More

    ಜನವರಿ ಬಂದರೂ ಬಾರದ ಮಾವಿನ ಹೂವು ; ಆತಂಕದಲ್ಲಿ ಗಿಡಗಳಿಗೆ ಉಷ್ಣಾಂಶ ಔಷಧ ಸಿಂಪಡಣೆಗೆ ಮುಂದಾದ ರೈತ

    ಶ್ರೀನಿವಾಸಪುರ : ಜನವರಿ ಪ್ರಾರಂಭದಲ್ಲೇ ಹೂ ಬಿಟ್ಟು ರೈತರೊಂದಿಗೆ ಹೊಸ ವರ್ಷವನ್ನು ಸ್ವಾಗತಿಸುತ್ತಿದ್ದ ಬಹುತೇಕ ಮಾವಿನ ಮರಗಳು ಈ ಬಾರಿ ಹೂವು ಬಿಡದೆ ಮಾವು ಬೆಳೆಗಾರರ ಆತಂಕ್ಕೆ ಎಡೆಮಾಡಿಕೊಟ್ಟಿವೆ.

    ಕಳೆದ ವರ್ಷ ಜನವರಿಗೆ ಶೇ.50ರಷ್ಟು ಹೂವು ಕಾಣಿಸಿಕೊಂಡಿತ್ತು. ಈ ಬಾರಿ ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ಮಾವಿನ ಗಿಡಗಳಿಗೆ ಅಗತ್ಯ ಮಳೆ ಬಿದ್ದಿದ್ದು ಉತ್ತಮ ಫಸಲು ಬರುವ ನಿರೀಕ್ಷೆ ಇತ್ತು. ಆದರೆ ಡಿಸೆಂಬರ್‌ನಲ್ಲಿ ಬಿಸಿಲು ಹೆಚ್ಚಾಗಿಲ್ಲದ ಕಾರಣ ಜನವರಿಯಲ್ಲಿ ಹೂವು ಕಾಣಿಸಿಕೊಳ್ಳುವುದು ತಡವಾಗಿದೆ.

    ಔಷಧ ಸಿಂಪಡಣೆ: ಈಗಾಗಲೆ ಕೆಲ ಗಿಡಗಳಲ್ಲಿ ಶೇ.10 ಮಾತ್ರ ಮೊಗ್ಗು ಕಾಣಿಸಿಕೊಂಡಿದ್ದು, ಗಿಡಗಳಿಗೆ ಉಷ್ಣಾಂಶ ನೀಡಿದರೆ ಮೊಗ್ಗು ಈಚೆ ಬರುತ್ತದೆ ಎಂದು ಔಷಧ ಸಿಂಪಡಣೆಗೆ ರೈತರು ಮುಂದಾಗಿದ್ದಾರೆ. ಗಿಡಗಳಿಗೆ ಉಷ್ಣಾಂಶ ನೀಡುವ ಔಷಧ ಸಿಂಪಡಣೆಗೆ ಮುಂದಾಗಿರುವುದರಿಂದ ತೋಟಗಾರಿಕೆ ಇಲಾಖೆ ಯಾವ ಔಷಧದಿಂದ ರೈತರಿಗೆ ಪ್ರಯೋಜನೆಯಾಗುತ್ತದೆ ಎಂದು ಅರಿವು ಮೂಡಿಸುವ ಕೆಲಸ ಮಾಡಬೇಕಿದೆ.

    ಡಿಸೆಂಬರ್‌ನಲ್ಲಿ ಮೋಡ ಮುಚ್ಚಿದ ವಾತಾವರಣವಿರುವುದರಿಂದ ಹೂ ಕಾಣಿಸಿಕೊಳ್ಳಲು ತಡವಾಗಿದೆ. ಗಿಡಗಳಲ್ಲಿ ಹೂವು ಒಂದೇ ಸಮನಾಗಿ ಅರಳಬೇಕಾದರೆ ಗಿಡಗಳಿಗೆ ಉಷ್ಣಾಂಶದೊಂದಿಗೆ ಔಷಧ ಸಿಂಪಡಣೆ ಅವಶ್ಯಕತೆ ಇದೆ. ರೈತರು ತಜ್ಞರ ಸಲಹೆ ಪಡೆಯುವುದು ಉತ್ತಮ.
    ಚಂದ್ರಶೇಖರ್, ನೀಲಟೂರು. ಜಿಲ್ಲಾ ಮಾವು ಬೆಳೆಗಾರರ ಸಂಘದ ಕಾರ್ಯದರ್ಶಿ

    ಮಾವಿನ ಗಿಡಗಳಿಗೆ ರಾತ್ರಿ ಶೇ.13ರಷ್ಟು ಉಷ್ಣಾಂಶ ಸಿಗದಿದ್ದರೆ ಹೂವು ಬರುವುದು ತಡವಾಗುತ್ತದೆ. ಬಾದಾಮಿ, ಮಲ್ಲಿಕಾ ಹಾಗೂ ರಾಜಗೀರದಲ್ಲಿ ಶೇ.10-15 ಮೊಗ್ಗು ಕಾಣಿಸಿಕೊಂಡಿದೆ. ಹೊಗಳಗೆರೆಯ ಮ್ಯಾಂಗೋ ಬೋರ್ಡ್‌ನಿಂದ ಔಷಧ ಸಿಂಪಡಣೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ.
    ಬೈರಾರೆಡ್ಡಿ, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ, ಶ್ರೀನಿವಾಸಪುರ

    ಮಾವಿನಕಾಯಿ ಮಂಡಿ ಮಾಲೀಕರ ಬಳಿ ರೈತರು ಔಷಧಕ್ಕಾಗಿ ಮುಗಿ ಬೀಳುತ್ತಿದ್ದಾರೆ. ಮಂಡಿ ಮಾಲೀಕರು ಆಂಧ್ರ್ರದಿಂದ ಗುಣಮಟ್ಟವಿಲ್ಲದ ಔಷಧ ಖರೀದಿಸಿ ರೈತರಿಗೆ ಕೊಡುತ್ತಿದ್ದಾರೆ ಎಂಬ ಆರೋಪವಿದೆ. ಅಂಗಡಿ ರಸೀದಿ ಇರುವ ಗುಣಮಟ್ಟದ ಔಷಧ ಖರೀದಿಸುವುದು ಉತ್ತಮ.
    ರಾಜಾರೆಡ್ಡಿ, ಮಾವು ಬೆಳೆಗಾರರು, ದಿಗುವಪಲ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts