More

    ಯೋಧರ ರೀತಿ ಪರೀಕ್ಷೆ ಎದುರಿಸಿ; ಮನ್ ಕೀ ಬಾತ್​ನಲ್ಲಿ ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು

    ಯುವ ಮಿತ್ರರು ವಾರ್ಷಿಕ ಪರೀಕ್ಷೆಗೆ ಸಜ್ಜಾಗುತ್ತಿದ್ದಾರೆ. ಪರೀಕ್ಷೆ ಬಗ್ಗೆ ಚಿಂತಿತರಾಗದೆ (ವರಿಯರ್), ಅದನ್ನು ಯೋಧರಂತೆ (ವಾರಿಯರ್) ಧೈರ್ಯದಿಂದ ಎದುರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ರೇಡಿಯೊ ಕಾರ್ಯಕ್ರಮ 74ನೇ ಮನ್ ಕೀ ಬಾತ್​ನಲ್ಲಿ ಮಾತನಾಡಿದ ಅವರು, ಪರೀಕ್ಷೆಗಳನ್ನು ಸಂತಸದಿಂದ ಎದುರಿಸಬೇಕು. ಪರೀಕ್ಷೆ ಬರೆಯುವಾಗ ವಿದ್ಯಾರ್ಥಿಗಳ ಮೊಗದಲ್ಲಿ ಚಿಂತೆ ಬದಲು ಮಂದಹಾಸವಿರಬೇಕು.

    ಪರೀಕ್ಷೆಯ ಭಯ ಬಿಟ್ಟು ಸಾಕಷ್ಟು ನಿದ್ರಿಸಿ. ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ. ಸಮಯ ನಿರ್ವಹಣೆಯ ಬಗ್ಗೆ ಎಚ್ಚರವಿರಲಿ. ಪರೀಕ್ಷಾ ಸಮಯವಾದ ಕಾರಣ ಆಟ ಕೆಲವು ಕಾಲ ನಿಲ್ಲಿಸಿ. ಪುನರ್ ಮನನಕ್ಕೆ ನವೀನ ವಿಧಾನಗಳನ್ನು ಬಳಸಿ. ಈ ಪರೀಕ್ಷೆಯನ್ನು ಅತ್ಯುತ್ತಮವಾಗಿ, ಆತ್ಮವಿಶ್ವಾಸದಿಂದ ಎದುರಿಸಿ ಎಂದು ಸಲಹೆ ನೀಡಿದರು. ಪ್ರತಿ ವರ್ಷದಂತೆ ಈ ವರ್ಷವೂ ‘ಪರೀಕ್ಷಾ ಪೆ ಚರ್ಚಾ’ ಸಂವಾದ ಕಾರ್ಯಕ್ರಮ ಮಾರ್ಚ್​ನಲ್ಲಿ ನಡೆಯಲಿದೆ. ವಿದ್ಯಾರ್ಥಿಗಳು, ಪಾಲಕರು ಮತ್ತು ಶಿಕ್ಷಕರು ಅನುಭವ ಹಂಚಿಕೊಳ್ಳಬಹುದು. ‘ಪರೀಕ್ಷಾ ಪೆ ಚರ್ಚಾ’ದಲ್ಲಿ ಹೇಗೆ ಭಾಗವಹಿಸಬಹುದು ಎಂಬ ಮಾಹಿತಿ MyGov.in ಡಿಜಿಟಲ್ ವೇದಿಕೆಯಲ್ಲಿ ದೊರೆಯಲಿದೆ. ಕ್ವಿಜ್​ನಲ್ಲಿ ಭಾಗಿಯಾಗಿ ಬಹುಮಾನ ಗೆಲ್ಲಬಹುದು. ಇದುವರೆಗೆ ಒಂದು ಲಕ್ಷ ವಿದ್ಯಾರ್ಥಿಗಳು, 40 ಸಾವಿರ ಪಾಲಕರು, 10 ಸಾವಿರ ಶಿಕ್ಷಕರು ಈ ವೇದಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಪ್ರಧಾನಿ ಹೇಳಿದರು.

    ಮಳೆ ನೀರು ಸಂಗ್ರಹ ಜನಾಂದೋಲನ: ಮಾರ್ಚ್ 22 ವಿಶ್ವ ಜಲ ಸಂರಕ್ಷಣಾ ದಿನದ ಹಿನ್ನಲೆಯಲ್ಲಿ ನೀರಿನ ಬಳಕೆ, ನಿರ್ವಹಣೆ ಕುರಿತಂತೆ ಮಾತನಾಡಿದ ಪ್ರಧಾನಿ ಮೋದಿ, ಇನ್ನೇನು ಬೇಸಿಗೆ ಆರಂಭವಾಗಲಿರುವ ಕಾರಣ ನೀರಿನ ಕೊರತೆ ಕಾಡಲಿದೆ. ಹೀಗಾಗಿ ಪ್ರತಿಯೊಬ್ಬರು ನೀರನ್ನು ಮಿತವಾಗಿ ಬಳಸಬೇಕು. ನೀರು ಪೋಲಾಗುವುದನ್ನು ತಡೆಯಬೇಕು. ಜಲ ಸಂರಕ್ಷಣೆ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಇದು ಎಲ್ಲರ ಹೊಣೆಗಾರಿಕೆ. ಈ ನಿಟ್ಟಿನಲ್ಲಿ ಜಲ ಸಂಗ್ರಹಾಗಾರಗಳನ್ನು (ಕೆರೆ-ಕಟ್ಟೆ, ಬಾವಿ, ಬ್ಯಾರೇಜ್) ಸ್ವಚ್ಛಗೊಳಿಸಿ ಮುಂದಿನ ಮಳೆಗಾಲದ ಹೊತ್ತಿಗೆ ಅವುಗಳನ್ನು ಮಳೆ ನೀರು ಸಂಗ್ರಹಕ್ಕೆ ಸಿದ್ಧಗೊಳಿಸುವ 100 ದಿನಗಳ ಜನಾಂದೋಲನ ನಡೆಯಬೇಕು ಎಂದು ಕರೆ ನೀಡಿದರು.

    ತಮಿಳು ಕಲಿಯದ್ದಕ್ಕೆ ಬೇಸರ: ಜಗತ್ತಿನ ಪುರಾತನ ಭಾಷೆಗಳಲ್ಲಿ ಒಂದಾದ ತಮಿಳನ್ನು ಕಲಿಯದಿರುವುದಕ್ಕೆ ಬೇಸರವಿದೆ ಎಂದ ಪ್ರಧಾನಿ ಮೋದಿ, ತಮಿಳಿನಲ್ಲಿ ಉತ್ಕೃಷ್ಠ ಸಾಹಿತ್ಯ ಮತ್ತು ಕಾವ್ಯ ಪರಂಪರೆ ಇದೆ ಎಂದು ಶ್ಲಾಘಿಸಿದರು.

    ಪ್ರಧಾನಿ ಮೋದಿ ಭಾಷಣದ ಮುಖ್ಯಾಂಶ

    • ಕರೊನಾ ಬಗ್ಗೆ ಉದಾಸೀನ ಬೇಡ. ಕೋವಿಡ್ ನಿಯಮಗಳನ್ನು ಪಾಲನೆ ಮಾಡಿ
    • ಆತ್ಮನಿರ್ಭರ ಭಾರತದ ಅಭಿಯಾನ ಕೇವಲ ಸರ್ಕಾರದ ಪ್ರಯತ್ನವಾಗಿಲ್ಲ. ಇದು ರಾಷ್ಟ್ರೀಯ ಸ್ಪೂರ್ತಿಯಾಗಿದೆ. ಹಳ್ಳಿ ಹಳ್ಳಿಗಳಿಗೂ ತಲುಪಿದೆ.
    • ರಾಷ್ಟ್ರೀಯ ವಿಜ್ಞಾನ ದಿನದ (ಫೆ.28, ‘ರಾಮನ್ ಎಫೆಕ್ಟ್’ ಪ್ರತಿಪಾದನೆಯಾದ ದಿನ) ಶುಭಾಶಯ. ವಿಜ್ಞಾನವನ್ನು ಮುಂಚೂಣಿಗೆ (ಲ್ಯಾಬ್​ನಿಂದ ಲ್ಯಾಂಡ್) ತರಬೇಕಾಗಿದೆ. ಆತ್ಮನಿರ್ಭರ ಭಾರತಕ್ಕೂ ವಿಜ್ಞಾನದ ಕೊಡುಗೆ ದೊಡ್ಡ ಮಟ್ಟದಲ್ಲಿ ಅಪೇಕ್ಷಣೀಯ. ‘
    • ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿ ಸಂರಕ್ಷಣಾ ಪ್ರಾಧಿಕಾರವು ಜಲಪಕ್ಷಿಗಳ ವಾರ್ಷಿಕ ಗಣತಿ ಮಾಡುವ ಮೂಲಕ ಅನುಪಮ ಕಾರ್ಯ ಮಾಡಿದೆ. ಕಳೆದ ವರ್ಷಕ್ಕಿಂತ ಶೇ. 175ರಷ್ಟು ಹಕ್ಕಿಗಳ ಸಂತತಿ ವೃದ್ಧಿಸಿದೆ. ಗಣತಿ ವೇಳೆ 112 ಪ್ರಭೇದ ಪಕ್ಷಿಗಳನ್ನು ಗುರುತಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts