More

    ಮಂಗಳೂರು ಐಟಿ ಪಾರ್ಕ್ ಫ್ಲಾಪ್

    ಹರೀಶ್ ಮೋಟುಕಾನ ಮಂಗಳೂರು
    ರಾಜ್ಯದ ದ್ವಿತೀಯ ಹಂತದ ನಗರಗಳಲ್ಲಿ ರಾಜ್ಯ ಸರ್ಕಾರ ದಶಕದ ಹಿಂದೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಐಟಿ ಪಾರ್ಕ್ ಶೈಕ್ಷಣಿಕ ನಗರ ಮಂಗಳೂರು ಹಾಗೂ ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಫ್ಲಾಪ್ ಆಗಿದೆ.
    ಐಟಿ ಉದ್ಯಮ ಬೆಂಗಳೂರಿಗೆ ಮಾತ್ರ ಸೀಮಿತವಾದೆ ರಾಜ್ಯದ ದ್ವಿತೀಯ ಹಂತದ ನಗರಗಳಿಗೂ ವಿಸ್ತರಣೆಯಾಗಬೇಕು ಎನ್ನುವ ಉದ್ದೇಶದಿಂದ 2008-09ರ ಬಜೆಟ್‌ನಲ್ಲಿ ಸರ್ಕಾರ ಹುಬ್ಬಳ್ಳಿ, ಕಲಬುರಗಿ, ಶಿವಮೊಗ್ಗ, ಮೈಸೂರು ಮತ್ತು ಮಂಗಳೂರಿನಲ್ಲಿ ಐಟಿ ಪಾರ್ಕ್ ನಿರ್ಮಿಸುವುದಾಗಿ ಘೋಷಿಸಿತ್ತು. ಐಟಿ ಅಭಿವೃದ್ಧಿ ಪಡಿಸುವ ಸರ್ಕಾರದ ಅಂಗ ಸಂಸ್ಥೆ ಕಿಯೋನಿಕ್ಸ್‌ಗೆ ಪಾರ್ಕ್ ನಿರ್ಮಾಣಕ್ಕಾಗಿ ಈ ಎಲ್ಲ ನಗರಗಳಲ್ಲಿ ಸರ್ಕಾರಿ ಜಾಗ ಒದಗಿಸಲಾಗಿತ್ತು.

    ಕಿಯೋನಿಕ್ಸೃ್ (ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ) ಮಂಗಳೂರು ನಗರದ ದೇರೆಬೈಲಿನಲ್ಲಿ ಐಟಿ ಪಾರ್ಕ್‌ಗಾಗಿ 2009ರಿಂದ 3.25 ಎಕರೆ ಜಾಗ ಕಾದಿರಿಸಿದೆ. ಇದನ್ನು ಅಭಿವೃದ್ಧಿ ಪಡಿಸಲು ಯಾವುದೇ ಕಂಪನಿ ಮುಂದಾಗದ ಕಾರಣ ಒಂದಷ್ಟು ತೆಂಗಿನ ಮರ ಹಾಗೂ ಕಾಡು ತುಂಬಿಕೊಂಡು ಜಾಗ ನಿಷ್ಪ್ರಯೋಜಕ ಸ್ಥಿತಿಯಲ್ಲಿದೆ.

    ಟೆಂಡರ್‌ಗೆ ನೀರಸ ಪ್ರತಿಕ್ರಿಯೆ: ದೇರೆಬೈಲ್ ಹರಿಪದವು ರಸ್ತೆ ಬದಿ 4.75 ಎಕರೆ ಸಮತಟ್ಟಾದ ಪ್ರದೇಶವನ್ನು ಸರ್ಕಾರ ಕಿಯೋನಿಕ್ಸ್‌ಗೆ ಒದಗಿಸಿದೆ. ಇದರಲ್ಲಿ 1.5 ಎಕರೆ ಜಾಗವನ್ನು ಕಿಯೋನಿಕ್ಸ್ ಸಂಸ್ಥೆ ಎಸ್‌ಟಿಪಿಐ (ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ)ಗೆ ನೀಡಿದ್ದು, ಕೇಂದ್ರ ಸರ್ಕಾರದ ಈ ಸಂಸ್ಥೆ ಪಾರ್ಕ್ ನಿರ್ಮಿಸಿ ಜಾಗವನ್ನು ಸದ್ಬಳಕೆ ಮಾಡಿದೆ.
    ಉಳಿದ 3.25 ಎಕರೆ ಜಾಗದಲ್ಲಿ 30 ಕೋಟಿ ರೂ.ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದ ಐಟಿ ಪಾರ್ಕ್ ನಿರ್ಮಿಸುವುದು ಕಿಯೋನಿಕ್ಸ್‌ನ ಯೋಜನೆ. ಜಾಗದ ಶೇ.40 ಭಾಗದಲ್ಲಿ ಐಟಿ ಪಾರ್ಕ್, ಶೇ.60 ಭಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವ ನೀಲನಕಾಶೆ ಸಿದ್ಧಪಡಿಸಿ, 2010ರ ಅಕ್ಟೋಬರ್‌ನಿಂದ ಯೋಜನೆ ಆರಂಭಿಸಲು ಕಿಯೋನಿಕ್ಸ್ ಮುಂದಾಗಿತ್ತು. ಆದರೆ ಟೆಂಡರ್ ಆಹ್ವಾನಿಸಿದಾಗ ಖಾಸಗಿ ಸಂಸ್ಥೆಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪರಿಣಾಮ ಐಟಿ ಪಾರ್ಕ್‌ಗೆ ಕಾದಿರಿಸಿದ ಜಾಗ ಹಾಗೆಯೇ ಉಳಿದಿದೆ.
    ಮೈಸೂರು ನಗರದ ಹೆಬ್ಬಾಳ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿ ಐಟಿ ಪಾರ್ಕ್‌ಗೆ ಕಿಯೋನಿಕ್ಸ್ 5 ಎಕರೆ ಜಾಗ ಮೀಸಲಿಟ್ಟಿದೆ. ಶೇ.40 ಪ್ರದೇಶ ಐಟಿ ಕಾರ್ಯ ಸ್ಥಳ, ಪಾರ್ಕ್, ರಫ್ತು ಆಧಾರಿತ ಉದ್ಯಮಗಳಿಗೆ ಮೀಸಲಿಡಬೇಕು. ಶೇ.60ರಷ್ಟು ಸ್ಥಳ ವಾಣಿಜ್ಯ, ವಸತಿ ಹಾಗೂ ಸಮಾಜಕ್ಕೆ ಅವಶ್ಯವಾದ ಮೂಲಭೂತ ಸೌಕರ್ಯಕ್ಕೆ ಮೀಸಲಿಡಬೇಕು. ಇದಕ್ಕೆ 50 ಕೋಟಿ ರೂ. ಯೋಜನಾ ವೆಚ್ಚ ಅಂದಾಜಿಸಲಾಗಿದೆ. ಇಲ್ಲಿಯ ಜಾಗವೂ ಪ್ರಸ್ತುತ ನಿಷ್ಪ್ರಯೋಜಕ ಸ್ಥಿತಿಯಲ್ಲಿದೆ.

    ಹುಬ್ಬಳ್ಳಿಯಲ್ಲಿ 3.2 ಎಕರೆ ಜಾಗದಲ್ಲಿ ಟಿಸಿಎಸ್, ಟಾಟಾ ಟೆಲಿಸರ್ವಿಸಸ್, ಐಐಐಟಿ ಮತ್ತು ಎಸ್‌ಪಿಟಿಐ ಕಾರ್ಯ ನಿರ್ವಹಿಸುತ್ತಿದೆ. ಶಿವಮೊಗ್ಗದಲ್ಲಿ 36 ಎಕರೆ ಐಟಿ ಪಾರ್ಕ್‌ನ ಒಂದನೇ ಹಂತ ಪೂರ್ಣಗೊಂಡಿದ್ದು, ಐಟಿ ಎಸ್‌ಇಝಡ್ ನಿರ್ಮಾಣಗೊಂಡಿದೆ. ಕಲಬುರಗಿಯಲ್ಲಿ 1.72 ಎಕರೆ ಸ್ಥಳದಲ್ಲಿ ಮೊದಲ ಹಂತದ ಐಟಿ ಪಾರ್ಕ್ ನಿರ್ಮಾಣವಾಗಿದೆ.

    ಮಂಗಳೂರು ಹಾಗೂ ಮೈಸೂರಿನಲ್ಲಿ ಐಟಿ ಪಾರ್ಕ್ ಅಭಿವೃದ್ಧಿಪಡಿಸಲು ಹಲವು ಬಾರಿ ಟೆಂಡರ್ ಕರೆದರೂ ಯಾರೂ ಆಸಕ್ತಿ ವಹಿಸಿಲ್ಲ. ಪ್ರಯತ್ನ ಮುಂದುವರಿದಿದ್ದು, ಶೀಘ್ರದಲ್ಲಿ ಮತ್ತೆ ಖಾಸಗಿ ಸಹಭಾಗಿತ್ವಕ್ಕಾಗಿ ಟೆಂಡರ್ ಕರೆಯಲು ನಿರ್ಧರಿಸಿದ್ದೇವೆ.
    – ಸೂರಿ ತಾಯಲ, ತಾಂತ್ರಿಕ ನಿರ್ದೇಶಕ, ಕಿಯೋನಿಕ್ಸೃ್, ಬೆಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts