More

    ರಂಗಭೂಮಿಗೆ ಚಿಂದೋಡಿ ಲೀಲಾ ಕೊಡುಗೆ ಅಪಾರ


     
     

    ದಾವಣಗೆರೆ : ರಂಗಭೂಮಿಗೆ ಅಪ್ರತಿಮ ಕೊಡುಗೆ ನೀಡಿದ ಚಿಂದೋಡಿ ಲೀಲಾ ಅವರು ರಾಜ್ಯ ಕಂಡ ಮೇರು ಕಲಾವಿದರಲ್ಲಿ ಒಬ್ಬರು ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಸ್ಮರಿಸಿದರು.
     ಪದ್ಮಶ್ರೀ ಚಿಂದೋಡಿ ಲೀಲಾ ಟ್ರಸ್ಟ್‌ನಿಂದ ನಗರದ ಚಿಂದೋಡಿ ಲೀಲಾ ಕಲಾ ಕ್ಷೇತ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 14ನೇ ವರ್ಷದ ರಂಗಸ್ಮರಣೆ, ರಂಗಭೂಮಿ ಕಲಾವಿದರ ಸಮ್ಮಿಲನ ಮತ್ತು ಕಲಾಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
     ರಂಗವೇದಿಕೆ ಎಂಬುದು ಕಲಾವಿದರಿಗೆ ಅಗ್ನಿಪರೀಕ್ಷೆ ಇದ್ದಂತೆ. ಸತತ ತಾಲೀಮು ಮಾಡಿ ಮುನ್ನೆಲೆಗೆ ಬರಲು ಗಂಡೆದೆ ಬೇಕು. ಚಿಂದೋಡಿ ಲೀಲಾ ಅವರು ಶೂನ್ಯದಿಂದ ಸಾಧನೆ ಕೈಗೊಂಡು ರಂಗಭೂಮಿ ಜತೆಗೆ ಸಮಾಜದಲ್ಲೂ ಉತ್ತಮ ಕೆಲಸ ನಿರ್ವಹಿಸಿದ್ದಾರೆ ಎಂದು ಹೇಳಿದರು.
     ಇತ್ತೀಚಿನ ದಿನಗಳಲ್ಲಿ ಚಲನಚಿತ್ರಗಳ ಹಾವಳಿ ನಡುವೆ ಜನರು ನಾಟಕಗಳನ್ನು ಮರೆಯುತ್ತಿದ್ದಾರೆ. ಇದರಿಂದ ಕಲಾವಿದರ ಬದುಕು ಬಹಳ ಸಂಕಷ್ಟದಲ್ಲಿದೆ. ಸರ್ಕಾರ ಕಲಾವಿದರಿಗೆ ವಿಶೇಷ  ಸವಲತ್ತು ನೀಡಿ ಪ್ರೋತ್ಸಾಹಿಸಬೇಕು. ಚಿಂದೋಡಿ ಕುಟುಂಬ ಕೆಬಿಆರ್ ಡ್ರಾಮಾ ಕಂಪನಿಯನ್ನು ಕೊನೆಯವರೆಗೂ ಉಳಿಸಿಕೊಂಡು ಹೋಗಬೇಕು ಎಂದು ತಿಳಿಸಿದರು.
     ಬನಹಟ್ಟಿಯ ಶ್ರೀ ಮಹಾಂತ ದೇವರು ಮಾತನಾಡಿ, ರಂಗಭೂಮಿಗೆ ಅದ್ಭುತ ಕೊಡುಗೆ ನೀಡಿದ ಚಿಂದೋಡಿ ಲೀಲಾ ಅವರ ಹೆಸರನ್ನು ನಗರದ ವೃತ್ತವೊಂದಕ್ಕೆ ನಾಮಕರಣ ಮಾಡಬೇಕು ಹಾಗೂ ಪುತ್ಥಳಿ ಸ್ಥಾಪಿಸುವ ಮೂಲಕ ಅವರ ಹೆಸರನ್ನು ಅಜರಾಮರಗೊಳಿಸಬೇಕು ಎಂದು ಹೇಳಿದರು.
     ಪಾಲಿಕೆ ಮಾಜಿ ಮೇಯರ್ ಬಿ.ಜೆ. ಅಜಯ್‌ಕುಮಾರ್ ಮಾತನಾಡಿ, ದಾವಣಗೆರೆ ಜವಳಿ ಹಾಗೂ ವಿದ್ಯಾಕೇಂದ್ರದಂತೆ ಕಲಾವಿದರ ನಗರವೂ ಆಗಿದೆ. ಚಿಂದೋಡಿ ಲೀಲಾ ಅವರು ರಂಗಭೂಮಿ ಮೂಲಕ ನಗರಕ್ಕೆ ಕೀರ್ತಿ ತಂದಿದ್ದು,  ಚಿಂದೋಡಿ ಕುಟುಂಬ ಅವರ ಕಲಾಸೇವೆ ಮುಂದುವರಿಸುತ್ತಿರುವುದನ್ನು ಶ್ಲಾಘಿಸಿದರು.
     ಹಾಸ್ಯನಟ ಡಿಂಗ್ರಿ ನಾಗರಾಜ್ ಮಾತನಾಡಿ, ರಾಜ್ಯದ ಎಲ್ಲ ವೃತ್ತಿ ರಂಗಭೂಮಿ ನಾಟಕ ಕಂಪನಿಗಳಲ್ಲಿ ನಾನು ನಟಿಸಿದ್ದೇನೆ. ಬಹುತೇಕ ನಾಟಕ ಕಂಪನಿಗಳು ಮುಚ್ಚಿಹೋಗಿವೆ. ಆದರೆ, ಕೆಬಿಆರ್ ಡ್ರಾಮಾ ಕಂಪನಿ ಇಂದಿಗೂ ಉಳಿದಿದ್ದು, ಕಲಾವಿದರಿಗೆ ಪ್ರೋತ್ಸಾಹ ನೀಡುತ್ತ ಬಂದಿದೆ ಎಂದು ತಿಳಿಸಿದರು.
     ಚಿಂದೋಡಿ ಲೀಲಾ ಟ್ರಸ್ಟ್ ಮುಖ್ಯ ಟ್ರಸ್ಟಿ ಚಿಂದೋಡಿ ಎಲ್. ಚಂದ್ರಧರ ಮಾತನಾಡಿ, ಟ್ರಸ್ಟ್‌ನಿಂದ ಹಲವು ಸಮಾಜಮುಖಿ ಕೆಲಸ ನಿರ್ವಹಿಸುತ್ತಿದ್ದು, ಬರುವ ದಿನಗಳಲ್ಲಿ ಕಲಾವಿದರು ತಂಗಲು ಆತಿಥ್ಯ ನಿಲಯ ಸ್ಥಾಪನೆ ಮಾಡಲಾಗುವುದು ಎಂದರು.
     ಸಮಾಜದ ಮುಖಂಡ ಜಗದೀಶ್ ಬಾವಿಕಟ್ಟೆ ಇದ್ದರು. ಇದೇ ಸಂದರ್ಭದಲ್ಲಿ ರಂಗ ಕಲಾವಿದರಾದ ಪರಿಮಳ ಪ್ರಕಾಶ್, ಹನುಮಕ್ಕ ಮಹಾದೇವಪ್ಪ ಹಿರೇಮನಿ, ಮಹಾಂತೇಶ್ ಮಾಂಟೂರು, ಪ್ರೇಮಾ ರಾಜು ತಾಳೀಕೋಟೆ, ನೀಲಗುಂದ ಬಸವನಗೌಡ್ರು, ಕಾಶೀಬಾಯಿ ಚಂದ್ರಶೇಖರ್, ರತ್ನಶ್ರೀ, ಪದ್ಮಾವತಿ ಬಿ. ಪ್ರಚಂಡೆ, ರುಕ್ಮಿಣಿ ಹೆಗ್ಡೆ, ರಾಮಾಚಾರಿ, ಉಮಾರಾಣಿ ಇತರರನ್ನು ಗೌರವಿಸಲಾಯಿತು.
     ಚಿಂದೋಡಿ ಸಿ. ವೀರಶಂಕರ್ ಸ್ವಾಗತಿಸಿದರು, ಜ್ಞಾನೇಶ್ವರ ಜವಳಿ ನಿರೂಪಿಸಿದರು. ನಂತರ ‘ಯಾರ ಹೂವು ಯಾರ ಮುಡಿಗೋ’ ನಾಟಕ ಪ್ರದರ್ಶನಗೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts