡಗಳು ಹುಟ್ಟಿಕೊಳ್ಳಬೇಕು ಎಂದು ಹಿರಿಯ ರಂಗ ಕಲಾವಿದೆ ಡಿ.ಹನುಮಕ್ಕ ಹೇಳಿದರು.

    ಪಟ್ಟಣದ ದುರ್ಗಾದಾಸ ಕಲಾ ಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಂಗಬಿಂಬ ಕಲಾ ಸಂಸ್ಥೆಯ ಮೊದಲ ವಾರ್ಷಿಕೋತ್ಸವ ಹಾಗೂ ಶರೀಫ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಕಾಲ ಬದಲಾದಂತೆಲ್ಲಾ ಜನರ ಜೀವನ ಶೈಲಿಯೂ ಬದಲಾಗುತ್ತಿದೆ. ರಂಗಭೂಮಿಯಿಂದ ಶುರುವಾಗಿದ್ದ ಕಲೆ, ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ವಾಸ್ತವ ಜಗತ್ತಿನಲ್ಲಿ ನಾವು ಬದುಕಬೇಕಿದೆ. ನೈಜತೆ ಕಂಡುಕೊಳ್ಳಲು ರಂಗಭೂಮಿಗೆ ಹೆಚ್ಚೆಚ್ಚು ಕಲಾವಿದರು ಬರಬೇಕು. ಶರೀಫ ನಾಟಕ ಅದ್ಭುತವಾಗಿದ್ದು, ಇದರಿಂದ ಯುವಕರು ಪ್ರೇರಣೆಗೊಂಡು ಜೀವನ ಕಟ್ಟಿಕೊಳ್ಳಬೇಕು ಎಂದರು.

    ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಕಾರ್ಯಕ್ರಮ ಉದ್ಘಾಟಿಸಿದರು. ರಂಗಬಿಂಬ ಸಂಸ್ಥೆಯ ಅಧ್ಯಕ್ಷೆ ಎಂ.ಗಾಯತ್ರಿದೇವಿ ಅಧ್ಯಕ್ಷತೆ ವಹಿಸಿದ್ದರು. ಕಾ.ನಿ.ಪ. ವಿಜಯನಗರ ಜಿಲ್ಲಾಧ್ಯಕ್ಷ ಪಿ.ಸತ್ಯನಾರಾಯಣ, ಪಿ.ವೆಂಕೋಬ ನಾಯಕ, ಲಲಿತ ಕಲಾರಂಗದ ಅಧ್ಯಕ್ಷ ಹುರುಕೊಳ್ಳಿ ಮಂಜುನಾಥ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಂಗಸಂಘಟಕ ವಡಿಗೇರಿ ವಿರೂಪಾಕ್ಷಪ್ಪ, ರಂಗಕರ್ಮಿ ಎಂ.ಜಿ. ಶಿವನಾಗಪ್ಪ ಅವರನ್ನು ಸನ್ಮಾನಿಸಲಾಯಿತು. ಕಲಾವಿದರಾದ ಹನುಮಯ್ಯ, ಮಹಾಂತೇಶ ನೆಲ್ಲುಕುದುರೆ, ಚಂದ್ರು, ಮೌನೇಶ ತಂಡದಿಂದ ಗಾಯನ ನಡೆಯಿತು. ಸಂಸ್ಥೆಯ ಕಾರ್ಯದರ್ಶಿ ಸಿ.ಕೆ.ನಾಗರಾಜ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೆ.ನಾಗರಾಜ ಸ್ವಾಗತಿಸಿದರು. ಕಿಚಿಡಿ ಕೊಟ್ರೇಶ ವಂದಿಸಿದರು. ರಾಮಚಂದ್ರ ಪೂಜಾರ ಕಾರ್ಯಕ್ರಮ ನಿರ್ವಹಿಸಿದರು. ನಂತರ ರಂಗಬಿಂಬ ಕಲಾವಿದರಿಂದ ಮಂಜುನಾಥ ಬೆಳಕೆರಿ ರಚನೆಯ, ಸಿ.ಕೆ.ನಾಗರಾಜ ನಿರ್ದೇಶನದ ಶರೀಫ ನಾಟಕ ಪ್ರದರ್ಶನ ಗೊಂಡಿತು. ಕಲಾವಿದರು ಮನೋಜ್ಞವಾಗಿ ಅಭಿನಯಿಸಿ ಜನರನ್ನು ರಂಜಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts