More

    ಮಾವಿಗೆ ಅಕಾಲಿಕ ಮಳೆ ಹೊಡೆತ: ಹೂವು ಉದುರುವ ಜತೆಗೆ ಬೂದಿ ರೋಗದ ಭೀತಿ

    ರಾಮನಗರ: ಜಿಲ್ಲೆಯ ಮಾವು ಬೆಳೆಗಾರರ ಮೇಲೆ ಪ್ರಕೃತಿ ಮುನಿಸು ಮುಂದುವರಿದಿದ್ದು, ಅಕಾಲಿಕ ಮಳೆ ಮಾವು ಬೆಳೆಗಾರರ ನೆಮ್ಮದಿಗೆ ಭಂಗ ತಂದಿದೆ.

    ಈ ಬಾರಿ ಮುಂಗಾರು ಉತ್ತಮವಾಗಿ ಸುರಿದ ಪರಿಣಾಮ, ಈಗಾಗಲೇ ಹಲವಾರು ಭಾಗದಲ್ಲಿ ಮಾವಿನ ಮರಗಳು ಹೂವಿನಿಂದ ತುಂಬಿಕೊಂಡಿದ್ದು, ರೈತರು ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದರು. ಹೂವಿನ ಜೊತೆಗೆ ಪೀಚು ಕಾಯಿಯೂ ಉದುರುವ ಆತಂಕ ಎದುರಾಗಿದೆ.

    ಈ ಬಾರಿ ನವೆಂಬರ್-ಡಿಸೆಂಬರ್‌ವರೆಗೆ ಸುರಿದ ಮಳೆಯೇ ಮಾವಿನ ಮರಗಳಿಗೆ ಸಾಕಿತ್ತು. ಆದರೆ ಈಗ ಬೀಳುತ್ತಿರುವ ಮಳೆಯಿಂದ ಕಾಯಿ ಉದುರುವ ಸಾಧ್ಯತೆ ಹೆಚ್ಚು. ಮಳೆ ಮುಂದುವರಿದರೆ ಶೇ.70-80 ಬೆಳೆ ಹಾಳಾಗುತ್ತದೆ. ಅದರಲ್ಲೂ ಬಾದಾಮಿ ತಳಿಯ ಮಾವು ಹೆಚ್ಚು ಉಳಿಯುವುದಿಲ್ಲ ಎನ್ನುವುದು ರೈತರ ಆತಂಕಕ್ಕೆ ಕಾರಣವಾಗಿದೆ.
    ಹಿಂದೆಂದೂ ಜನವರಿಯಲ್ಲಿ ಈ ರೀತಿ ಅಕಾಲಿಕ ಮಳೆ ಆಗಿರಲಿಲ್ಲ. ಜನವರಿ-ಫೆಬ್ರವರಿಯಲ್ಲಿ ಬೀಳುವ ಇಬ್ಬನಿಯ ತೇವಾಂಶವೇ ಮರಗಳಿಗೆ ಸಾಕು. ಮಾವು ಹೂವು ಬಿಟ್ಟಿರುವ ಕಾರಣ ಈ ಅವಧಿಯಲ್ಲಿ ಮಳೆಯ ಅವಶ್ಯಕತೆ ಇರಲಿಲ್ಲ.
    ತೇವಾಂಶ ಹೆಚ್ಚಾದಷ್ಟು ಹೂವು ಉದುರುವ ಜತೆಗೆ ಅದರಲ್ಲಿ ಬೂದಿ ರೋಗ ಹರಡುವ ಸಾಧ್ಯತೆ ಹೆಚ್ಚಿದೆ ಎನ್ನುವುದು ರೈತರ ಅಳಲು.

    ಆತಂಕ ಬೇಡ: ಕೆಲವು ಕಡೆ ಬೇಗ ಹೂವು ಬಿಟ್ಟು, ಬಟಾಣಿ ಗಾತ್ರದ ಕಾಯಿ ಆಗಿರುವ ಕಡೆ ತುಂತುರು ಮಳೆಯಿಂದ ಹೆಚ್ಚು ಹಾನಿ ಇಲ್ಲ. ಆದರೆ ಹೂವು ಇರುವ ತೋಟಗಳಲ್ಲಿ ಹಾನಿ ಹೆಚ್ಚಾಗುವ ಸಾಧ್ಯತೆ ಇದೆ. ರೋಗ ನಿಯಂತ್ರಣ ಮತ್ತು ಹೂ ಉದುರದೇ ಇರಲು ರೈತರು ತೋಟಗಾರಿಕಾ ವಿಜ್ಞಾನಿಗಳು, ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ಮಾರ್ಗದರ್ಶನ ಪಡೆಯಬೇಕು ಎನ್ನುವುದು ಇಲಾಖೆ ಅಧಿಕಾರಿಗಳ ಸಲಹೆ.

    ರೈತರೇನು ಮಾಡಬೇಕು?: ಅಕಾಲಿಕ ಮಳೆಯಿಂದಾಗಿ ಮಾವಿನ ಹೂವಿನ ಗೊಂಚಲು ಕಪ್ಪಾಗುವುದು ಅಥವಾ ಬೂದಿ ರೋಗ ಬರುವ ಸಾಧ್ಯತೆ ಇದೆ. ಅದರ ನಿಯಂತ್ರಣಕ್ಕೆ ಬೆಳೆಗಾರರು ಹೆಕ್ಸಾಕೊನಾಜೋಲ್ 2 ಮಿ.ಲೀ. ಅಥವಾ ಥಯೋಫಿನೆಟ್ ಮಿಡೈಲ್ 1 ಗ್ರಾಂ ಅಥವಾ ಕಾರ್ಬನ್‌ಡಾಜಿಮ್ 1.5 ಗ್ರಾಂ ಅಥವಾ ಟ್ರೈಸಕ್ಲೊಜೋಲ್ 0.25 ಗ್ರಾಂ ಈ ನಾಲ್ಕರಲ್ಲಿ ಒಂದು ರಾಸಾಯನಿಕ ಔಷಧವನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಬೆಳೆಗೆ ಸಿಂಪಡಿಸಬೇಕು ಎನ್ನುವುದು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಲಹೆಯಾಗಿದೆ.

     

    ರೈತರು ಆತಂಕಪಡುವ ಅಗತ್ಯವಿಲ್ಲ. ಮಳೆ ಹೆಚ್ಚಾದಷ್ಟು ಹೂ ಕೊಳೆಯುವ ಜತೆಗೆ ಬೂದಿ ರೋಗ ಕಾಣಿಸಿಕೊಳ್ಳುತ್ತದೆ. ಈ ವೇಳೆ ರೈತರು ಶಿಲೀಂಧ್ರನಾಶಕ ಸಿಂಪಡಿಸಿ ಬೆಳೆ ರಕ್ಷಿಸಿಕೊಳ್ಳಬೇಕು. ಅಗತ್ಯ ಮಾಹಿತಿಗಾಗಿ ಹತ್ತಿರದ ತೋಟಗಾರಿಕೆ ಕಚೇರಿಗೆ ಭೇಟಿ ನೀಡಿದರೆ ಅಧಿಕಾರಿಗಳು ನೆರವಿಗೆ ಬರಲಿದ್ದಾರೆ.
    ಮುನೇಗೌಡ ಉಪನಿರ್ದೇಶಕ, ತೋಟಗಾರಿಕೆ ಇಲಾಖೆ

    ಜನವರಿಯಲ್ಲಿ ಮಳೆ ಬೀಳುವುದು ಮಾವಿಗೆ ಸೂಕ್ತವಲ್ಲ. ರಾಮನಗರ ಮಾವು ಬೇಗನೇ ಹೂವು ಕಚ್ಚುವುದರಿಂದ ಮಳೆ ಬಿದ್ದರೆ ಬೂದಿ ರೋಗ ಬರುತ್ತದೆ. ಹೂವು ಉದುರುತ್ತದೆ. ಇದರಿಂದ ರೈತರಿಗೆ ನಷ್ಟವಲ್ಲದೆ ಬೇರೇನೂ ಇಲ್ಲ.
    ಸಿದ್ದರಾಜು, ತಾಲೂಕು ಮಾವು ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts