More

    ಅಡ್ಡದಾರಿಯಲ್ಲಿ ಅತಿಥಿ ಉಪನ್ಯಾಸಕರ ಆಯ್ಕೆ?: ಅರ್ಹತೆ ಇದ್ದವರನ್ನು ಪರಿಗಣಿಸದೆ ಹಳಬರ ಪುನರಾಯ್ಕೆ ಮಾಡಿದ ಮಂಗಳೂರು ವಿವಿ

    ಶ್ರವಣ್‌ಕುಮಾರ್ ನಾಳ ಮಂಗಳೂರು
    ಪಿಎಚ್.ಡಿ -ಬೋಧನಾನುಭವ ಇದ್ದರೂ ಮಂಗಳೂರು ವಿಶ್ವವಿದ್ಯಾಲಯವು ಅತಿಥಿ ಉಪನ್ಯಾಸಕರ ಆಯ್ಕೆಯಿಂದ ಕೈಬಿಟ್ಟು ಅರ್ಹತೆ ಇಲ್ಲದ ಶೇ.70ರಷ್ಟು ಅತಿಥಿ ಉಪನ್ಯಾಸಕರನ್ನು ಸದ್ದಿಲ್ಲದೆ ಮರುನೇಮಕಗೊಳಿಸಿದೆ.

    ಮಂಗಳೂರು ವಿವಿ ಹಾಗೂ ವಿವಿ ನೇರ ಒಡೆತನದ ಕಾಲೇಜು- ಪಿಜಿ ಸೆಂಟರ್, ಸ್ನಾತಕೋತ್ತರ, ಸಂಶೋಧನಾ ಕೇಂದ್ರಗಳ ಒಟ್ಟು 37 ವಿಭಾಗಗಳಿಗೆ 248 ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಗೆ ಅಕ್ಟೋಬರ್‌ನಲ್ಲಿ ಮಂಗಳೂರು ವಿವಿ ಕುಲಸಚಿವರು ಪ್ರಕಟಣೆ ಹೊರಡಿಸಿದ್ದರು. ಯುಜಿಸಿ, ಎನ್‌ಇಟಿ, ಎಸ್‌ಎಲ್‌ಇಟಿ, ಪಿಎಚ್.ಡಿ, ಎಂ.ಫಿಲ್ ಅರ್ಹತೆ ಹೊಂದಿರುವವರಿಗೆ ಆಯ್ಕೆಯಲ್ಲಿ ಆದ್ಯತೆ ನೀಡಲಾಗುವುದು ಎಂದೂ ತಿಳಿಸಲಾಗಿತ್ತು.

    ಅದರಂತೆ ನ.2ರಿಂದ 10ರ ವರೆಗೆ ವಿವಿಧ ವಿಭಾಗದ ಅತಿಥಿ ಉಪನ್ಯಾಸಕರ ಆಯ್ಕೆಗಾಗಿ ಸಂದರ್ಶನ ನಡೆದಿದೆ. ಇದರಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಸಾವಿರದಷ್ಟು ಅಭ್ಯರ್ಥಿಗಳು ಭಾಗವಹಿಸಿದ್ದರು. ಯುಜಿಸಿ, ಎನ್‌ಇಟಿ, ಎಸ್‌ಎಲ್‌ಇಟಿ, ಪಿಎಚ್.ಡಿ, ಎಂ.ಫಿಲ್ ಅರ್ಹತೆ ಹೊಂದಿರುವ, ಹಲವು ವರ್ಷ ಬೋಧನೆಯ ಅನುಭವ ಹೊಂದಿರುವ ನೂರಾರು ಮಂದಿ ಇದ್ದರು. ಆದರೆ ಈ ಹಿಂದೆ ವಿವಿಯಲ್ಲಿ ಕರ್ತವ್ಯ ನಿರ್ವಹಿಸಿದ ಕೇವಲ ಸ್ನಾತಕೋತ್ತರ ಪದವಿ ಹೊಂದಿದವರನ್ನೇ ಮರು ನೇಮಕ ಮಾಡಿಕೊಳ್ಳಲಾಗಿದೆ ಎಂಬುದು ಅಭ್ಯರ್ಥಿಗಳ ಆರೋಪ.

    ಕಾಟಾಚಾರಕ್ಕೆ ಸಂದರ್ಶನ: ಈ ಬಾರಿಯ ಸಂದರ್ಶನದಲ್ಲಿ ಹಿಂದೆ ಸೇವೆ ಸಲ್ಲಿಸುತ್ತಿದ್ದ 232 ಅತಿಥಿ ಉಪನ್ಯಾಸಕರ ಸಹಿತ 950ಕ್ಕೂ ಅಧಿಕ ಅಭ್ಯರ್ಥಿಗಳು ಭಾಗವಹಿಸಿದ್ದರು. ಈ ಹಿಂದೆ ಸೇವೆ ಸಲ್ಲಿಸುತ್ತಿದ್ದ 61 ಅಭ್ಯರ್ಥಿಗಳು ಮಾತ್ರ ಯುಜಿಸಿ, ನೆಟ್, ಸ್ಲೆಟ್, ಪಿಎಚ್.ಡಿ ಅರ್ಹತೆ ಹೊಂದಿದ್ದು, ಇತರರು ಕೇವಲ ಸ್ನಾತಕೋತ್ತರ ಪದವಿ ಅರ್ಹತೆಯವರು.

    ಈ ಬಾರಿ ಸಂದರ್ಶನದ ಎದುರಿಸಿದ 307 ಅಭ್ಯರ್ಥಿಗಳಲ್ಲಿ ನೆಟ್, ಸ್ಲೆಟ್, ಪಿಎಚ್.ಡಿ ಅರ್ಹತೆ ಇತ್ತು. ಆದರೆ ವಿವಿ ಕುಲಸಚಿವ ಪ್ರೊ. ಕಿಶೋರ್ ಕುಮಾರ್ ನೇತೃತ್ವದಲ್ಲಿ ನಡೆಸಲಾದ ಸಂದರ್ಶನದಲ್ಲಿ ಈ ಹಿಂದೆ ಸೇವೆ ಸಲ್ಲಿಸುತ್ತಿದ್ದ 232 ಅಭ್ಯರ್ಥಿಗಳನ್ನೇ ಮರು ಆಯ್ಕೆ ಮಾಡಲಾಗಿದೆ. ಇತರ ನೆಟ್, ಸ್ಲೆಟ್, ಪಿಎಚ್.ಡಿ ಅಭ್ಯರ್ಥಿಗಳಿದ್ದರೂ ಅವರನ್ನು ಪರಿಗಣಿಸಿಲ್ಲ.

    ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಅತಿಥಿ ಉಪನ್ಯಾಸಕರು ಮೇಲಧಿಕಾರಿಗಳ ಮೇಲೆ ಪ್ರಭಾವ ಬೀರಿ ಹುದ್ದೆ ಉಳಿಸಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

    40 ಸಾವಿರ ರೂ. ವೇತನ: ಮಂಗಳೂರು ವಿ.ವಿ ಸಿಂಡಿಕೇಟ್ ಸಭೆಯ ನಿರ್ಣಯದಂತೆ ನೆಟ್/ಸ್ಲೆಟ್/ಪಿಎಚ್‌ಡಿ ಅರ್ಹತೆ ಹೊಂದಿದ್ದರೆ ಗರಿಷ್ಠ 16 ಗಂಟೆ ತರಗತಿ ನಡೆಸುವ ಪೂರ್ಣಕಾಲಿಕ ಅತಿಥಿ ಉಪನ್ಯಾಸಕ ಎಂಬ ನೆಲೆಯಲ್ಲಿ 40 ಸಾವಿರ ರೂ. ವೇತನ ನಿಗದಿಪಡಿಸಲಾಗಿದೆ. ನೆಟ್/ಸೆಟ್/ಪಿಎಚ್‌ಡಿ ಅರ್ಹತೆ ಇರದೆ ಸ್ನಾತಕೋತ್ತರ ಪದವಿ ಮಾತ್ರ ಹೊಂದಿದ್ದರೆ 16 ಗಂಟೆ ತರಗತಿಗೆ 35 ಸಾವಿರ ರೂ. ವೇತನ ನಿಗದಿಪಡಿಸಲಾಗಿದೆ. 14 ಗಂಟೆಗಿಂತ ಕಡಿಮೆ ಅಂದರೆ ಪೂರ್ಣಕಾಲಿಕ ಅತಿಥಿ ಉಪನ್ಯಾಸಕರಲ್ಲದವರಿಗೆ ಪ್ರತಿ ತರಗತಿಗೆ 1500 ರೂ. ವೇತನ ವಿವಿ ನಿಗದಿಪಡಿಸಲಾಗಿತ್ತು.

    ಈ ಬಾರಿಯ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆ ಬಗ್ಗೆ ಹೆಚ್ಚೇನೂ ಮಾಹಿತಿ ಇಲ್ಲ. ನನ್ನ ಸಹಿತ ಕುಲಸಚಿವರ ಗಮನದಲ್ಲೇ ಈ ಬಾರಿಯ ಅತಿಥಿ ಉಪನ್ಯಾಸಕರ ಆಯ್ಕೆ ನಡೆದಿದೆ. ಆಯ್ಕೆ ಪ್ರಕ್ರಿಯೆ ಬಗ್ಗೆ ಗೊಂದಲ ಇದೆ. ಈ ಬಗ್ಗೆ ವಿಚಾರಿಸಿ ಸರಿಪಡಿಸುವ ಕಾರ್ಯ ಮಾಡಲಾಗುವುದು.
    – ಪ್ರೊ.ಯಡಪಡಿತ್ತಾಯ, ಕುಲಪತಿ, ಮಂಗಳೂರು ವಿಶ್ವವಿದ್ಯಾಲಯ

    ವಿವಿ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯಲ್ಲಿ ಭಾರಿ ದೊಡ್ಡ ಗೋಲ್ಮಾಲ್ ಆಗಿದೆ. ಮಂಗಳೂರು ವಿವಿಯಿಂದ ಇತ್ತೀಚೆಗೆ ಅತಿಥಿ ಉಪನ್ಯಾಸಕರ ಆಯ್ಕೆ ನಡೆದಿದ್ದು, ಪಿಎಚ್.ಡಿ ಸಹಿತ ಬೋಧನಾನುಭವ ಇದ್ದರೂ ಆಯ್ಕೆ ಪ್ರಕ್ರಿಯೆಯಿಂದ ಹಲವರನ್ನು ಹೊರಗಿಟ್ಟು ಕೇವಲ ಮಾಸ್ಟರ್ ಡಿಗ್ರಿ ಹೊಂದಿದ ಬಹುತೇಕ ಅಭ್ಯರ್ಥಿಗಳನ್ನೇ ಮರು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ತನಿಖೆಗೆ ಆಗ್ರಹಿಸಲಾಗುವುದು.
    – ಯು.ಟಿ. ಖಾದರ್, ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ

    ನಾನು ನೆಟ್ ಕ್ಲೀಯರ್ ಮಾಡಿದ್ದೇನೆ, ಪಿಎಚ್.ಡಿ ಆಗಿದೆ. 12 ಪುಸ್ತಕ ಪ್ರಕಟಿಸಿದ್ದೇನೆ, ಬೋಧನೆಯ ಅನುಭವವಿದೆ. ಆದರೂ ನನ್ನನ್ನು ಆಯ್ಕೆ ಮಾಡಿಲ್ಲ. ನನ್ನಂತೆ ಅರ್ಹತೆ ಹೊಂದಿರುವ ಹಲವರು ಅರ್ಜಿ ಹಾಕಿದ್ದು, ಅವರೂ ಆಯ್ಕೆಯಾಗಿಲ್ಲ. ಕೇವಲ ಪಿಜಿ ಮುಗಿಸಿದವರನ್ನು ಆಯ್ಕೆ ಮಾಡಿದ್ದಾರೆ. ಹೀಗೆ ಮಾಡುವುದಾದರೆ ಅತಿಥಿ ಉಪನ್ಯಾಸಕರ ಹುದ್ದೆ ನೇಮಕಕ್ಕೆ ಅರ್ಜಿ ಆಹ್ವಾನಿಸುವುದಾದರೂ ಯಾಕೆ?
    – ಹೆಸರು ಹೇಳಲಿಚ್ಛಿಸದ ಅಭ್ಯರ್ಥಿ, ಪುತ್ತೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts