More

    ಮಂಗಳೂರು ವಿವಿ ಇಬ್ಭಾಗ, ಚಿಕ್ಕಳುವಾರದಲ್ಲಿ ಕೊಡಗು ವಿವಿ ಸ್ಥಾಪನೆ

    ಶ್ರವಣ್ ಕುಮಾರ್ ನಾಳ ಪುತ್ತೂರು
    ಮಡಿಕೇರಿ, ದಕ್ಷಿಣ ಕನ್ನಡ, ಉಡುಪಿ ವ್ಯಾಪ್ತಿಯನ್ನು ಒಳಗೊಂಡ ರಾಜ್ಯದ ಪ್ರತಿಷ್ಠಿತ ಮಂಗಳೂರು ವಿಶ್ವವಿದ್ಯಾಲಯ ಇಬ್ಭಾಗವಾಗಿ ಕೊಡಗು ವಿಶ್ವವಿದ್ಯಾಲಯ ಎಂಬ ಹೊಸ ವಿವಿ ಅಸ್ತಿತ್ವಕ್ಕೆ ಬರಲಿದ್ದು, ಘೋಷಣೆಯಷ್ಟೇ ಬಾಕಿ ಇದೆ!

    ಹಂಪನಕಟ್ಟೆ ವಿವಿ ಕಾಲೇಜು, ಮಡಿಕೇರಿ ಎಫ್‌ಎಂಕೆ ಕಾಲೇಜು, ಕೊಣಾಜೆ ವಿವಿ ಪ್ರಥಮದರ್ಜೆ ಕಾಲೇಜು, ನೆಲ್ಯಾಡಿ ವಿವಿ ಘಟಕ ಕಾಲೇಜು, ಉಡುಪಿ ಬನ್ನಡ್ಕ ವಿವಿ ಘಟಕ ಕಾಲೇಜುಗಳನ್ನೊಳಗೊಂಡ ಮಂಗಳೂರು ವಿವಿ ವ್ಯಾಪ್ತಿಯಲ್ಲಿ 200ಕ್ಕೂ ಅಧಿಕ ಪದವಿ ಕಾಲೇಜು, 50ಕ್ಕೂ ಅಧಿಕ ಸ್ನಾತಕೋತ್ತರ ಪದವಿ ಕಾಲೇಜು, ಕೇರಳ ಹಾಗೂ ಕರ್ನಾಟಕ ರಾಜ್ಯಾದಂತ 100ಕ್ಕೂ ಅಧಿಕ ಸಂಶೋಧನಾ ಕೇಂದ್ರಗಳಿವೆ. ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಮಡಿಕೇರಿ ಭಾಗಕ್ಕೆ ಪ್ರತ್ಯೇಕ ವಿವಿ ಬೇಕೆಂದು ಆಗ್ರಹಿಸಿದ್ದರಿಂದ ಎರಡು ವರ್ಷದ ಹಿಂದೆ ಕೊಡಗು ವಿವಿ ಎಂಬ ಹೊಸ ವಿಶ್ವವಿದ್ಯಾಲಯ ಸ್ಥಾಪನೆಗಾಗಿ ರೂಪುರೇಷೆ ಸಿದ್ಧಪಡಿಸಲು ಸರ್ಕಾರ ಎರಡು ಕೋಟಿ ರೂ. ಬಿಡುಗಡೆ ಮಾಡಲು ಒಪ್ಪಿತ್ತು. ಇದೇ ಆಧಾರದಲ್ಲಿ ಆಡಳಿತಾತ್ಮಕ ದೃಷ್ಟಿಯಿಂದ ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ(ಎಫ್‌ಎಂಕೆ)ಕಾಲೇಜು ಕೇಂದ್ರವಾಗಿರಿಸಿ ಚಿಕ್ಕಳುವಾರದಲ್ಲಿ ಕೊಡಗು ವಿವಿ ಸ್ಥಾಪನೆಗೆ ಕಾರ್ಯಯೋಜನೆ ಅಂತಿಮ ಹಂತಕ್ಕೆ ತಲುಪಿದೆ.
    ವಿಶಾಲ ವ್ಯಾಪ್ತಿ ಹಾಗೂ ಯೋಗ್ಯ ನಿವೇಶನ ಇರುವುದರಿಂದ ಚಿಕ್ಕಳುವಾರದಲ್ಲಿರುವ ಮಂಗಳೂರು ವಿವಿ ಸ್ನಾತಕೋತ್ತರ ಹಾಗೂ ಸಂಶೋಧನಾ ಕೇಂದ್ರ ಮುಂದೆ ಕೊಡಗು ವಿವಿ ಕ್ಯಾಂಪಸ್ ಆಗಲಿದೆ. ಮಡಿಕೇರಿಯಲ್ಲಿರುವ ಮಂಗಳೂರು ವಿವಿ ಅಧೀನದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಮುಂದೆ ಕೊಡಗು ವಿವಿ ಆಡಳಿತ ಕೇಂದ್ರವಾಗಲಿದೆ. ಇಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಸ್ಥಾನ ಗುರುತಿಸುವ ಕಾರ್ಯವೂ ನಡೆಯುತ್ತಿದೆ. ಮಂಗಳೂರು ವಿವಿ ಅಧೀನದಲ್ಲಿರುವ ವಿವಿಧ ಅಧ್ಯಯನ ಪೀಠಗಳನ್ನೂ ಹೊಸ ವಿವಿಗೆ ಹಸ್ತಾಂತರಿಸುವ ಕಾರ್ಯವೂ ಇದೆ.

    ವ್ಯಾಪ್ತಿ ಎಷ್ಟು?
    ಕೊಡಗು ವಿವಿ ಅಸ್ತಿತ್ವಕ್ಕೆ ಬಂದರೆ ಸಂಪಾಜೆ, ಕೊಡಗು ಹಾಗೂ ಮೈಸೂರು ಭಾಗದ ಬಹುತೇಕ ಕಾಲೇಜುಗಳನ್ನು ಮಂಗಳೂರು ವಿವಿ ಕಳೆದುಕೊಳ್ಳಲಿದೆ. ಮುಖ್ಯವಾಗಿ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು, ಚಿಕ್ಕಳುವಾರದಲ್ಲಿರುವ ಮಂಗಳೂರು ವಿವಿ ಸ್ನಾತಕೋತ್ತರ ಹಾಗೂ ಸಂಶೋಧನಾ ಕೇಂದ್ರ ಸೇರಿದಂತೆ 6 ಸರ್ಕಾರಿ ಕಾಲೇಜು, 16 ಸಂಯೋಜಿತ ಕಾಲೇಜು, 8 ಸ್ನಾತಕೋತ್ತರ, ಸಂಶೋಧನಾ ಕೇಂದ್ರ ಮಂಗಳಗಂಗೋತ್ರಿಯಿಂದ ಹೊರಗುಳಿಯಲಿದೆ.

    ಕೊಡಗಿನಲ್ಲಿ ಹೊಸ ವಿಶ್ವವಿದ್ಯಾಲಯ ಸ್ಥಾಪನೆಗೆ ಶಾಸಕ ಅಪ್ಪಚ್ಚು ರಂಜನ್ ಸರ್ಕಾರದ ಮಟ್ಟದಲ್ಲಿ ಯೋಜನೆ ರೂಪಿಸುತ್ತಿದ್ದು, ಸರ್ಕಾರದಿಂದ ವಿವಿ ಸ್ಥಾಪನೆಗೆ ಎರಡು ಕೋಟಿ ರೂ. ಅನುದಾನದ ಭರವಸೆ ನೀಡಲಾಗಿದೆ. ನೂತನ ವಿವಿಗಾಗಿ ಚಿಕ್ಕಳುವಾರದಲ್ಲಿರುವ ಮಂಗಳೂರು ವಿವಿ ಸ್ನಾತಕೋತ್ತರ, ಸಂಶೋಧನಾ ಕೇಂದ್ರ ಅಥವಾ ಮಡಿಕೇರಿ ಎಫ್‌ಎಂಕೆ ಕಾಲೇಜು ಸೂಕ್ತ ಸ್ಥಳ. ಯಾವುದಕ್ಕೂ ಸರ್ಕಾರದ ಮಟ್ಟದಲ್ಲಿ ಇದಕ್ಕೆ ಕಾರ್ಯಯೋಜನೆ ನಡೆಯಬೇಕಿದೆ.
    ಪ್ರೊ.ಪಿ.ಎಸ್ ಯಡಪಡಿತ್ತಾಯ, ಉಪಕುಲಪತಿ ಮಂಗಳೂರು ವಿಶ್ವವಿದ್ಯಾಲಯ, ಮಂಗಳಗಂಗೋತ್ರಿ

    ಉನ್ನತ ಶಿಕ್ಷಣ ಹಾಗೂ ಸಂಶೋಧನೆಗಾಗಿ ಕೊಡಗು ವಿಶ್ವವಿದ್ಯಾಲಯ ಸೇರಿದಂತೆ ಹೊಸ ವಿವಿ ಸ್ಥಾಪನೆಗೆ ಸರ್ಕಾರ ಚಿಂತನೆ ನಡೆಸಿದ್ದು, ವಿವಿ ಸ್ಥಾಪನೆಗೆ ಬೇಕಾದ ಸೂಕ್ತ ಕ್ರಮಗಳ ಬಗ್ಗೆ ಈಗಾಗಲೇ ಚರ್ಚಿಸಲಾಗಿದೆ. ಸೂಕ್ತ ವ್ಯವಸ್ಥೆ ಹಾಗೂ ಅಗತ್ಯತೆ ಆಧಾರದಲ್ಲಿ ಈಬಗ್ಗೆ ಸರ್ಕಾರದ ಮಟ್ಟದಲ್ಲಿ ಕೊಡಗು ವಿವಿ ಸ್ಥಾಪನೆ ಕ್ರಮ ಕೈಗೊಂಡು ಹೊಸ ವಿವಿ ಘೋಷಿಸಲಾಗುವುದು.
    ಡಾ.ಸಿ.ಎನ್.ಅಶ್ವತ್ಥ ನಾರಾಯಣ್,ಉನ್ನತ ಶಿಕ್ಷಣ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts