More

    LIVE: ಕರೊನಾ ವಿರುದ್ಧದ ಹೋರಾಟದಲ್ಲಿ ಜನರ ಒಗ್ಗಟ್ಟಿಗೆ ಮನ್​ ಕೀ ಬಾತ್​ನಲ್ಲಿ ಪ್ರಧಾನಿ ಶ್ಲಾಘನೆ

    ನವದೆಹಲಿ: ಲಾಕ್​ಡೌನ್​ ನಾಲ್ಕನೇ ಹಂತದ ಕೊನೆಯ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಮನ್​ ಕೀ ಬಾತ್​ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಇದು 65ನೇ ಮನ್​ ಕೀ ಬಾತ್​ ಸರಣಿಯಾಗಿದೆ.

    ಮಾರ್ಚ್​ 24ರಿಂದ ಆರಂಭವಾಗಿರುವ ಲಾಕ್​ಡೌನ್​ ಇದೀಗ ನಾಲ್ಕನೇ ಹಂತವನ್ನು ಪೂರೈಸಿದೆ. ಇದರ ಜತೆಗೆ, ಮೋದಿ ಸರ್ಕಾರವು ಎರಡನೆಯ ಬಾರಿಗೆ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದೆ. ಈ ಅವಧಿಯಲ್ಲಿ ತೆಗೆದುಕೊಂಡಿರುವ ಹಲವು ಯೋಜನೆಗಳ ಬಗ್ಗೆ ಪ್ರಧಾನಿಯವರು ದೇಶವನ್ನು ಉದ್ದೇಶಿಸಿ 30 ನಿಮಿಷಗಳವರೆಗೆ ಮಾತನಾಡಿದರು.

    ಅದರ ಹೈಲೈಟ್ಸ್​ ಇಲ್ಲಿದೆ:

    11.29 AM : ಪೂರ್ವ ಭಾರತದಲ್ಲಿ ಪ್ರವಾಹದ ಪರಿಸ್ಥಿತಿ ಎದುರಾಗಿದ್ದರೆ, ಉತ್ತರ ಭಾರತದಲ್ಲಿ ಬಿಸಿಲಿನ ತಾಪಮಾನ ಏರುತ್ತಿದೆ. ಈ ಕುರಿತು ಸರ್ಕಾರ ನಿಗಾ ಇರಿಸಿದೆ. ಎಲ್ಲ ರೀತಿಯ ಪ್ರಕೃತಿ ವಿಕೋಪಗಳನ್ನು ಎದುರಿಸುವಲ್ಲಿ ಈಗಾಗಲೇ ಸಾಕಷ್ಟು ತಯಾರಿ ನಡೆಸಲಾಗಿದೆ.

    11.28 AM: ಆತ್ಮ ನಿರ್ಭರ್​ ಭಾರತ ಯೋಜನೆಯಡಿಯಲ್ಲಿ ಭಾರತವನ್ನು ಆರ್ಥಿಕವಾಗಿ ಸಬಲಗೊಳಿಸುವ ಸರ್ಕಾರದ ಯೋಜನೆ ಫಲ ನೀಡಲಿದೆ. ದೇಶೀಯ ಉತ್ಪನ್ನಗಳ ಬಳಕೆಯನ್ನು ಹೆಚ್ಚಿಸುವ ಮೂಲಕ ದೇಶವನ್ನು ಆತ್ಮ ನಿರ್ಭರವನ್ನಾಗಿ ಮಾಡಲು ಜನತೆ ಸಹಕರಿಸಬೇಕು. ಹೆಚ್ಚು ಹೆಚ್ಚು ದೇಶೀಯ ಉತ್ಪನ್ನಗಳನ್ನು ಬಳಕೆ ಮಾಡಿದರೆ ಖಂಡಿತವಾಗಿಯೂ ಈ ಯೋಜನೆ ಸಫಲವಾಗುತ್ತದೆ.

    11. 26 AM: ಆಯುಷ್ಮಾನ್​ ಯೋಜನೆ ಮೂಲಕ ಒಂದು ಕೋಟಿಗಳು ಅಧಿಕ ರೋಗಿಗಳಿಗೆ ಸಹಾಯ ಮಾಡಿದ್ದೇವೆ. ಫಲಾನುಭವಿಗಳ ಸಂಖ್ಯೆ ಕೋಟಿಯನ್ನು ದಾಟಿರುವುದು ತುಂಬಾ ಖುಷಿಯ ಸಮಾಚಾರ. ಅನೇಕ ಫಲಾನುಭವಿಗಳ ಜತೆ ನಾನು ಮಾತುಕತೆ ನಡೆಸಿದ್ದು, ಅವರೆಲ್ಲರೂ ತಮಗಾಗಿರುವ ಸಹಾಯದ ಬಗ್ಗೆ ತಿಳಿಸಿದ್ದಾರೆ. ಈ ಯೋಜನೆಯನ್ನು ಇನ್ನಷ್ಟು ವಿಸ್ತಾರ ಮಾಡುವ ಮೂಲಕ ಪ್ರತಿಯೊಬ್ಬ ಅರ್ಹರಿಗೂ ಈ ಯೋಜನೆ ತಲುಪಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ.

    11.24 AM: ಮುಂದಿನ ತಿಂಗಳು 21ನೇ ಅಂತಾರಾಷ್ಟ್ರೀಯ ಯೋಗ ದಿನವಿದೆ. ಈ ಸಂದರ್ಭದಲ್ಲಿ ಯೋಗದ ಮಹತ್ವ ಸಾರುವುದು ಅತ್ಯಂತ ಅಗತ್ಯವಾಗಿದೆ. ಹಲವಾರು ಮಂದಿ ಯೋಗ ಮಾಡುವ ಮೂಲಕ ಹಲವಾರು ಪ್ರಯೋಜನಗಳನ್ನು ಪಡೆದುಕೊಂಡಿರಬಹುದು. ಆದ್ದರಿಂದ ನಿಮ್ಮ ಉಪಯೋಗಗಳು ದೇಶದ ಇತರ ಜನರಿಗೂ ಅರ್ಥವಾಗಲಿ ಎನ್ನುವ ಉದ್ದೇಶದಿಂದ ನಿಮಗೊಂದು ಚಿಕ್ಕ ಅವಕಾಶ ಕೇಂದ್ರದಿಂದ ನೀಡಲಾಗಿದೆ. ಅದೇನೆಂದರೆ ಮೂರು ನಿಮಿಷಗಳ ಯೋಗಾಸನದ ವಿಡಿಯೋ ಮಾಡಿ ಅದನ್ನು ನಮ್ಮ ಬ್ಲಾಗ್​​ಗೆ ಅಪ್​ಲೋಡ್​ ಮಾಡಿ. ಜಗತ್ತಿನ ಯೋಗದ ಹಿರಿಮೆ ಸಾರಲು ಇದೊಂದು ಉತ್ತಮ ಅವಕಾಶವಾಗಿದೆ. ಅದೇ ರೀತಿ, ಜೂನ್​ 5 ರಂದು ವಿಶ್ವ ಪರಿಸರ ದಿನವಿದೆ. ಈ ಲಾಕ್​ಡೌನ್​ ಅವಧಿಯಲ್ಲಿಯೂ ನಾವು ಪರಿಸರದ ಬಗ್ಗೆ ಕಾಳಜಿ ತೋರುವುದನ್ನು ಮರೆಯಬಾರದು. ಮಳೆನೀರಿನ ಸಂಗ್ರಹ ಕೂಡ ತುಂಬಾ ಅಮೂಲ್ಯವಾದದ್ದು. ಈ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು.

    11.23 AM: ಹಾಲಿವುಡ್​ನಿಂದ ಹರಿದ್ವಾರದವರೆಗೆ ಯೋಗ ಮಾಡುತ್ತಿದ್ದಾರೆ. ನಾವು ಎಲ್ಲರೂ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಇದಕ್ಕೆ ಆಯುರ್ವೇದ ಚಿಕಿತ್ಸಾ ವಿಧಾನ ತುಂಬಾ ಪರಿಣಾಮಕಾರಿಯಾದದ್ದು. ಈ ಪದ್ಧತಿ ತಲೆತಲಾಂತರಗಳಿಂದ ಬಂದಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಇದು ತುಂಬಾ ಒಳ್ಳೆಯ ವೈದ್ಯಕೀಯ ಪದ್ಧತಿಯಾಗಿದೆ. ಆದ್ದರಿಂದ ಇದನ್ನು ಎಲ್ಲರೂ ಅಳವಡಿಸಿಕೊಂಡರೆ ತುಂಬಾ ಉತ್ತಮ. ವಿಶ್ವದ ಬೇರೆ ಬೇರೆ ದೇಶಗಳ ಜನರು ಕೂಡ ಆಯುರ್ವೇದದ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿರುವುದು ನಮ್ಮ ಭಾರತದ ಹಿರಿಮೆ ಎಂದೇ ಹೇಳಬೇಕು.

    11.22 AM: ಕಳೆದ ಬಾರಿ ಮನ್​ ಕೀ ಬಾತ್​ ಮಾತನಾಡುವ ಸಮಯದಲ್ಲಿ ದೇಶದಲ್ಲಿ ರೈಲು, ಬಸ್ ಹಾಗೂ ವಿಮಾನ ಸಂಚಾರಗಳು ಬಂದ್ ಆಗಿದ್ದವು. ಆದರೆ, ಈ ಬಾರಿ ಲಾಕ್’ಡೌನ್ ಸಡಿಲಗೊಂಡಿದೆ. ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಆದ್ದರಿಂದ ದೇಶದ ಪ್ರತಿಯೊಬ್ಬ ಜನರೂ ಸಾಕಷ್ಟು ಮುಂಜಾಗ್ರತಾ ಕ್ರಮಗಳೊಂದಿಗೆ ಹೆಜ್ಜೆ ಇಡುವ ಅಗತ್ಯವಿದೆ. ಶ್ರಮಿಕ ವಿಶೇಷ ರೈಲು ಸೇರಿದಂತೆ ಇತರ ರೈಲು ಹಾಗೂ ವಿಮಾನ ಸಂಚಾರಕ್ಕೂ ಅನುಮತಿ ನೀಡಲಾಗಿದೆ. ಆದರೆ ಜನರು ಗೊಂದಲಕ್ಕೆ ಒಳಗಾಗದೇ ಎಚ್ಚರಿಕೆಯಿಂದಿರಬೇಕಿದೆ. ಇದರ ಜತೆಗೆ ಆರ್ಥಿಕ ಚಟುವಟಿಕೆಗಳು ಆರಂಭವಾಗಿವೆ. ಸಾಮಾಜಿಕ ಅಂತರಗಳು ಹೆಚ್ಚಾಗಬೇಕಿದೆ. ಸಾಧ್ಯವಾದಷ್ಟು ಮಾಸ್ಕ್ ಗಳನ್ನು ಧರಿಸುವುದು, ಮನೆಗಳಲ್ಲಿಯೇ ಹೆಚ್ಚು ಕಾಲ ಕಳೆಯುವುದಕ್ಕೆ ಪ್ರಯತ್ನಿಸಿ.

    11.20 AM: ಅನೇಕ ಮಂದಿ ಕರೊನಾ ವೈರಸ್​ ಈ ಸಂದರ್ಭದಲ್ಲಿ ವಿಧವಿಧ ರೂಪದ ಸಂಶೋಧನೆಗಳನ್ನೂ ಮಾಡುವ ಮೂಲಕ ಉತ್ತಮ ಕಾರ್ಯ ಮಾಡಿದ್ದಾರೆ. ನಾಸಿಕ್​ದ ಕೃಷಿಕ ರಾಜೇಂದ್ರ ಎನ್ನುವವರು ಟ್ರ್ಯಾಕ್ಟರ್​ನಲ್ಲಿಯೇ ಸ್ಯಾನಿಟೈಸೇಷನ್​ ಯಂತ್ರ ಮಾಡುವ ಮೂಲಕ ಅನೇಕ ಮಂದಿಗೆ ಸಹಾಯ ಮಾಡಿದ್ದಾರೆ. ಇದರ ಜತೆಗೆ ಶಿಕ್ಷಕರು, ವಿದ್ಯಾರ್ಥಿಗಳು ಕೂಡ ಹೊಸಹೊಸ ಯೋಜನೆ ರೂಪಿಸಿದ್ದಾರೆ. ಆನ್​ಲೈನ್​ ಶಿಕ್ಷಣ ನೀಡುವ ಮೂಲಕ ಉತ್ತಮ ಕಾರ್ಯ ಮಾಡುತ್ತಿದ್ದಾರೆ.

    11.14 AM: ಅನೇಕ ಸ್ವಸಹಾಯ ಸಂಘಗಳ ಮಹಿಳೆಯರು ಸೇರಿದಂತೆ ಅನೇಕ ಮಹಿಳೆಯರು ಮಾಸ್ಕ್​ ತಯಾರಿಸಿ ಅದನ್ನು ಕಡಿಮೆ ಬೆಲೆಗೆ ನೀಡಿದ್ದಾರೆ. ಮಹಿಳೆಯರು ಈ ರೀತಿಯ ಪ್ರಶಂಸಾರ್ಹ ಕಾರ್ಯ ಮಾಡುವ ಮೂಲಕ ವೈರಸ್​ ತೊಲಗಿಸಲು ತಮ್ಮದೇ ಆದ ಕೊಡುಗೆ ನೀಡಿರುವುದು ನಿಜಕ್ಕೂ ಅಭಿನಾಂದರ್ಹವಾಗಿದೆ.

    11.10 AM: ಲಾಕ್​ಡೌನ್​ ಸಮಯದಲ್ಲಿ ದೇಶದ ವಿವಿಧ ಭಾಗಗಳ ಜನರು ತಮ್ಮದೇ ಆದ ರೀತಿಯಲ್ಲಿ ಜನರಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ತಮಿಳುನಾಡಿನ ಸಿ.ಮೋಹನ್​ ಅವರು ತಮ್ಮ ಮಗಳ ಶಿಕ್ಷಣಕ್ಕೆ ಇಟ್ಟಿರುವ ಸಂಪೂರ್ಣ ಐದು ಲಕ್ಷ ರೂಪಾಯಿಗಳನ್ನು ಲಾಕ್​ಡೌನ್​ ಸಮಯದಲ್ಲಿರುವ ಸಂತ್ರಸ್ತರಿಗೆ ನೀಡಿದ್ದಾರೆ. ಮಧುರೈನಲ್ಲಿರುವ ತಮ್ಮ ದಿನನಿತ್ಯದ ಕೂಲಿ ಹಣದಲ್ಲಿಯೇ ಸ್ವಲ್ಪ ಸ್ವಲ್ಪ ಉಳಿಸಿ ಬಡವರಿಗೆ ಬೇಳೆ, ಕಾಳು ಹಂಚಿಕೆ ಮಾಡಿದ್ದಾರೆ. ಅಗರ್ತಲಾದಲ್ಲಿರುವ ಗೌತಮ್​ ದಾಸ್​, ಪಂಜಾಬ್​ನ ಅಂಗವಿಕಲ ಭೈರಾಜು ಸೇರಿದಂತೆ ಅನೇಕ ಮಂದಿ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಇಂಥ ಅದೆಷ್ಟೋ ಘಟನೆಗಳು ದೇಶದ ಮೂಲೆಮೂಲೆಗಳಲ್ಲಿ ಜರುಗಿದೆ. ಇದು ತುಂಬಾ ಸಂತೋಷದ ವಿಷಯ. ಎಲ್ಲರೂ ಸೇರಿ ಇಂಥ ಸೇವಾ ಮನೋಭಾವದಿಂದ ಕೆಲಸ ಮಾಡಿರುವುದಕ್ಕೆ ನಾನು ಅವರನ್ನು ಅಭಿನಂದಿಸುತ್ತೇನೆ.

    11.02 AM: ದೇಶದ ಪ್ರತಿಯೊಬ್ಬರೂ ಕರೊನಾ ವೈರಸ್​ ವಿರುದ್ಧ ಶ್ರಮಿಸುತ್ತಿದ್ದಾರೆ. ದೇಶದ 130 ಕೋಟಿ ಜನರು ಸೇರಿ ಈ ವೈರಸ್​ ವಿರುದ್ಧ ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಈ ವೈರಸ್​ ಹಾವಳಿಯನ್ನು ಅತಿ ಶೀಘ್ರದಲ್ಲಿ ನಿರ್ಮೂಲನೆ ಮಾಡಲು ಸಾಧ್ಯವಾಗಿದೆ. ಇದಕ್ಕಾಗಿ ನಾನು ದೇಶದ ಪ್ರತಿಯೊಬ್ಬ ಜನರಿಗೂ ಅಭಿನಂದಿಸುತ್ತಿದ್ದೇನೆ. ಈ ವೈರಸ್ ವಿರುದ್ಧದ ಹೋರಾಟದಲ್ಲಿ ಖಂಡಿತ ಜಯ ಸಾಧಿಸಲಿದ್ದು, ಈ ಒಗ್ಗಟ್ಟನ್ನು ಭವಿಷ್ಯದಲ್ಲೂ ಮುಂದುವರೆಸಬೇಕಿದೆ. ಇತರ ದೇಶಗಳಿಗೆ ಹೋಲಿಸಿದ್ದಲ್ಲಿ ಭಾರತದ ಜನಸಂಖ್ಯೆ ಹೆಚ್ಚಿಗೆ ಇದೆ. ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ನೋಡಿದರೆ ನಾವು ಕರೊನಾ ವೈರಸ್​ ವಿರುದ್ಧದ ಹೋರಾಟದಲ್ಲಿ ಸಾಕಷ್ಟು ಜಯ ಸಾಧಿಸುತ್ತಿದ್ದೇವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts