More

    ಕಪ್ಪು ಲದ್ದಿ ನೊಣದಿಂದ ಹಸಿ ಕಸವೂ ಗೊಬ್ಬರ

    ಕಡೂರು: ಪುರಸಭೆ ಕಪ್ಪು ಲದ್ದಿ ನೊಣದ ಲಾರ್ವಾ ಬಳಸಿಕೊಂಡು ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸಿಕೊಳ್ಳುವ ವಿನೂತನ ಪ್ರಯತ್ನದಲ್ಲಿದ್ದು, ಗೊಬ್ಬರ ತಯಾರಿಕೆ ಹೆಚ್ಚಳಕ್ಕೆ ಲಾರ್ವಾಗಳನ್ನೂ ಬೆಳೆಸಲಾಗುತ್ತಿದೆ.

    ಕಪ್ಪು ಲದ್ದಿ ನೊಣದ ಲಾರ್ವಾಗಳಿಗೆ ಯೂರೋಪ್, ಇಂಡೋನೇಷಿಯಾ ಇತರೆ ದೇಶಗಳ ಸಂಶೋಧಕರು ಹಸಿ ಕಸ ನೀಡಿ ಗೊಬ್ಬರ ಉತ್ಪಾದಿಸುವ ಸಂಶೋಧನೆ ಈಗಲೂ ನಡೆಸುತ್ತಿವೆ. ಆದರೆ ಪಟ್ಟಣದಲ್ಲಿನ 23 ವಾರ್ಡ್​ಗಳಲ್ಲಿ ಪ್ರತಿನಿತ್ಯ ಸಂಗ್ರಹವಾಗುವ ಘನ ತಾಜ್ಯದಲ್ಲಿ ಹಸಿ ಕಸ ಪ್ರತ್ಯೇಕವಾಗಿ ಸಂಗ್ರಹಿಸಿ ಅದನ್ನು ದಿನವೂ ಕಪ್ಪು ಲದ್ದಿ ನೊಣದ ಲಾರ್ವಾಗಳಿಗೆ ಆಹಾರವಾಗಿ ನೀಡಲಾಗುತ್ತಿದೆ. ಹೀಗೆ ನೀಡಿದ ಆಹಾರವನ್ನು ಒಂದೇ ದಿನದಲ್ಲೇ ಜೀರ್ಣಿಸಿಕೊಂಡು ಇದರ ತ್ಯಾಜ್ಯವೇ ಗೊಬ್ಬರವಾಗಲಿದೆ. ಇದನ್ನು ಕೃಷಿ ಜಮೀನುಗಳ ಗಿಡ, ಮತ್ತಿತರ ಬೆಳೆಗಳಿಗೆ ಬಳಕೆ ಮಾಡಿಕೊಳ್ಳಲು ಸಹಕಾರಿಯಾಗಲಿದೆ.

    ಪಟ್ಟಣದಲ್ಲಿ 2018ರ ಪ್ರಾರಂಭಿಕ ಹಂತದಲ್ಲಿ ಲಾರ್ವಾ ಬಳಸಿ ನಾಲ್ಕೈದು ಕೆಜಿಯಷ್ಟು ಗೊಬ್ಬರ ಉತ್ಪಾದನೆ ಮಾಡಲಾಯಿತು. ಸದ್ಯ 500 ಕೆಜಿ ಹಸಿ ಕಸದಿಂದ ಗೊಬ್ಬರ ತಯಾರಿಸಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

    ಭದ್ರಾವತಿಯ ಆರ್ಟ್ ಆಫ್ ವೇಸ್ಟ್ ಮ್ಯಾನೇಜ್​ವೆುಂಟ್​ನ ಎನ್​ಜಿಒ ಮುಖ್ಯಸ್ಥ ಶ್ರೀಕಾಂತ್ ಎಂಬುವವರ ಸಹಭಾಗಿತ್ವದೊಂದಿಗೆ ಅವರು ನೀಡುವ ಕಪ್ಪು ಲದ್ದಿ ನೊಣದ ಲಾರ್ವಾ ಬಳಸಿಕೊಂಡು ಪಟ್ಟಣದ ಎನ್.ಎಚ್.ರಸ್ತೆಯಲ್ಲಿನ ವೇದಾ ಪಂಪ್​ಹೌಸ್ ಬಳಿ ಇರುವ ಘಟಕದಲ್ಲಿ ಒಟ್ಟು 240 ಬಾಕ್ಸ್​ಗಳಲ್ಲಿ ಹಸಿ ತ್ಯಾಜ್ಯ ನೀಡಿ ಗೊಬ್ಬರ ತಯಾರಿಸಲಾಗುತ್ತಿದೆ. 1 ಟನ್ ಹಸಿ ಕಸ ಸಂಗ್ರಹಿಸಿ ಸಂಸ್ಕರಿಸಿ ಕಪ್ಪು ಲದ್ದಿ ನೊಣದ ಲಾರ್ವಾಗಳಿಗೆ ನೀಡಿದರೆ 8ರಿಂದ 10 ಕೆಜಿ ಗೊಬ್ಬರ ತಯಾರು ಮಾಡಬಹುದು.

    ಪ್ರತಿನಿತ್ಯ ಪಟ್ಟಣದಲ್ಲಿ ಹಸಿ ಕಸ ಹೆಚ್ಚಾದಂತೆ ಲಾರ್ವಾಗಳಿಗೆ ಆಹಾರ ನೀಡಲು ಸಹಕಾರಿಯಾಗಲಿದೆ. ಸದ್ಯ 150 ರಿಂದ 200 ಕೆಜಿ ಪ್ರಮಾಣದಲ್ಲಿ ಹಸಿ ಕಸ ಸಂಗ್ರಹವಾಗುತ್ತಿದೆ. ಪಟ್ಟಣದಲ್ಲಿ ಮದುವೆ ಮತ್ತಿತರರ ಸಮಾರಂಭಗಳು ನಡೆದಾಗ ಸಂಗ್ರಹವಾಗುವ ಹಸಿಕಸ ಹೆಚ್ಚಾಗುತ್ತದೆ. ಆದರೆ ಪ್ರತಿನಿತ್ಯ ಘಟಕದಲ್ಲಿ ಪುರಸಭಾ ಸಿಬ್ಬಂದಿ ಮುತುವರ್ಜಿವಹಿಸಿ ಹಸಿ ಕಸದಲ್ಲಿನ ನೀರಿನ ಅಂಶ ಬೇರ್ಪಡಿಸಿ ಲಾರ್ವಾಗಳಿಗೆ ಆಹಾರವಾಗಿ ಪೂರೈಕೆ ಮಾಡುತ್ತಾರೆ. ಲಾರ್ವಾದ ಜೀವಿತಾವಧಿ 45 ದಿನಗಳು ಮಾತ್ರ. ಆಹಾರವನ್ನು ಜೀರ್ಣಿಸಿಕೊಂಡು ಹೊರ ಬರುವ ಕಪ್ಪು ಸೈನಿಕ ನೊಣಗಳನ್ನು ಎನ್​ಜಿಒನವರು ತೆಗೆದುಕೊಂಡು ಹೋಗುತ್ತಾರೆ. ಪುನಃ ಅದರ ಲಾರ್ವಾಗಳನ್ನು ನೀಡಿ ಗೊಬ್ಬರ, ಕಪ್ಪು ಸೈನಿಕ ನೊಣಗಳ ಉತ್ಪಾದನೆ ಗಣನೀಯ ಹೆಚ್ಚಿಸಲಾಗುತ್ತಿದೆ.

    ಪಟ್ಟಣದಲ್ಲಿ ಘನತಾಜ್ಯ ಸಂಸ್ಕೃರಣೆಯಲ್ಲಿ ಉತ್ತಮ ಪದ್ಧತಿ ಅಳವಡಿಸಿಕೊಂಡಿರುವ ಫಲವಾಗಿ ಕೇಂದ್ರ ಸರ್ಕಾರದ ಸ್ವಚ್ಛ ಸರ್ವೆಕ್ಷಣೆ 2020 ಪ್ರಶಸ್ತಿ ಪಡೆದುಕೊಂಡಿದೆ. ಇದರಿಂದ ಕೆ.ಆರ್.ನಗರ, ಹುಣಸೂರು, ತರೀಕೆರೆ ಸೇರಿದಂತೆ ಇತರೆ ತಾಲೂಕುಗಳ ಪುರಸಭೆ ಅಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ಘಟಕಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

    ಗೊಬ್ಬರಕ್ಕೆ ಬೇಡಿಕೆ ಸಾಧ್ಯತೆ: ಪರಿಸರ ಸ್ನೇಹಿಯಾದ ಕಪ್ಪು ಲದ್ದಿ ನೊಣ ಇತರೆ ಹುಳುಗಳಂತೆ ಕಚ್ಚುವುದಿಲ್ಲ. ಲಾರ್ವಾಗಳಾಗಿದ್ದ ಸಂದರ್ಭದಲ್ಲಿ ಹಸಿ ಕಸ ಮಾತ್ರ ಸೇವಿಸುತ್ತದೆ. ನಂತರ ದಿನಗಳಲ್ಲಿ ಸಂತಾನೋತ್ಪತ್ತಿ ಹೆಚ್ಚಿಸಲಾಗುತ್ತದೆ. ಇದೀಗ 50 ಕೆಜಿ ಗೊಬ್ಬರ ತಯಾರು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗೊಬ್ಬರ ಹೆಚ್ಚಾದಂತೆ ಆಸಕ್ತರು ಖರೀದಿಸಿದರೆ ಪುರಸಭೆ ಆದಾಯ ಗಳಿಕೆಗೆ ಹೊಸ ದಾರಿಯಾಗಲಿದೆ ಎಂದು ಪುರಸಭೆ ಪರಿಸರ ಅಭಿಯಂತರ ಸಿ.ಕೆ.ಶ್ರೇಯಸ್​ಕುಮಾರ್ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts