More

    ಅಭಿವೃದ್ಧಿಗೆ ಅಧಿಕ ಅವಕಾಶದ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರ

    ಶ್ರವಣ್‌ಕುಮಾರ್ ನಾಳ ಮಂಗಳೂರು

    ಪ್ರವಾಸೋದ್ಯಮ ಉತ್ತೇಜನಕ್ಕೆ ಹೈಟೆಕ್ ಮಾದರಿಯಲ್ಲಿ ಕಡಲತಡಿ ಅಭಿವೃದ್ಧಿ, ವಾಣಿಜ್ಯ, ಬಂದರು ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ ಪ್ರಥಮ ಆದ್ಯತೆ, ಅವ್ಯಾಹತವಾಗಿ ನಡೆಯುವ ಅಕ್ರಮ ಗೋ ಸಾಗಾಟ- ಗೋ ವಧೆಗಳಿಗೆ ಕಡಿವಾಣ, ಮೀನುಗಾರಿಕೆಯನ್ನೇ ನಂಬಿರುವ ಕ್ಷೇತ್ರದ ಬಹುಸಂಖ್ಯಾತ ಮೀನುಗಾರರ ಉಪಯೋಗಕ್ಕೆ ಕುಳಾಯಿ ಮೀನುಗಾರಿಕಾ ಜೆಟ್ಟಿ ನಿರ್ಮಾಣ, ಗಂಜಿಮಠದಲ್ಲಿ ಪ್ಲಾಸ್ಟಿಕ್‌ಪಾರ್ಕ್ ಯೋಜನೆ ಅನುಷ್ಠಾನ..

    ಇದು ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪ್ರಮುಖ ಸವಾಲುಗಳು. ಹಿಂದಿನ ಅವಧಿಯಲ್ಲಿ ಶಾಸಕ ಡಾ. ಭರತ್ ಶೆಟ್ಟಿ ಒಟ್ಟು 2080 ಕೋಟಿ ರೂ. ಮೊತ್ತದ ಯೋಜನೆಗಳ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮುಂದಡಿಯಿಟ್ಟರೂ ಕೆಲವೆಡೆ ಕಾನೂನು ತೊಡಕಿನಿಂದ ಹಿನ್ನಡೆಯಾಗಿತ್ತು. ಈ ಬಾರಿ ಎಲ್ಲವೂ ಪರಿಹಾರ ಕಾಣುವ ನಿರೀಕ್ಷೆಗಳಿವೆ.

    ಮೀನುಗಾರಿಕಾ ಜೆಟ್ಟಿ ಕೆಲಸ ಶುರು: ಕಳೆದ ಹಲವಾರು ವರ್ಷಗಳಿಂದ ನಾನಾ ಕಾರಣದಿಂದ ನನೆಗುದಿಗೆ ಬಿದ್ದಿದ್ದ ಕೇಂದ್ರ, ರಾಜ್ಯ ಸರ್ಕಾರ, ಎನ್‌ಎಂಪಿಟಿ ಪಾಲುದಾರಿಕೆಯಲ್ಲಿ ನಿರ್ಮಾಣಗೊಳ್ಳಲಿರುವ 208.5 ಕೋಟಿ ರೂ. ವೆಚ್ಚದ ಕುಳಾಯಿ ಹೈಟೆಕ್ ಮೀನುಗಾರಿಕಾ ಜೆಟ್ಟಿ ನಿರ್ಮಾಣಕ್ಕೆ ಇದ್ದ ಕಾನೂನು ತೊಡಕು ಅಂತ್ಯಗೊಂಡಿದ್ದು, ನಿರ್ಮಾಣ ಯೋಜನೆ ಆರಂಭಗೊಂಡಿದೆ. ಪ್ರಸ್ತುತ ಬ್ರೇಕ್‌ವಾಟರ್ ನಿರ್ಮಾಣಕ್ಕೆ ಕಾಮಗಾರಿ ನಡೆಯುತ್ತಿದೆ. ಸಮುದ್ರ ತೀರದಲ್ಲಿ ತೇಲುವ ಮಾದರಿಯಲ್ಲಿ ನಿರ್ಮಾಣವಾಗಲಿದ್ದು, ಎನ್‌ಎಂಪಿಟಿ ಉಸ್ತುವಾರಿ ವಹಿಸಿದೆ. ಈಗಾಗಲೇ ಸ್ಥಳೀಯ ಮೀನುಗಾರಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಜೆಟ್ಟಿ ಯಾವ ರೀತಿ ಇರಬೇಕೆಂಬುದನ್ನು ಅಂತಿಮಗೊಳಿಸಲಾಗಿದೆ.

    ಮಳೆಗಾಲದಲ್ಲಿ ಮೀನುಗಾರರು ಹವಾಮಾನ ವೈಪರೀತ್ಯದಿಂದ ಅನಿವಾರ್ಯವಾಗಿ ನವಮಂಗಳೂರು ಬಂದರು ಒಳಗೆ ಹೋಗ ಬೇಕಾದ ಸ್ಥಿತಿಯಿದೆ. ಆದರೆ ಹೆಚ್ಚಿನ ಭದ್ರತೆ, ಬೃಹತ್ ಹಡಗುಗಳ ಆಗಮನ ಹೆಚ್ಚಳವಾದ ಬಳಿಕ ನೂರಾರು ಮೀನುಗಾರಿಕೆ ದೋಣಿಗಳ ಪ್ರವೇಶಕ್ಕೆ ಸಮಸ್ಯೆಯಾಗುತ್ತಿದೆ. ಇದರ ಜತೆಗೆ ನವಮಂಗಳೂರು ಬಂದರು ನಿರ್ಮಾಣಕ್ಕಾಗಿ ಭೂಮಿ ತ್ಯಾಗ ಮಾಡಿದ ನಿರ್ವಸಿತರಿಗೆ ಜೆಟ್ಟಿ ನಿರ್ಮಿಸಿಕೊಡುವ ಭರವಸೆಯನ್ನು ಕಳೆದ 40 ವರ್ಷಗಳ ಹಿಂದೆಯೇ ಸರ್ಕಾರ ನೀಡಿದ್ದರೂ, ಈಗಷ್ಟೇ ನಿರ್ಮಾಣ ಪ್ರಗತಿಯಲ್ಲಿದೆ.

    ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣ ಯೋಜನೆ ಕುಂಠಿತ

    ಗಂಜಿಮಠದಲ್ಲಿ 93 ಕೋಟಿ ರೂ. ವೆಚ್ಚದಲ್ಲಿ ಉದ್ದೇಶಿಸಿರುವ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣ ಯೋಜನೆ ಕಾರ್ಯಾರಂಭಗೊಳಿಸುವುದೇ ಪ್ರಸ್ತುತ ಸವಾಲಾಗಿದೆ. ಈ ಯೋಜನೆ ಪೂರ್ಣ ಪ್ರಮಾಣದಲ್ಲಿ ಕಾರ್ಯಗತವಾದರೆ ಜಿಲ್ಲೆಯಲ್ಲಿ 10 ಸಾವಿರಕ್ಕೂ ಅಧಿಕ ಉದ್ಯೋಗ ಸೃಷ್ಟಿಯಾಗಲಿದೆ. ಈ ಯೋಜನೆಗೆ ಅನುಮೋದನೆ ದೊರಕಿದ್ದರೂ ಅನುದಾನ ಬಿಡುಗಡೆಗೆ ನೂತನ ಸರ್ಕಾರ ಮನಸ್ಸು ಮಾಡಬೇಕಾಗಿದೆ.

    ಆರ್ಥಿಕ ಉತ್ತೇಜನಕ್ಕಿರುವ ಸವಾಲುಗಳು

    ಜಿಲ್ಲೆಯ ಪ್ರಮುಖ ವಾಣಿಜ್ಯ, ಬಂದರು ಮತ್ತು ಕೈಗಾರಿಕೆಗಳನ್ನು ಹೊಂದಿರುವ ಕ್ಷೇತ್ರವಿದು. ಅಭಿವೃದ್ಧಿಗೆ ಹೆಚ್ಚಿನ ಅವಕಾಶವಿರುವ ಕ್ಷೇತ್ರಕ್ಕೆ ಅನುದಾನವೂ ದೊಡ್ಡ ಪ್ರಮಾಣದಲ್ಲಿ ನಿರೀಕ್ಷಿಸಲಾಗುತ್ತಿದೆ. ಹೈಟೆಕ್ ಮಾದರಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ 500 ಕೋಟಿ ರೂ. ಅವಶ್ಯಕತೆಯಿದೆ. ಮೂಲಸೌಕರ್ಯವಿಲ್ಲದೆ ಬಳಲುತ್ತಿರುವ ಸುರತ್ಕಲ್-ಪಣಂಬೂರು ಬೀಚ್ ಅಭಿವೃದ್ಧಿಯಾಗಬೇಕಿದೆ. ಕೈಗಾರಿಕಾ ವಲಯದ ಉತ್ತೇಜನಕ್ಕೆ ಅವಕಾಶ ಇದ್ದರೂ ಕಾನೂನು ತೊಡಕು ಇದ್ದು, ನಿವಾರಣೆಯಾಗಬೇಕು. ಐಟಿ-ಬಿಟಿ ಸಂಸ್ಥೆಗಳಿಗೆ ಸಾಕಷ್ಟು ಅವಕಾಶವಿದ್ದರೂ ಕೋಮು ಸಂಘರ್ಷದ ಭೀತಿ ಇದೆ. ಮೀನುಗಾರಿಕಾ ಉದ್ಯಮ ಅಭಿವೃದ್ಧಿಗೆ ಬೋಟ್, ಹಡಗು ಲಂಗರಿಗೆ ಮೂಲಸೌಕರ್ಯ ಕೊರತೆ ಎದ್ದು ಕಾಣುತ್ತಿದೆ. ದೊಡ್ಡ ದೊಡ್ಡ ಕಂಪನಿಗಳಿದ್ದರೂ ಸ್ಥಳೀಯರಿಗೆ ಉದ್ಯೋಗ ಸಿಗುತ್ತಿಲ್ಲ. ಈ ಕುರಿತು ಹೋರಾಟಗಳು ನಡೆದರೂ ಪ್ರಯೋಜನ ಶೂನ್ಯವಾಗಿದೆ. ಸರ್ಕಾರ, ಜನಪ್ರತಿನಿಧಿಗಳು ಈ ಕುರಿತು ಗಮನ ಹರಿಸಬೇಕಿದೆ.

    ಮಂಗಳೂರು ಉತ್ತರ ಕ್ಷೇತ್ರದ ಮೂಲಸೌಕರ್ಯ, ಪ್ರವಾಸೋದ್ಯಮ, ಕೈಗಾರಿಕಾ ವಲಯದ ಸಮಗ್ರ ಅಭಿವೃದ್ಧಿಗೆ 5 ಸಾವಿರ ಕೋಟಿ ರೂ.ಗಿಂತ ಅಧಿಕ ಅನುದಾನ ಅಗತ್ಯ ಇದೆ. ಕಳೆದ 5 ವರ್ಷದಲ್ಲಿ ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ಕ್ಷೇತ್ರದಲ್ಲಿ ಅಗತ್ಯ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದೆ. ಮುಂದೆಯೂ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪುಗೊಳ್ಳುತ್ತಿದೆ.
    – ಡಾ. ಭರತ್ ವೈ. ಶೆಟ್ಟಿ, ಶಾಸಕ, ಮಂಗಳೂರು ಉತ್ತರ

    ಕಳೆದ 5 ವರ್ಷಗಳಿಂದೀಚೆಗೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಹೆಚ್ಚಿನ ಅಭಿವೃದ್ಧಿ ಆಗಿದೆ. ಕೇಂದ್ರ, ರಾಜ್ಯ ಹಾಗೂ ಸ್ಥಳೀಯವಾಗಿ ಒಂದೇ ಪಕ್ಷ ಅಧಿಕಾರ ಇದ್ದುದರಿಂದ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಂದಿದೆ. ಮುಂದೆ ಸ್ಥಳೀಯ ಮತ್ತು ರಾಜ್ಯದಲ್ಲಿ ಬೇರೆ ಬೇರೆ ಪಕ್ಷ ಅಧಿಕಾರದಲ್ಲಿ ಇರುವುದರಿಂದ ಈ ಹಿಂದಿಗಿಂತ ಹೆಚ್ಚಿನ ಅನುದಾನ ಬರುವುದು ಅನುಮಾನ. ಪ್ರವಾಸೋದ್ಯಮ, ಮೀನುಗಾರಿಕೆ, ಬಂದರು, ಮೂಲಭೂತ ಸೌಕರ್ಯ ಕ್ಷೇತ್ರ ಅಭಿವೃದ್ಧಿ ಕಾಣಬೇಕಿದೆ.
    – ಭೋಜರಾಜ್, ಮಂಗಳೂರು


    ಎಂಎನ್‌ಜಿ ಮೇ 20 ಕುಳಾಯಿ:
    ಕುಳಾಯಿ ಮೀನುಗಾರಿಕಾ ಜೆಟ್ಟಿ ಕಾಮಗಾರಿಗೆ ಚಾಲನೆ ದೊರೆತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts