More

    ಮಂಗಳೂರು ವಿಶ್ವವಿದ್ಯಾಲಯ ಬಿಬಿಎ ಕನ್ನಡ ಪ್ರಶ್ನೆ ಪತ್ರಿಕೆ ಅವಾಂತರ

    ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಬಿಬಿಎ ಪದವಿ ಪರೀಕ್ಷೆಗಳು ನಡೆಯುತ್ತಿದ್ದು, ದ್ವಿತೀಯ ಸೆಮಿಸ್ಟರ್‌ನ ಕನ್ನಡ ಪ್ರಶ್ನೆಪತ್ರಿಕೆಯ ಗೊಂದಲದಿಂದಾಗಿ ಸೋಮವಾರದ ಪರೀಕ್ಷೆಯನ್ನೇ ಮುಂದೂಡಲಾಗಿದೆ.

    ಕಾಲೇಜುಗಳಲ್ಲಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಗೆ ಬಿಬಿಎ ದ್ವಿತೀಯ ಸೆಮಿಸ್ಟರ್‌ನ ಕನ್ನಡ ಪ್ರಶ್ನೆಪತ್ರಿಕೆಯ ಬದಲಿಗೆ ಪ್ರಥಮ ಸೆಮಿಸ್ಟರ್‌ನ ಕನ್ನಡ ಪ್ರಶ್ನೆಪತ್ರಿಕೆಗಳು ಪೂರೈಕೆಯಾಗಿವೆ. ಪ್ರಶ್ನೆಪತ್ರಿಕೆಯಲ್ಲಿ ದ್ವಿತೀಯ ಸೆಮಿಸ್ಟರ್‌ನ ಟೈಟಲ್ ಇದ್ದರೂ, ಪ್ರಶ್ನೆಗಳು ಪ್ರಥಮ ಸೆಮಿಸ್ಟರ್‌ನದ್ದಾಗಿತ್ತು. ಇದರಿಂದಾಗಿ ವಿವಿ ಕೊನೇ ಕ್ಷಣದಲ್ಲಿ ಪರೀಕ್ಷೆಯನ್ನು ಮುಂದೂಡಿದೆ. ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ಕಾಲೇಜುಗಳಿಗೆ ಪೂರೈಕೆ ಮಾಡುವ ಜವಾಬ್ದಾರಿ ಹೊಂದಿರುವ ಬಿಬಿಎ ಆಡಳಿತ ಮಂಡಳಿ ಮುಖ್ಯಸ್ಥರಿಗೆ ಕುಲಪತಿ ನೋಟಿಸ್ ಜಾರಿ ಮಾಡಿದ್ದಾರೆ.

    ಈ ಬಗ್ಗೆ ವಿಜಯವಾಣಿ ಜತೆ ಮಾತನಾಡಿದ ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಪಿ.ಎಲ್. ಧರ್ಮ, ವಿವಿಗೆ ಸಂಬಂಧಿಸಿದ ವಿವಿಧ ವಿಭಾಗಗಳ ಪ್ರಶ್ನೆಪತ್ರಿಕೆಗಳ ತಯಾರಿ ಆಯಾ ವಿಭಾಗದ ಮುಖ್ಯಸ್ಥರ ಹೊಣೆ. ಮುಖ್ಯಸ್ಥರ ಉಸ್ತುವಾರಿಯಲ್ಲಿ ಪ್ರಶ್ನೆಪತ್ರಿಕೆ ಸಿದ್ಧಗೊಂಡು ಸೀಲ್ ಆಗಿಯೇ ಮುದ್ರಣಕ್ಕೆ ಹೋಗಿ ಅಲ್ಲಿಂದ ಸೀಲ್ ಆಗಿಯೇ ಪರೀಕ್ಷಾ ದಿನ ಕಾಲೇಜುಗಳಿಗೆ ತಲುಪುತ್ತದೆ. ಬಿಬಿಎ ದ್ವಿತೀಯ ಸೆಮಿಸ್ಟರ್‌ನ ಕನ್ನಡ ಪರೀಕ್ಷೆಯ ಸಂದರ್ಭ ಈ ಅಚಾತುರ್ಯ ನಡೆದಿದೆ. ವಿವಿ ವ್ಯಾಪ್ತಿಯ 34 ಕಾಲೇಜುಗಳಲ್ಲಿ ಬಿಬಿಎ ಕೋರ್ಸ್ ಇದೆ. ಅಚಾತುರ್ಯ ಗಮನಕ್ಕೆ ಬಂದಾಕ್ಷಣ ಪ್ರಶ್ನೆಪತ್ರಿಕೆಗಳನ್ನು ಹಿಂಪಡೆದು, ಪರೀಕ್ಷೆ ಮುಂದೂಡಲಾಗಿದೆ. ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ. ಕುಲಪತಿಗಳೊಂದಿಗೆ ಚರ್ಚಿಸಿ ಮುಂದಿನ ಪರೀಕ್ಷಾ ದಿನಾಂಕ ತಿಳಿಸಲಾಗುವುದು. ಘಟನೆಗೆ ಸಂಬಂಧ ಬಿಬಿಎ ಆಡಳಿತ ಮಂಡಳಿ ಮುಖ್ಯಸ್ಥರಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts