More

    ಮಳೆಗೆ ಮುಳುಗೋದೇಕೆ ಬೆಂಗಳೂರು? ಬಿಬಿಎಂಪಿಯಲ್ಲ, ಜ್ಯೋತಿಷಿಗಳೇ ನೀಡಬೇಕೇನೋ ಪರಿಹಾರ

    ಬೆಂಗಳೂರು: ಮಂಗಳವಾರ ರಾತ್ರಿಯಿಂದ ಸುರಿದ ಧಾರಾಕಾರ ಮಳೆಗೆ ಬೆಂಗಳೂರು ನಗರ ಅಕ್ಷರಶಃ ತತ್ತರಿಸಿದೆ. ಒಂದು ವೇಳೆ ರಾಜಧಾನಿಯಲ್ಲಿ ಜನಜೀವನ ಎಂದಿನಂತಿದ್ದರೆ, ಭಾರಿ ಪ್ರಮಾಣದಲ್ಲಿ ಅಸ್ತವ್ಯಸ್ತವಾಗುತ್ತಿತ್ತು.

    ಕೋರಮಂಗಲದಲ್ಲಿ ಕಾರು, ಬೈಕ್​ಗಳು ಮುಳುಗುವ ಮಟ್ಟಿಗೆ ರಸ್ತೆಯಲ್ಲಿ ನೀರು ನಿಂತಿದೆ. ಜನರು ರಸ್ತೆ ವಿಭಜಕಗಳ ಮೇಲೆ ಜೀವ ಕೈಯಲ್ಲಿಡಿದು ಸಾಗದೇ ಬೇರೆ ದಾರಿ ಇರಲಿಲ್ಲ. ಅಂಡರ್​ಪಾಸ್​ಗಳಲ್ಲಿ ವಾಹನ ಸಂಚಾರ ಸಾಧ್ಯವಿಲ್ಲದ ಪರಿಸ್ಥಿತಿ.

    ಎಲ್ಲಕ್ಕಿಂತ ಕರುಣಾಜನಕ ಸ್ಥಿತಿ ಎಂದರೆ ಹೊಂಗಸಂದ್ರದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಆದರೆ, ಕರೊನಾ ವ್ಯಾಪಿಸಿದ ಕಾರಣಕ್ಕೆ ಇಲ್ಲಿನ ನೂರಾರು ಮನೆಗಳನ್ನು ಖಾಲಿ ಮಾಡಿಕೊಂಡು ಜನರು ಬೇರೆಡೆ ಹೋಗಿದ್ದಾರೆ. ಏನಾಗಿದೆ ಎಂದು ನೋಡಲು ಕೂಡ ಮನೆಗೆ ಬರಲಿಕ್ಕಾಗದು. ಇದಷ್ಟೇ ಅಲ್ಲ, ರಾಜಕಾಲುವೆ ಅಕ್ಕಪಕ್ಕದ ಪ್ರದೇಶಗಳಲ್ಲಿ ನೀರು ತುಂಬಿಕೊಂಡು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.

    ಕರೊನಾದಿಂದಾಗಿ ಕೆಂಪುವಲಯದಲ್ಲಿ ಗುರುತಿಸಲ್ಪಟ್ಟಿರುವ ಬೆಂಗಳೂರಿನಲ್ಲಿ ಸದ್ಯ ಜನ ಹಾಗೂ ವಾಹನಗಳ ಸಂಚಾರ ವಿರಳವಾಗಿದೆ. ಒಂದು ವೇಳೆ ಜನ ಎಂದಿನಂತೆ ವಾಹನಗಳು ರಸ್ತೆಗಿಳಿದಿದ್ದರೆ, ಆಗುವ ಅಪಾಯವನ್ನು ಊಹಿಸಲು ಸಾಧ್ಯವಾಗದು.

    ಮುಂಗಾರಿನ ಸಿದ್ಧತೆಯನ್ನೇ ಮರೆಯಿತಾ ಪಾಲಿಕೆ: ರಾಜಧಾನಿಯಲ್ಲಿ ಭಾರಿ ಮಳೆ ಸುರಿದಾಗಲೆಲ್ಲ ಉಂಟಾಗುವ ಅವಾಂತರವಿದು. ಅದರಲ್ಲೂ ದಾಖಲೆಯ ಮಳೆ ಎಂದು ಬಿಂಬಿಸಿದಾಗಲೆಲ್ಲ ಇನ್ನಷ್ಟು ಮುಳುಗಿರುತ್ತದೆ. ಮುಂಗಾರು ಆರಂಭಕ್ಕೂ ಮೂರು ತಿಂಗಳು ಮುನ್ನವೇ ಅದಕ್ಕಾಗಿ ಸಿದ್ಧತೆಯನ್ನು ಆರಂಭಿಸಬೇಕಿದ್ದ ಪಾಲಿಕೆ ಈ ಬಾರಿ ಅಂಥ ಯೋಚನೆಯನ್ನು ಮಾಡಿಲ್ಲವೇನೋ? ಈ ಬಾರಿ ಲಾಕ್​ಡೌನ್​ ಅಸ್ತ್ರವೂ ಪಾಲಿಕೆ ಬಳಿಯಿದೆ.

    160ಕ್ಕೂ ಅಧಿಕ ಪ್ರವಾಹಪೀಡಿತ ಪ್ರದೇಶಗಳು: ಬೆಂಗಳೂರಿನಲ್ಲಿ ಮಳೆ ಬಂದಾಗಲೆಲ್ಲ ಪ್ರವಾಹಕ್ಕೆ ಉಂಟಾಗುವ 160ಕ್ಕೂ ಅಧಿಕ ಸ್ಥಳಗಳನ್ನು ಪಾಲಿಕೆ ಗುರುತಿಸಿದೆ. ಇಲ್ಲಿ ತಪ್ಪದೇ ಪ್ರವಾಹ ಸಂಕಷ್ಟ ಉಂಟಾಗುತ್ತದೆ ಕೂಡ. ಆದರೆ, ಪರಿಹಾರವೇ ಇಲ್ಲ ಎನ್ನುವುದು ನಿಜ.
    ರಾಜಕಾಲುವೆಗಳ ದುರಸ್ತಿ: ಬಿಬಿಎಂಪಿ ವ್ಯಾಪ್ತಿಯ ರಾಜಕಾಲುವೆಗಳ ದುರಸ್ತಿ ಕಾರ್ಯ ಪ್ರತಿವರ್ಷವೂ ಕೋಟ್ಯಂತರ ರೂ. ವೆಚ್ಚದ ‘ಉತ್ಸವ’ವೆಂಬಂತೆ ಚಾಲನೆ ಪಡೆಯುತ್ತೆ. ಟೆಂಡರ್​ ಕರೆಯಲಾಗುತ್ತೆ, ಗುತ್ತಿಗೆ, ಉಪಗುತ್ತಿಗೆ, ಪ್ಯಾಕೇಜ್​ ಮೊದಲಾದವುಗಳ ಬಗ್ಗೆ ಪಾಲಿಕೆ ಅಧಿಕಾರಿಗಳು ಅತ್ಯಂತ ನಿಷ್ಠೆಯಿಂದಲೇ ಕಾರ್ಯ ನಿರ್ವಹಿಸುತ್ತಾರೆ. ಆದರೆ, ಹೂಳು ಮಾತ್ರ ಕದಲಲ್ಲ ಎನ್ನುವುದು ಪ್ರತಿ ನಾಗರಿಕರ ಆರೋಪ ಹಾಗೂ ಅದರಿಂದ ಸಂಕಷ್ಟಕ್ಕೀಡಾದವರ ಶಾಪವೂ ಆಗಿದೆ.

    ಮಳೆಗೆ ಬೆಂಗಳೂರು ಮುಳುಗೋದೇಕೆ ಎಂಬುದಕ್ಕೆ ಪಾಲಿಕೆ ಬಳಿ ಪರಿಹಾರ ಇದ್ದಂತಿಲ್ಲ. ಇದನ್ನು ಜ್ಯೋತಿಷಿಗಳ ಬಳಿಯೇ ಹುಡುಕಬೇಕು ಎನ್ನುವುದು, ತಮಾಷೆಯಲ್ಲ, ಹತಾಶೆಯಷ್ಟೇ ಎನ್ನುವುದು ನಾಗರಿಕರ ಅಭಿಪ್ರಾಯ.

    ಕೇರಳದಲ್ಲಿ ಅರಮನೆಯನ್ನೇ ಕಟ್ಟಿದ ಅನಿವಾಸಿ ಭಾರತೀಯ ತೈಲೋದ್ಯಮಿ ಮೃತದೇಹ ತರಲು ಕುಟುಂಬಕ್ಕೆ ಇದೆಂಥ ಸಂಕಷ್ಟ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts